Tuesday 7 May 2013

ಒಕ್ಕಲಿಗರ ಮತ್ತು ವೀರಶೈವರ ಪಾಳೇಗಾರಿಕೆ ಕೊನೆಯಾಗಲಿ; ದಲಿತ ನಾಯಕನೊಬ್ಬ ಈ ರಾಜ್ಯದ ಮುಖ್ಯಮಂತ್ರಿಯಾಗಲಿ!





      ಅದು 1970ರ ದಶಕ. ಕರ್ಪೂರಿ ಠಾಕೂರ್ ಎಂಬ ಕ್ಷೌರಿಕ ಸಮುದಾಯಕ್ಕೆ ಸೇರಿದ ಜನನಾಯಕ ಸಮಾಜವಾದಿ ಪಕ್ಷವನ್ನು ಅಧಿಕಾರಕ್ಕೇರಿಸಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ಕಾಲ. ಅದೊಮ್ಮೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಮ್‌ಮನೋಹರ್ ಲೋಹಿಯಾ ಕರ್ಪೂರಿ ಠಾಕೂರ್‌ರೊಂದಿಗೆ ಮುಂಜಾವಿನಲ್ಲಿ ವಾಕ್ ಹೊರಟಿದ್ದಾಗ ರಸ್ತೆ ಬದಿಯಲ್ಲಿ ಬಂಡೆ ಕೆಲಸ ಮಾಡುತ್ತಿದ್ದ (ನಮ್ಮಲ್ಲಿ ಅವರನ್ನು ಕಲ್ಲು ಒಡೆಯುವವರು ಅಥವಾ ಕಲ್ಲು ವಡ್ಡರು ಎಂದು ಕರೆಯುತ್ತಾರೆ) ಹೆಣ್ಣುಮಗಳೊಬ್ಬಳನ್ನು ನೋಡಿದರು. ಲೋಹಿಯಾ ಆಕೆಯ ಪೂರ್ವಾಪರ ವಿಚಾರಿಸಿದಾಗ ಆಕೆಯ ಹೆಸರು ಭಗೀರತಿ ದೇವಿ ಎಂದೂ ಹಾಗೂ ಆಕೆ ರಾಜಕೀಯವಾಗಿ ಎಂದೂ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗದ, ಯಾವ ವೋಟ್‌ಬ್ಯಾಂಕ್ ಕೂಡಾ ಹೊಂದಿಲ್ಲದ ತಳಸಮುದಾಯಕ್ಕೆ ಸೇರಿದವಳು ಎಂದು ತಿಳಿಯುತ್ತದೆ. ಲೋಹಿಯಾ ತಮ್ಮ ಜೊತೆಯಲ್ಲಿದ್ದ ಕರ್ಪೂರಿ ಠಾಕೂರ್‌ಗೆ ಆಕೆಯ ಹೆಸರನ್ನು ಬರೆದಿಟ್ಟುಕೊಳ್ಳಲು ಹೇಳುತ್ತಾರೆ. ಹಾಗೆಯೇ ಮಾಡಿದ ಠಾಕೂರ್‌ಗೆ ಮುಂಬರುವ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಆಕೆಗೆ ಟಿಕೆಟ್ ನೀಡುವಂತೆ ಸೂಚಿಸುತ್ತಾರೆ. ಸೂಕ್ಷ್ಮ ಸಮುದಾಯಗಳ ಕುರಿತು ಅಪಾರ ಕಾಳಜಿ ಹೊಂದಿದ್ದ ಲೋಹಿಯಾರ ತಕ್ಷಣದ ಪ್ರತಿಕ್ರಿಯೆ ಇದು, ಇದೆಲ್ಲಾ practically ಆಗದ ಹೋಗದ ಮಾತು ಎಂದುಕೊಂಡ ಠಾಕೂರ್ ಆ ವಿಷಯವನ್ನು ಅಲ್ಲಿಗೇ ಮರೆತು ಬಿಡುತ್ತಾರೆ. ಆದರೆ ಚುನಾವಣೆ ಸಮಯದಲ್ಲಿ ಲೋಹಿಯಾ ಮತ್ತೆ ಭಗೀರತಿ ದೇವಿಯನ್ನು ನೆನಪಿಸಿ, ಆಕೆಗೆ ಟಿಕೆಟ್ ನೀಡುವುದಷ್ಟೇ ಅಲ್ಲದೆ, ಆಕೆಯನ್ನು ಗೆಲ್ಲಿಸುವುದೂ ಕೂಡಾ ನಿಮ್ಮದೇ ಜವಾಬ್ದಾರಿ ಎಂದು ಕರ್ಪೂರಿ ಠಾಕೂರ್‌ಗೆ ಸೂಚಿಸುತ್ತಾರೆ. ಬಂಡೆ ಕೆಲಸ ಮಾಡುತ್ತಿದ್ದ ಬಿಹಾರದ ಅನಾಮಧೇಯ ಹೆಣ್ಣುಮಗಳೊಬ್ಬಳು ದಿನ ಬೆಳಗಾಗುವಷ್ಟರಲ್ಲಿ ವಿಧಾನಸಭಾ ಸದಸ್ಯೆಯಾಗುತ್ತಾರೆ ಮತ್ತು ಮುಂದೆ ಲೋಕಸಭೆಗೂ ಆಯ್ಕೆಯಾಗಿ ಪಾರ್ಲಿಮೆಂಟ್ ಪ್ರವೇಶಿಸುತ್ತಾರೆ. ಬಿಹಾರದಲ್ಲಿ ಕ್ರಾಂತಿಯೊಂದು ಸದ್ದಿಲ್ಲದೇ ನಡೆದುಹೋಗುತ್ತದೆ.


     ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ನಡೆದ ಘಟನೆ ಇದು. ಜಿಲ್ಲಾ ಕೇಂದ್ರವೊಂದರ ಅತಿಥಿ ಗೃಹದಲ್ಲಿ ತಂಗಿದ್ದ ಅರಸು, ಬೆಳಿಗ್ಗೆ ಊರ ಸುತ್ತಾಟಕ್ಕೆಂದು ಹೊರಡುತ್ತಾರೆ. ದಾರಿಯಲ್ಲಿ ಅವರಿಗೆ ಅನಕ್ಷರಸ್ಥನಾದ ವ್ಯಕ್ತಿಯೊಬ್ಬ ಸಿಗುತ್ತಾನೆ. ಆತ ಎಲ್ಲಿಯೂ ನೆಲೆ ನಿಲ್ಲದ, ಊರಿಂದ ಊರಿಗೆ ಅಲೆಯುವ, ಮತದಾರರ ಪಟ್ಟಿಯಲ್ಲಿ ಹೆಸರು ಕೂಡಾ ಹೊಂದಿಲ್ಲದ, ಜನಗಣತಿಯಿಂದಲೂ ಹೊರಗಿಡಲ್ಪಟ್ಟ ಅಲೆಮಾರಿ ಸಮುದಾಯಕ್ಕೆ ಸೇರಿದವನೆಂದು ತಿಳಿದ ಅರಸು, ಆತನ ಸಮುದಾಯದಲ್ಲಿ ಯಾರದರೂ ಅಕ್ಷರಸ್ಥರಿದ್ದರೆ ತನ್ನನ್ನು ಬಂದು ಅತಿಥಿಗೃಹದಲ್ಲಿ ಭೇಟಿಯಾಗುವಂತೆ ತಿಳಿಸಲು ಸೂಚಿಸುತ್ತಾರೆ. ಅರಸುರವರ ಅಚ್ಚರಿಗೆ, ಆ ಇಡೀ ಸಮುದಾಯದಲ್ಲಿ ಕೇವಲ ಒಬ್ಬ ಪದವೀಧರ ಮಾತ್ರ ಸಿಗುತ್ತಾನೆ. ಆದರೆ ಆತನಾದರೋ ಕಾನೂನು ಅಭ್ಯಾಸ ಮಾಡಿ ಇನ್ನೂ ಕೆಲಸಕ್ಕಾಗಿ ಪರದಾಡುತ್ತಿರುವ ನಿರುದ್ಯೋಗಿ. ಆತನನ್ನು ಪ್ರದೇಶ ಕಾಂಗ್ರೆಸ್ ಕಛೇರಿಗೆ ಕರೆದೊಯ್ಯುವ ಅರಸು ಆತನನ್ನು ಯುವ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ನೇಮಿಸಿರುವುದಾಗಿ ಘೋಷಿಸುತ್ತಾರೆ. ಅದುವರೆಗೆ ನಡೆದುಬಂದಿದ್ದ ವೋಟ್‌ಬ್ಯಾಂಕ್ ಮತ್ತು ಜಾತಿ ರಾಜಕೀಯದ ಪರಂಪರೆಯನ್ನು ಮುರಿದ ಅರಸು ಕೆಳಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನಿಗೆ ಪಕ್ಷದ ಅತ್ಯುನ್ನತ ಹುದ್ದೆಯೊಂದನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತಾರೆ.

     ಇವತ್ತು ಕರ್ನಾಟಕದ ರಾಜಕಾರಣ ಎಂತಹ ಹೀನಾತಿಹೀನ ಪರಿಸ್ಥಿತಿ ತಲುಪಿದೆಯೆಂದರೆ, ಈ ಘಟನೆಗಳೆಲ್ಲವೂ ನಿಮಗೆ mythಗಳಂತೆ ತೋರಬಹುದು. ಕರ್ನಾಟಕದ ರಾಜಕಾರಣದಲ್ಲಿ ಅಲ್ಲಿಯವರೆಗೆ ಪ್ರಾಬಲ್ಯ ಮೆರೆಯುತ್ತಾ ಬಂದಿದ್ದ ಒಕ್ಕಲಿಗ ಮತ್ತು ವೀರಶೈವ ಎಂಬ ಎರಡು ಪ್ರಬಲ ಜಾತಿಗಳಿಗೆ ಮಣ್ಣುಮುಕ್ಕಿಸಿ, ತುಳಿತಕ್ಕೊಳಗಾದ ಜಾತಿ, ವರ್ಗಗಳಿಗೆ ಸಾಮಾಜಿಕ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡಿದ ಕೀರ್ತಿ ಅರಸುರವರಿಗೆ ಸಲ್ಲಬೇಕು.  ಕರ್ನಾಟಕ ಏಕಿಕರಣವಾಗುವ ಮುಂಚೆ ವೀರಶೈವರು ಹೆಚ್ಚಿನ ಸಂಖ್ಯೆಯಲ್ಲಿದ್ದ ಜಿಲ್ಲೆಗಳು ಮುಂಬೈ ಮತ್ತು ಹೈದರಾಬಾದ್ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದವು. ಈಗಿನ ದಕ್ಷಿಣ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಒಳಗೊಂಡಿದ್ದ ಮೈಸೂರು ರಾಜ್ಯದಲ್ಲಿ ಆಗ ಒಕ್ಕಲಿಗರೇ ಬಹುಸಂಖ್ಯಾತರು.
ಆ ಕಾರಣಕ್ಕಾಗಿಯೇ 1947ರಿಂದ 1956ರಲ್ಲಿ ಕರ್ನಾಟಕ ಏಕೀಕರಣವಾಗುವವರೆಗೆ ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ ಎಂಬ ಒಕ್ಕಲಿಗ ನಾಯಕರು ಕರ್ನಾಟಕವನ್ನು ಆಳಿದರು. ಏಕೀಕರಣವಾಗುವವರೆಗೆ ವೀರಶೈವರ ರಾಜಕೀಯ ಶಕ್ತಿ ಮೈಸೂರು, ಮುಂಬೈ ಮತ್ತು ಹೈದರಾಬಾದ್ ಪ್ರಾಂತ್ಯಗಳ ನಡುವೆ ಹಂಚಿ ಹೋಗಿತ್ತು. ಬಿ.ಡಿ.ಜತ್ತಿ ಮುಂಬೈ ಸರ್ಕಾರದಲ್ಲಿ ಉಪಮಂತ್ರಿಯಾಗಿದ್ದು ಹೊರತುಪಡಿಸಿದರೆ ವೀರಶೈವರು ರಾಜಕೀಯ ಸ್ಥಾನಮಾನಗಳಿಂದ ವಂಚಿತರಾಗಿಯೇ ಇದ್ದರು. 1956ರಲ್ಲಿ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ಮೈಸೂರಿನಲ್ಲಿ ವಿಲೀನವಾದ ನಂತರ ಒಕ್ಕಲಿಗರನ್ನು ಹಿಂದಿಕ್ಕಿ ವೀರಶೈವರು ಹೊಸ ರಾಜಕೀಯ ಶಕ್ತಿಯಾಗಿ ರೂಪುಗೊಂಡರು. 1956ರಿಂದ 1971ರವರೆಗೆ ಹದಿನೈದು ವರ್ಷಗಳ ಕಾಲ ವೀರಶೈವರ ರಾಜ್ಯಭಾರ ಮುಂದುವರಿಯಿತು. ಈ ಅವಧಿಯಲ್ಲಿ ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ ಮತ್ತು ವೀರೇಂದ್ರ ಪಾಟೀಲ್ ಮೈಸೂರಿನ ಮುಖ್ಯಮಂತ್ರಿಗಳಾಗಿದ್ದರು. ಈ ಜಾತಿ ಪ್ರಾಬಲ್ಯಕ್ಕೆ ತಡೆ ಬಿದ್ದಿದ್ದು ಹಿಂದುಳಿದ ವರ್ಗಕ್ಕೆ ಸೇರಿದ ಡಿ.ದೇವರಾಜ ಅರಸು 1972ರಲ್ಲಿ ಮೈಸೂರಿನ ಮುಖ್ಯಮಂತ್ರಿಯಾದಾಗ. ಒಂದೆಡೆ ಅರಸು ಸೂಕ್ಷ್ಮಾತಿಸೂಕ್ಷ್ಮ ಜಾತಿಗಳ ನಾಯಕರನ್ನು ಗುರುತಿಸಿ ಮುಂಚೂಣಿಗೆ ತಂದರು. ಇನ್ನೊಂದೆಡೆ "ಉಳುವವನೇ ಭೂಮಿಯ ಒಡೆಯ" ಎಂಬ ಘೋಷಣೆಯೊಂದಿಗೆ ಭೂಸುಧಾರಣೆಯನ್ನು ಜಾರಿಗೆ ತಂದು ಏಕಕಾಲಕ್ಕೆ ಒಕ್ಕಲಿಗರ ಮತ್ತು ವೀರಶೈವರ ಸಂಪನ್ಮೂಲಕ್ಕೇ ಕೊಡಲಿ ಪೆಟ್ಟು ಹಾಕಿದರು. ಬಹುಶಃ ಅರಸು ಮುಖ್ಯಮಂತ್ರಿಯಾಗದೇ ಹೋಗಿದ್ದರೆ, ಇವತ್ತಿಗೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಎಂದರೆ ಅದು ಒಕ್ಕಲಿಗರ ಮತ್ತು ವೀರಶೈವರ ಆಸ್ತಿ ಎಂಬ feudal ಮನಸ್ಥಿತಿಯೇ ಮುಂದುವರೆಯುತ್ತಿತ್ತು. ಇವತ್ತಿಗೂ ಕಾಂಗ್ರೆಸ್‌ನಲ್ಲಿರುವ ಹಿಂದುಳಿದ ಮತ್ತು ದಲಿತ ವರ್ಗದ ಹಲವು ನಾಯಕರು ಅರಸು ಗರಡಿಯಲ್ಲಿ ತಯಾರಾದವರೇ. 1988ರಿಂದ ಕರ್ನಾಟಕ ರಾಜಕೀಯದಲ್ಲಿ ಮತ್ತೊಂದು ಅಧ್ಯಾಯ ಆರಂಭವಾಯಿತು. 1988ರಿಂದ ಇಲ್ಲಿಯವರೆಗೆ ಈ ಇಪ್ಪತ್ತೈದು ವರ್ಷಗಳಲ್ಲಿ ಆರು ವರ್ಷಗಳನ್ನು ಹೊರತುಪಡಿಸಿದರೆ (ಬಂಗಾರಪ್ಪ, ಮೊಯ್ಲಿ ಮತ್ತು ಧರಂ ಸಿಂಗ್‌ರ ಅವಧಿಗಳು) ಮತ್ತೆ ಒಕ್ಕಲಿಗರು ಮತ್ತು ವೀರಶೈವರೇ ಅಧಿಕಾರವನ್ನು ಹಂಚಿಕೊಂಡಿದ್ದಾರೆ.

     ಈ ಜಾತಿ ರಾಜಕಾರಣ ಅತ್ಯಂತ ಅಸಹ್ಯ ಹುಟ್ಟಿಸುವ ಸ್ಥಿತಿ ತಲುಪಿದ್ದು 2008ರಲ್ಲಿ ಬಿಜೆಪಿ ಅಧಿಕಾರಕ್ಕೇರಿದ ನಂತರ. ಒಂದೆಡೆ ಬಿಜೆಪಿ ಹಿಂದೂಗಳೆಲ್ಲಾ ಒಂದಾಗಬೇಕು ಎಂಬ ತನ್ನ ಹಿಂದುತ್ವದ ಪುಂಗಿ ಊದುತ್ತದೆ. ಇನ್ನೊಂದೆಡೆ LKG(ಲಿಂಗಾಯತ, ಕುರುಬ, ಗೌಡ) ಎಂಬ ಫಾರ್ಮುಲಾದ ಹೆಸರಿನಲ್ಲಿ ರಾಜ್ಯದಲ್ಲಿ ಸಂಖ್ಯೆಯಲ್ಲಿ ಬಲಾಢ್ಯರಾದ ಲಿಂಗಾಯತ, ಕುರುಬ ಮತ್ತು ಗೌಡರ ನಡುವೆಯೇ ಎಲ್ಲಾ ಅಧಿಕಾರವನ್ನು ಹಂಚಿ ಕೈತೊಳೆದುಕೊಂಡುಬಿಡುತ್ತದೆ. ಹಾಗಾದರೆ ಬಿಜೆಪಿಯ ದೃಷ್ಠಿಯಲ್ಲಿ ಕೇವಲ ಲಿಂಗಾಯತರು ಮತ್ತು ಒಕ್ಕಲಿಗರು ಮಾತ್ರ ಹಿಂದೂಗಳೇ? ದಲಿತರು ಹಿಂದೂಗಳಲ್ಲವೇ? ಬಿಜೆಪಿಯಿಂದಲೇ ಆರಿಸಿಬಂದ ದಲಿತ ಶಾಸಕರೊಬ್ಬರ ಮೇಲೆ ಅವರ ಸ್ವಕ್ಷೇತ್ರದಲ್ಲಿಯೇ ಹಲ್ಲೆಯಾಯಿತು. ಅದು ಸುದ್ಧಿಯಾಗಲೇ ಇಲ್ಲ. ಶಾಸಕರದ್ದೇ ಈ ಪಾಡಾದರೆ ಇನ್ನು ಸಾಮಾನ್ಯ ದಲಿತರ ಗತಿಯೇನು? ಬಿಜೆಪಿಯ ಈ ಹಿಪಾಕ್ರಸಿಯನ್ನು ಅದರ ಮಾತೃಸಂಸ್ಥೆ ಆರೆಸ್ಸೆಸ್ ಮತ್ತು ಅದರ ಪೂರ್ವಾಶ್ರಮದ ಪಕ್ಷವಾದ ಭಾರತೀಯ ಜನಸಂಘದಲ್ಲಿಯೂ ನೋಡಬಹುದಿತ್ತು. 87 ವರ್ಷಗಳ ಸುದೀರ್ಘ ಇತಿಹಾಸವಿರುವ ಆರೆಸ್ಸೆಸ್‌ನ ಸರಸಂಘಚಾಲಕ ಹುದ್ದೆಯನ್ನು ಅಲಂಕರಿಸಿದವರ ಪಟ್ಟಿಯನ್ನೊಮ್ಮೆ ನೋಡಿ. ಕೆ.ಬಿ.ಹೆಡ್ಗೆವಾರ್‌ರಿಂದ ಹಿಡಿದು ಡಾ.ಮೋಹನ್ ಭಾಗ್ವತ್‌ರವರೆಗೆ ಅಲ್ಲಿ ಬ್ರಾಹ್ಮಣರು ಮತ್ತು ರಜಪೂತರು ಬಿಟ್ಟರೆ ಮತ್ತಾರೂ ಕಣ್ಣಿಗೆ ಕಾಣುವುದೇ ಇಲ್ಲ. ಆರೆಸ್ಸೆಸ್‌ ಸರಸಂಘಚಾಲಕರಾದ ಮಹನೀಯರೆಲ್ಲರ ಬಗ್ಗೆ ನನಗೆ ಅತೀವ ಗೌರವವಿದೆ. ಅವರ ಸಿದ್ಧಾಂತಗಳನ್ನು ಒಪ್ಪದೇ ಹೋದರೂ ಅವರ ದೇಶಪ್ರೇಮ, ಪ್ರಾಮಾಣಿಕತೆ ಮತ್ತು ತಾವು ನಂಬಿದ ತತ್ವದೆಡೆಗಿನ ನಿಷ್ಠೆಯನ್ನು ನಾವೆಲ್ಲರೂ ಗೌರವಿಸಲೇಬೇಕು. ಆದರೆ ಅಖಂಡ ಭಾರತದಾದ್ಯಂತ ಶಾಖೆಗಳನ್ನು ಹೊಂದಿರುವ, ಲಕ್ಷಾಂತರ ಸ್ವಯಂಸೇವಕರಿರುವ ಸಂಸ್ಥೆಯೊಂದಕ್ಕೆ ಈ 87 ವರ್ಷಗಳಲ್ಲಿ ಇಷ್ಟೇ ಪ್ರಾಮಾಣಿಕತೆ, ದೇಶಪ್ರೇಮ ಹೊಂದಿರುವ ದಲಿತ ವ್ಯಕ್ತಿಯೊಬ್ಬರು ಸರಸಂಘಚಾಲಕ ಹುದ್ದೆಗೆ ಸಿಗದೇ ಹೋದದ್ದು ಆಶ್ಚರ್ಯ ಹುಟ್ಟಿಸುತ್ತದೆ. ಆರೆಸ್ಸೆಸ್‌ನದೇ ರಾಜಕೀಯ ಮುಖವಾದ ಜನಸಂಘ ಮತ್ತು ಅದರ ಮುಂದುವರಿಕೆಯಾದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದವರ ಪಟ್ಟಿಯನ್ನೊಮ್ಮೆ ಓದಿ ನೋಡಿ. ಶ್ಯಾಮ್‌ಪ್ರಸಾದ್ ಮುಖರ್ಜಿಯವರಿಂದ ಹಿಡಿದು ವಾಜಪೇಯಿವರೆಗೆ, ದೀನ್‌ದಯಾಳ್ ಉಪಾಧ್ಯಾಯರಿಂದ ನಿತಿನ್ ಗಡ್ಕರಿಯವರೆಗೆ ಅಲ್ಲಿ 90 ಪರ್ಸೆಂಟ್ ಬ್ರಾಹ್ಮಣರೇ ಕಾಣುತ್ತಾರೆ. ಇನ್ನುಳಿದ 10 ಪರ್ಸೆಂಟನ್ನೂ ಕೂಡಾ ರಜಪೂತ, ನಾಯ್ಡು ಮತ್ತು ಕಾಯಸ್ಥರಂತ ಮೇಲ್ಜಾತಿ ನಾಯಕರೇ ತುಂಬಿದ್ದಾರೆ (ಬಂಗಾರು ಲಕ್ಷ್ಮಣ್ ಹೊರತುಪಡಿಸಿ).
ಇವತ್ತಿಗೂ ಬಿಜೆಪಿ ಸುಧಾರಿಸಿದಂತೆ ಕಾಣುತ್ತಿಲ್ಲ. ಅದರ ಕೇಂದ್ರ ನಾಯಕರನ್ನೊಮ್ಮೆ ನೋಡಿ, ಇವತ್ತಿನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ರಜಪೂತರು, ಸಂಸದೀಯ ಮಂಡಳಿಯ ಅಧ್ಯಕ್ಷ, ಲೋಕಸಭೆ ಮತ್ತು ರಾಜ್ಯಸಭೆಗಳ ವಿರೋಧ ಪಕ್ಷಗಳ ನಾಯಕರು, ಪ್ರಧಾನ ಕಾರ್ಯದರ್ಶಿ ಮತ್ತು ನಿಕಟಪೂರ್ವ ಅಧ್ಯಕ್ಷರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಬಿಜೆಪಿ ಹಿಂದಿನಿಂದಲೂ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಶೂದ್ರ ನಾಯಕರನ್ನು ಏಣಿಯಂತೆ ಬಳಸಿಕೊಂಡು ಅಧಿಕಾರ ಸಿಕ್ಕ ಮೇಲೆ ಏಣಿಯನ್ನು ಒದೆಯುವುದನ್ನು ಮಾಡುತ್ತಲೇ ಬಂದಿದೆ. ಉತ್ತರಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ಮೋಸಹೋದರೆ, ಗುಜರಾತ್‌ನಲ್ಲಿ ಶಂಕರ್ ಸಿಂಗ್ ವಘೇಲಾ ಬಲಿಪಶುವಾದರು. ಕರ್ನಾಟಕದ ಯಡಿಯೂರಪ್ಪ ಇದಕ್ಕೊಂದು ಹೊಸ ಸೇರ್ಪಡೆ. ಅವರ ಭ್ರಷ್ಟಾಚಾರ ಕೇವಲ ನೆಪ ಅಷ್ಟೇ. ನಿಜ ಹೇಳಬೇಕೆಂದರೆ ಯಡಿಯೂರಪ್ಪ ಸರ್ಕಾರದಲ್ಲಿ ಎಲ್ಲರೂ ತಿಂದರು. ನರಿಗಳೆಲ್ಲಾ ಬೆಣ್ಣೆ ತಿಂದು ಕೋತಿಯ ಮೂತಿಗೆ ಒರೆಸಿದ ಹಾಗೆ ಎಲ್ಲಾ ಅನಿಷ್ಟಗಳನ್ನು ಯಡಿಯೂರಪ್ಪ ತಲೆಗೆ ಕಟ್ಟಿದರು. ನರಿಗಳೆಲ್ಲರೂ ಈಗಲೂ ಬಿಜೆಪಿಯಲ್ಲೇ ಇದ್ದಾರೆ, ಪಾಪ ಕೋತಿಯಾದವರು ಮಾತ್ರ ಯಡಿಯೂರಪ್ಪ!

     ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರವನ್ನಾದರೂ ಕ್ಷಮಿಸಬಹುದು. ಆದರೆ ತನ್ನ ಪ್ರಚಾರಕರಿಗೆ ಉಗ್ರ ಬ್ರಹ್ಮಚರ್ಯವನ್ನು ಭೋದಿಸುವ ಸಂಘದ ರಾಜಕೀಯ ಮುಖವಾದ ಪಕ್ಷವೊಂದು ಕಳೆದ ಐದು ವರ್ಷಗಳಲ್ಲಿ ಏನೇನು ಮಾಡಿತು ಎನ್ನುವುದನ್ನೊಮ್ಮೆ ನೆನಪಿಸಿಕೊಳ್ಳಿ. ಶಾಸಕರೊಬ್ಬರ ಪತ್ನಿ ದೂರದ ದೆಹಲಿಯಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದರು. ಈಗ ಅದೇ ಶಾಸಕರ ಲೈಂಗಿಕ ಕ್ರಿಯೆಯ ಸಿಡಿ ಬಿಡುಗಡೆಯಾಗಿದೆ, ಮಂತ್ರಿಯೊಬ್ಬರು ಗೆಳೆಯನ ಹೆಂಡತಿಯ ಮೇಲೆಯೇ ಅತ್ಯಾಚಾರ ನಡೆಸಿದರು, ಸಚಿವರು ಸದನದಲ್ಲಿಯೇ ನೀಲಿಚಿತ್ರ ವೀಕ್ಷಿಸಿದರು, ಇನ್ನೊಬ್ಬ ಸಚಿವ ತನ್ನ ಗೆಳತಿಗೆ ಮುತ್ತಿಕ್ಕುತ್ತಿರುವ ಚಿತ್ರಗಳು ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದವು, ಮಲ್ಪೆಯ ರೇವ್ ಪಾರ್ಟಿಯಲ್ಲಿ ದಕ್ಷಿಣ ಕನ್ನಡದ ಸಂಭಾವಿತ ಜನರ ಕಣ್ಣೆದುರೇ ಹಾಡುಹಗಲಿನಲ್ಲೇ ನಡೆಯಬಾರದ್ದೆಲ್ಲಾ ನಡೆದುಹೋಯಿತು. ದುರಂತವೆಂದರೆ ಇವತ್ತಿಗೂ ತಾನು ಮಾಡಿದ ತಪ್ಪುಗಳ ಕುರಿತು ಬಿಜೆಪಿಗೆ ಪಶ್ಚಾತ್ತಾಪವಿಲ್ಲ. ಪಶ್ಚಾತ್ತಾಪವಿದ್ದಿದ್ದರೆ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಬ್ಲೂಬಾಯ್ಸ್‌ಗೆ ಟಿಕೆಟ್ ನೀಡುತ್ತಿರಲಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತ ಶಾಸಕರಿಗೆ ಟಿಕೆಟ್ ನೀಡುವುದಿಲ್ಲ ಎಂದು ಪ್ರಾಮಾಣಿಕತೆಯ ಮುಖವಾಡ ಹಾಕಿದ ಬಿಜೆಪಿ ನಾಯಕರು ಅದೇ ಭ್ರಷ್ಟಾಚಾರಿಗಳ ಸಂಬಂಧಿಕರಿಗೆ ಟಿಕೆಟ್ ನೀಡಿ ನಂಬಿಕೆ ದ್ರೋಹ ಎಸಗಿದ್ದಾರೆ.
ಇದಕ್ಕಿಂತಲೂ ಸೋಜಿಗವೆಂದರೆ ಆರೆಸ್ಸೆಸ್ ಇದನ್ನೆಲ್ಲಾ ನೋಡಿಯೂ ನೋಡದಂತೆ ಕಣ್ಣು ಮುಚ್ಚಿಕೊಂಡು ಕುಳಿತಿರುವುದು. ಆರೆಸ್ಸೆಸ್ ನಾಯಕರನ್ನು ಕೇಳಿನೋಡಿ, "ನಾವು ಬಿಜೆಪಿಯ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ. ನಮ್ಮದೇನಿದ್ದರೂ ಅವರು ಕೇಳಿದಾಗ ಸಲಹೆ ಸೂಚನೆ ನೀಡುವ ಕೆಲಸ ಮಾತ್ರ" ಎನ್ನುತಾರೆ. ಇದನ್ನೆಲ್ಲಾ ಜನ ನಂಬಬೇಕಾ? ಜಿನ್ನಾ ಕುರಿತು ಸಾಂಧರ್ಭಿಕವಾಗಿ ನಾಲ್ಕು ಮಾತನಾಡಿದ ಮಾತ್ರಕ್ಕೇ ಐವತ್ತು ವರ್ಷಗಳ ರಾಜಕೀಯ ಅನುಭವವಿರುವ ನಾಯಕನನ್ನು ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಬದಿಗೆ ಸರಿಸಿ ಆ ಜಾಗಕ್ಕೆ ಕಾರ್ಪೊರೇಟ್ ವ್ಯಕ್ತಿಯೊಬ್ಬನನ್ನು ನೇಮಿಸಿದವರು ಯಾರು?, ನಿತಿನ್ ಗಡ್ಕರಿಯನ್ನು ಇನ್ನೊಂದು ಅವಧಿಗೆ ಅಧ್ಯಕ್ಷರನ್ನಾಗಿ ಮುಂದುವರೆಸಲು ಬಿಜೆಪಿಯ ಸಂವಿಧಾನವನ್ನೇ ತಿದ್ದಿದವರು ಯಾರು?, ಜಸ್ವಂತ್ ಸಿಂಗ್‌ರನ್ನು ಪಕ್ಷದಿಂದ ಹೊರಕ್ಕೆ ಅಟ್ಟಿದವರು ಯಾರು? ಉತ್ತರ ಇಡೀ ದೇಶಕ್ಕೇ ಗೊತ್ತಿದೆ. ಆರೆಸ್ಸೆಸ್‌ಗೆ ಬಿಜೆಪಿಯ ಮೇಲೆ ನಿಯಂತ್ರಣವಿಲ್ಲ ಎಂದು ಒಪ್ಪಿಕೊಳ್ಳುವುದು, ಸೋನಿಯಾ ಗಾಂಧಿಗೆ ಯುಪಿಎ ಸರ್ಕಾರದ ಮೇಲೆ ನಿಯಂತ್ರಣವಿಲ್ಲ ಎಂದು ಒಪ್ಪಿಕೊಂಡಷ್ಟೇ ಆತ್ಮವಂಚನೆಯ ಕೆಲಸ.

     ಇನ್ನು ವಿಕಾಸವೇ ಗುರಿ, ಬಿಜೆಪಿಯೇ ದಾರಿ ಎನ್ನುತ್ತಿರುವ ಬಿಜೆಪಿಗರು ಮಾಡಿರುವ ವಿಕಾಸವಾದರೂ ಏನು? ಸರ್ಕಾರದ ದುಡ್ಡನ್ನು ಮಠಗಳಿಗೆ ಹಂಚಿದ್ದು, ಜನರನ್ನು ಮೆಚ್ಚಿಸಲು ಮಹಾತ್ವಾಕಾಂಕ್ಷೆ, ದೂರದೃಷ್ಠಿ ಇಲ್ಲದ ಬೇಜವಾಬ್ದಾರಿ ಯೋಜನೆಗಳನ್ನು ನೀಡಿದ್ದು ಬಿಟ್ಟರೆ ಬಿಜೆಪಿ ಮತ್ತೇನು ಮಾಡಿದೆ? ವಿಧಾನಸೌಧ ಕಟ್ಟಿಸಿದ್ದಕ್ಕಾಗಿ ಕೆಂಗಲ್ ಹನುಮಂತಯ್ಯನವರನ್ನು, ಏಕೀಕರಣಕ್ಕಾಗಿ ನಿಜಲಿಂಗಪ್ಪರನ್ನು, ಬೊಕ್ಕಸ ತುಂಬಿಸಿದ್ದಕ್ಕಾಗಿ ವೀರೇಂದ್ರ ಪಾಟೀಲರನ್ನು, ಭೂಸುಧಾರಣೆಗಾಗಿ ಅರಸುರನ್ನು, ಆಲಮಟ್ಟಿ ಆಣೆಕಟ್ಟೆ ಕಟ್ಟಿದ್ದಕ್ಕಾಗಿ ದೇವೇಗೌಡರನ್ನು, ಅಧಿಕಾರ ವಿಕೇಂದ್ರಿಕರಣಕ್ಕಾಗಿ ರಾಮಕೃಷ್ಣ ಹೆಗಡೆಯವರನ್ನು, ಬಡವರಿಗೆ ಮನೆ ಕಟ್ಟಿಕೊಟ್ಟಿದ್ದಕ್ಕಾಗಿ ಬಂಗಾರಪ್ಪನವರನ್ನು, ಬೆಂಗಳೂರನ್ನು ಏಷ್ಯಾದ ಐಟಿ ರಾಜಧಾನಿ ಮಾಡಿದ್ದಕ್ಕಾಗಿ ಎಸ್.ಎಂ.ಕೃಷ್ಣರನ್ನು ಕರ್ನಾಟಕ ಸದಾಕಾಲವೂ ನೆನಪಿಟ್ಟುಕೊಳ್ಳುತ್ತದೆ. ಯಾವ ಸಾಧನೆಗಾಗಿ ಯಡಿಯೂರಪ್ಪ, ಸದಾನಂದಗೌಡ ಮತ್ತು ಶೆಟ್ಟರ್‌ರನ್ನು ನೆನಪಿಸಿಕೊಳ್ಳಬೇಕು ನೀವೇ ಹೇಳಿ?



     ನಾನೇನೂ ಕಾಂಗ್ರೆಸ್ಸನ್ನು ಬೆಂಬಲಿಸಲು ಇದನ್ನೆಲ್ಲಾ ಬರೆಯುತ್ತಿಲ್ಲ. ಭ್ರಷ್ಟಾಚಾರದ ವಿಷಯಕ್ಕೆ ಬಂದರೆ ಕಾಂಗ್ರೆಸ್ ಬಿಜೆಪಿಯ ಇನ್ನೊಂದು ಮುಖ ಅಷ್ಟೇ. ಆದರೆ ಹಿಂದುಳಿದ ವರ್ಗದವನೊಬ್ಬ ಅಥವಾ ದಲಿತನೊಬ್ಬ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದರೆ ಅದು ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಸಾಧ್ಯ! ಮೇಲ್ವರ್ಗಗಳಿಗೆ ಅಧಿಕಾರ ಹಂಚುವ ಬಿಜೆಪಿಯ ನಕಲಿ ಹಿಂದುತ್ವ ಮತ್ತು ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್‌ನ ನಕಲಿ ಸೆಕ್ಯುಲರಿಸಂ ನಡುವೆ ಆಯ್ಕೆ ಬಂದರೆ ನಾನು ಕಾಂಗ್ರೆಸ್ಸನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಡಬಹುದು. ಅಲ್ಲಿ ನಲವತ್ತು ವರ್ಷಗಳಿಂದ ರಾಜಕೀಯ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಒಂದರ ಹಿಂದೊಂದರಂತೆ ಅತ್ಯುತ್ತಮ ಬಜೆಟ್‌ಗಳನ್ನು ಮಂಡಿಸಿದ ಖ್ಯಾತಿಯ ಸಿದ್ಧರಾಮಯ್ಯ ಇದ್ದಾರೆ. ಬಿ.ಎಲ್.ಶಂಕರ್, ಜಯಚಂದ್ರ, ಕೃಷ್ಣ, ಪ್ರೊ.ಬಿಕೆಸಿ, ಸುದರ್ಶನ್‌ರಂತಹ ಥಿಂಕ್‌ಟ್ಯಾಂಕ್‌ಗಳಿದ್ದಾರೆ. ನೆನಪಿಡಿ ಖರ್ಗೆಯಾಗಲಿ, ಸಿದ್ಧರಾಮಯ್ಯ, ಪರಮೇಶ್ವರ್‌ರಾಗಲೀ ಎಲ್ಲರೂ ಅಧಿಕಾರವನ್ನು ಅನುಭವಿಸಿದವರೇ. ಆದರೆ ಬಿಜೆಪಿ ನಾಯಕರಂತೆ ಯಾರೂ ಕೂಡಾ ಕೈ, ಬಾಯಿ ಕೆಡಿಸಿಕೊಳ್ಳಲಿಲ್ಲ. ಜೆಡಿ(ಎಸ್), ಬಿಜೆಪಿ ನಾಯಕರಂತೆ ರೆಸಾರ್ಟ್ ರಾಜಕೀಯ, ಮೈನಿಂಗ್ ಮಾಫಿಯಾ ಮಾಡಿದ್ದರೆ ಸಿದ್ಧರಾಮಯ್ಯ ಮತ್ತು ಖರ್ಗೆ ಯಾವತ್ತಿಗೋ ಈ ರಾಜ್ಯದ ಮುಖ್ಯಮಂತ್ರಿಯಾಗಿರುತ್ತಿದ್ದರು. ಇವರಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಕರ್ನಾಟಕದ ಗ್ರಹಣ ಬಿಡಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ರಾಜ್ಯದಲ್ಲಿ ಒಕ್ಕಲಿಗ-ವೀರಶೈವರ ಪಾಳೇಗಾರಿಕೆ ಕೊನೆಯಾಗಿ ಹೊಸ ಮನ್ವಂತರವೊಂದು ಶುರುವಾಗಲಿದೆ. ಹಾಗೆ ಯೋಚಿಸಿದರೆ ಕೆಳವರ್ಗಗಳನ್ನು ಮೇಲೆತ್ತುವುದೇ ನಿಜವಾದ ಹಿಂದುತ್ವ ಅಲ್ಲವೇ? ಯೋಚಿಸಿ ನೋಡಿ.