Wednesday 8 April 2015

ಜಾಗತೀಕರಣ ಅನ್ನೋ ಜಂಕ್ ಫುಡ್ಡು ತಿಂದು, ಅದು ಕೊಡೋ ಕೊಲೆಸ್ಟ್ರಾಲು ಮಾತ್ರ ಬೇಡ ಅಂದ್ರೆ ಹೇಗೆ?


ದೀಪಿಕಾ ಪಡುಕೋಣೆ #MyChoice ವಿಡಿಯೋದ ಮೂಲಕ ಮತ್ತೆ ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದಾರೆ. ವಿವಾಹಪೂರ್ವ ಲೈಂಗಿಕತೆ ನನ್ನ ಆಯ್ಕೆ. ವಿವಾಹದ ನಂತರವೂ ನಾನು ಇಚ್ಛಿಸುವ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಹೊಂದುತ್ತೇನೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. Women Empowerment ಎಂದರೆ ಇದೇ ನೋಡಿ ಎಂದು ತಮ್ಮ ಘನ ಸಂದೇಶ ನೀಡಿದ್ದಾರೆ. ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಮರ್ಯಾದಾ ಹತ್ಯೆಯಂತಹ ಪಿಡುಗುಗಳನ್ನು ಇನ್ನೂ  ಸಾಕಿಕೊಂಡಿರುವ ಭಾರತದಂತಹ ದೇಶಕ್ಕೆ, ದೀಪಿಕಾರ ಹೇಳಿಕೆ ಎಷ್ಟು ಅಸಂಬದ್ಧ ಮತ್ತು ಅಪ್ರಸ್ತುತ (irrelevant) ಎಂದು ಒಮ್ಮೆ ಯೋಚಿಸಿ ನೋಡಿ. ಇಷ್ಟಕ್ಕೂ ದೀಪಿಕಾ ತಮ್ಮ ವೈಯಕ್ತಿಕ ಆಯ್ಕೆಗಳ ಬಗ್ಗೆ ಸ್ಪಷ್ಟನೆ ನೀಡಬೇಕಾದದ್ದು ಸ್ವಲ್ಪ ಮಟ್ಟಿಗೆ ತನ್ನ ಪೋಷಕರಿಗೆ ಮತ್ತು ತಾನು ಮದುವೆಯಾಗಲಿರುವ ವ್ಯಕ್ತಿಗೆ ಮಾತ್ರ. ಆಕೆಯ ಬದುಕು ಸಂಪೂರ್ಣವಾಗಿ ಆಕೆಯದೇ ಆಯ್ಕೆ. ಅದನ್ನು ಯಾರೂ ಪ್ರಶ್ನಿಸಿಯೂ ಇರಲಿಲ್ಲ ಮತ್ತು ಪ್ರಶ್ನಿಸುವ ಹಕ್ಕು ಕೂಡಾ ಯಾರಿಗೂ ಇಲ್ಲ. ಹಾಗಾಗಿ ದೀಪಿಕಾ ತಮ್ಮ ವೈಯಕ್ತಿಕ ಸಂಗತಿಗಳನ್ನು ಜಗತ್ತಿನ ಮುಂದೆ ತೆರೆದಿಡುವ ಅಗತ್ಯವೇ ಇರಲಿಲ್ಲ. ಆದರೆ ಇವತ್ತು 12ರಿಂದ 18 ವರ್ಷ ವಯಸ್ಸಿನ ಸಾವಿರಾರು ಮಕ್ಕಳು ಬಾಲಿವುಡ್ ನಟ ನಟಿಯರ life styleನಿಂದ, ಅವರ ಚಿತ್ರಗಳಿಂದ, ಅವರ ಹೇಳಿಕೆಗಳಿಂದ ಪ್ರಭಾವಿತರಾಗುತ್ತಾರೆ. ಇದು ದೀಪಿಕಾರಂತಹ ಬುದ್ಧಿವಂತ ನಟಿಗೆ ತಿಳಿದಿದ್ದರಿಂದಲೇ ಒಂದಿಡೀ ತಲೆಮಾರನ್ನು influence ಮಾಡುವ ಉದ್ದೇಶದಿಂದಲೇ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

 

          ಈ ಕಾರಣಕ್ಕಾಗಿಯೇ ಇವತ್ತು ದೀಪಿಕಾ ಪಡುಕೋಣೆಗೂ, ನೈತಿಕ ಪೊಲೀಸ್‌ಗಿರಿಯಂತಹ ಕೆಲಸಗಳನ್ನು ಮಾಡುವ ಮೂಲಭೂತವಾದಿಗಳಿಗೂ (fundamentalists) ಯಾವ ವ್ಯತ್ಯಾಸವೂ ಕಾಣುತ್ತಿಲ್ಲ. ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಅಷ್ಟೇ. ಆದರೆ ಪ್ರತಿನಿಧಿಸುವ ಸಂಸ್ಕೃತಿಗಳು ಮಾತ್ರ ಬೇರೆ ಬೇರೆ. ಒಬ್ಬರು ಭಾರತೀಯ ಸಂಸ್ಕೃತಿಯ ಪುರಾತನ ಅವಷೇಶಗಳೂಂದಿಗೆ ಬದುಕುತ್ತಿದ್ದರೆ, ಇನ್ನೊಬ್ಬರು ಜಾಗತೀಕರಣದ ಮುಕ್ತದ್ವಾರದಿಂದ ತೂರಿಬಂದ ಅಮೆರಿಕನ್ ಸಂಸ್ಕೃತಿಯನ್ನು ಅಪ್ಪಿಕೊಂಡಿದ್ದಾರೆ. ಆದರೆ ಅಪಾಯಕಾರಿ ವಿಷಯವೆಂದರೆ ಇವರಿಬ್ಬರೂ ತಮ್ಮ ಅಭಿಪ್ರಾಯಗಳನ್ನು ಸಮುದಾಯದ ಮೇಲೆ ಹೇರಲು ಹೊರಟಿರುವುದು. ಹಿಂದೂ ಮತ್ತು ಮುಸ್ಲಿಮ್ ಸಂಪ್ರದಾಯವಾದಿಗಳು ನಾವು ಎಂದೋ ತ್ಯಜಿಸಿರುವ, ವಿದ್ಯಾವಂತರಾರೂ ಒಪ್ಪಿಕೊಳ್ಳಲಾಗದ ತಮ್ಮ ಓಬಿರಾಯನ ಕಾಲದ ವಿಚಾರಗಳನ್ನು ಒಂದಿಡೀ ಸಮಾಜದ ಮೇಲೆ ಒತ್ತಾಯಪೂರ್ವಕವಾಗಿ ಹೇರಲು ಹೊರಟಿರುವುದು ಅವರ ಮಾತು ಮತ್ತು ಕೃತಿಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅದೇ ರೀತಿ ದೀಪಿಕಾರಂತವರು ತಮ್ಮ ಖಾಸಗಿ ವಿಷಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ಹೊಸ ಪೀಳಿಗೆಯ ಹುಡುಗ ಹುಡುಗಿಯರಿಗೆ ಜಗದ್ಗುರುವಾಗಲು ಹೊರಟಿದ್ದಾರೇನೋ ಎನ್ನಿಸುತ್ತದೆ. ಹೇಗೆ ಸಂಪ್ರದಾಯವಾದಿಗಳ ನೈತಿಕ ಪೊಲೀಸ್‌ಗಿರಿಯಂತಹ ಪುಂಡಾಟಿಕೆಗಳು ಹೊಸ ತಲೆಮಾರಿನಲ್ಲಿ ದಿಗಿಲು, ಭಯ, ಆಕ್ರೋಶಗಳನ್ನು ಹುಟ್ಟಿಸುತ್ತದೆಯೋ ಅದೇ ರೀತಿ ದೀಪಿಕಾರ ಹೇಳಿಕೆಗಳು ಹಳೇ ತಲೆಮಾರಿನವರಲ್ಲಿ ಅದರಲ್ಲೂ ಮಕ್ಕಳ ಪೋಷಕರಲ್ಲಿ ಆತಂಕ, ಗಾಬರಿ ಹುಟ್ಟಿಸುತ್ತವೆ. Both fundamentalists and rationalists are creating cultural turbulences in Indian society. ಇವತ್ತು ಅಮೆರಿಕನ್ ಹುಡುಗಿಯೊಬ್ಬಳು live in relationshipನಲ್ಲಿದ್ದರೆ ಅದನ್ನು ಆಕೆಯ ತಂದೆತಾಯಿ ಕೂಡಾ casual ಆಗಿ ತೆಗೆದುಕೊಳ್ಳುವ ಮನಸ್ಥಿತಿ ಹೊಂದಿದ್ದಾರೆ. ಏಕೆಂದರೆ living together, stay over relationship ಇಂಥವುಗಳನ್ನು ಅಮೆರಿಕಾಕ್ಕೆ ಅಮೆರಿಕಾವೇ ಮುಕ್ತವಾಗಿ ಒಪ್ಪಿಕೊಂಡಿದೆ. ಆದರೆ ಭಾರತದ ಸ್ಥಿತಿ ಹೀಗಿಲ್ಲ. ಸ್ಕೂಲಿಗೆ ಹೋದ ಮಗಳು ಮನೆಗೆ ಬರುವುದು ಅರ್ಧ ಘಂಟೆ ತಡವಾದರೆ ತಂದೆ ತಾಯಿಯರ ಹೃದಯ ಬಾಯಿಗೆ ಬಂದಿರುತ್ತದೆ. ಭಾರತೀಯ ಮಧ್ಯಮ ವರ್ಗದ ಅಪ್ಪ ಅಮ್ಮಂದಿರ ತಲ್ಲಣಗಳು ದೀಪಿಕಾಳಂತಹ ಎಲೈಟ್ ಸೊಸೈಟಿಯ ಹುಡುಗಿಗೆ ಯವತ್ತಿಗೂ ಅರ್ಥವಾಗಲಾರದು.

 

            ಜಾಗತೀಕರಣದ ಮುಂಚೆ ಕೇವಲ ರಾಜಕೀಯವಾಗಿ ಮಾತ್ರ polarise ಆಗುತ್ತಿದ್ದ ನಾವು ಜಾಗತೀಕರಣದ ಪ್ರಭಾವದಿಂದಾಗಿ ಸಾಂಸ್ಕೃತಿಕವಾಗಿ ಕೂಡಾ polarise ಆಗುತ್ತಿದ್ದೇವೆ. ಯಾವ ಧಿಕ್ಕಿನಿಂದ ನೋಡಿದರೂ ಜಾಗತೀಕರಣ ಎರಡೆರಡು ಭಾರತಗಳನ್ನು ಸೃಷ್ಟಿಸುತ್ತಿದೆ. ಆರ್ಥಿಕ ದೃಷ್ಠಿಯಿಂದ ನೋಡಿದರೆ 20000ಕ್ಕೂ ಅಧಿಕ ಮಿಲಿಯನೇರ್‌ಗಳಿರುವ ಫೋರಂಗಳ, ಮಲ್ಟಿಪ್ಲೆಕ್ಸ್‌ಗಳ ಆಧುನಿಕ ಬದುಕಿನ ಸಕಲ ಸುಖ, ಸವಲತ್ತುಗಳೊಂದಿಗೆ ಕಂಗೊಳಿಸುತ್ತಿರುವ ಶ್ರೀಮಂತ ಭಾರತ ಒಂದು ಕಡೆಗಾದರೆ, ಅದರ ಮಗ್ಗುಲಲ್ಲೇ ಸ್ಲಮ್ಮುಗಳಲ್ಲಿ ಬದುಕುವ, ಒಂದು ಹೊತ್ತಿನ ಕೂಳಿಗೂ ದಿಕ್ಕಿಲ್ಲದ, ಬಡತನ, ನಿರಕ್ಷರತೆಗಳೇ ತಾಂಡವವಾಡುತ್ತಿರುವ ದರಿದ್ರ ಭಾರತವಿದೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಲೇ ಇದ್ದಾರೆ, ಬಡವರು ಮತ್ತಷ್ಟು ದರಿದ್ರರಾಗುತ್ತಿದ್ದಾರೆ. ಜಾಗತೀಕರಣದ ಮುಂಚೆಯೂ ಈ economical barrier ಇತ್ತು. ಆದರೆ ಜಾಗತೀಕರಣ ಈ ಕಂದಕವನ್ನು ಇನ್ನಷ್ಟು ದೊಡ್ಡದಾಗಿಸಿದೆ. ಅದೇ ರೀತಿ ಸಾಂಸ್ಕೃತಿಕ ದೃಷ್ಠಿಕೋನದಿಂದ ನೋಡಿದರೂ ಎರಡೆರಡು ಭಾರತಗಳು ಸೃಷ್ಠಿಯಾಗಿವೆ. ಸಾಮಾಜಿಕ ಬಹಿಷ್ಕಾರ, ಬೆತ್ತಲೆ ಮೆರವಣಿಗೆ, ಫತ್ವಾ, ಮರ್ಯಾದಾ ಹತ್ಯಾಗಳು ಪ್ರತಿನಿಧಿಸುವ ಭಾರತ ಒಂದು ದಿಕ್ಕಿಗಾದರೆ, online dating, living together, stay over relationshipಗಳ ಆಧುನಿಕ ಭಾರತ ಇನ್ನೊಂದು ದಿಕ್ಕಿನಲ್ಲಿ ನಡೆದಿದೆ. ಇದಕ್ಕೆಲ್ಲಾ ಜಾಗತೀಕರಣವನ್ನು ದೂರಿಯೂ ಪ್ರಯೋಜನವಿಲ್ಲ. Globalisation ಅನ್ನೋ ಜಂಕ್ ಫುಡ್ಡು ತಿಂದ ಮೇಲೆ, ಅದರ ಜೊತೆಗೇ ಬರುವ ಕೊಲೆಸ್ಟ್ರಾಲನ್ನೂ ನಗುನಗುತ್ತಲೇ ಸ್ವೀಕರಿಸಬೇಕಾಗುತ್ತದೆ!

 

          ಯಾವುದು ನಿರಂತರವಾಗಿ ಬದಲಾವಣೆಗೆ ಒಳಗಾಗುತ್ತಲೇ ಇರುತ್ತದೋ ಅದೇ ಸಂಸ್ಕೃತಿ. ಭಾರತೀಯ ಜೀವನ ವಿಧಾನ ಶ್ರೇಷ್ಠವೋ, ಅಮೆರಿಕನ್ life style ಮಿಗಿಲೋ ಎನ್ನುವ ಚರ್ಚೆ ಒತ್ತಟ್ಟಿಗಿರಲಿ. ದೀಪಿಕಾರ ಇಚ್ಛೆಯಂತೆ ನಾವು ನಮ್ಮ ಬೇರುಗಳನ್ನು ಕತ್ತರಿಸಿಕೊಂಡು ಅವರು ಒಪ್ಪಿಕೊಂಡಿರುವ ಸಂಸ್ಕೃತಿಯನ್ನೇ ನಾವೂ ಒಪ್ಪಿಕೊಳ್ಳಲು ತಯಾರಾದರೂ ಕೂಡಾ ಈ cultural transition ತುಂಬಾ ನಿಧಾನವಾಗಿ, ಯಾರಿಗೂ ಘಾಸಿಯಾಗದ ಹಾಗೆ ಆಗಬೇಕಾದದ್ದು. ನೀವು ಇದ್ದಕಿದ್ದ ಹಾಗೆ ಸಾವಿರಾರು ವರ್ಷಗಳಿಂದ ಬೇರೂರಿರುವ ಸಂಸ್ಕೃತಿಯೊಂದನ್ನು, ಸಂಪೂರ್ಣವಾಗಿ ಭಿನ್ನವಾದ ಇನ್ನೊಂದು ಸಂಸ್ಕೃತಿಯಿಂದ (ಅದು ನಿಮ್ಮ ದೃಷ್ಠಿಯಲ್ಲಿ ಎಷ್ಟೇ ಉನ್ನತವಾದದ್ದಾಗಿದ್ದರೂ) replace ಮಾಡಲು ಹೊರಟರೆ; ಭಾರತದಂತಹ ದೇಶದಲ್ಲಿ ಊಹೆಗೂ ನಿಲುಕದ ಅನಾಹುತಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. Women Empowerment ಬಗ್ಗೆ ನಿಮಗೆ ನಿಜವಾದ ಕಳಕಳಿಯಿದ್ದರೆ, ಕೇವಲ ಪುರುಷರಿಗಷ್ಟೇ ಮೀಸಲು ಎಂದುಕೊಂಡಿದ್ದ ಬಾಕ್ಸಿಂಗ್, ಐಪಿಎಸ್‌ನಂಥ ಕ್ಷೇತ್ರಗಳನ್ನು ಪ್ರವೇಶಿಸಿ ಜಗತ್ತೀ ನಿಬ್ಬೆರಗಾಗುವಂತಹ ಸಾಧನೆ ಮಾಡಿರುವ ಮೇರಿಕೋಮ್, ಕಿರಣ್ ಬೇಡಿಯಂಥವರಿದ್ದಾರೆ, ಅವರನ್ನೊಮ್ಮೆ ಮಾತನಾಡಿಸಿ ನೋಡಿ. ತಮ್ಮ ಮಕ್ಕಳ ಸ್ಕೂಲ್ ಫೀಸಿಗಾಗಿ ಬೆಂಗಳೂರಿನಂತಹ ಊರುಗಳಲ್ಲಿ ಬೆಳಿಗ್ಗೆಯಿಂದ, ಸಂಜೆಯವರೆಗೆ ಆಟೋ ಓಡಿಸುವ ಅಮ್ಮಂದಿರಿದ್ದಾರೆ, ಅವರನ್ನು ಜಗತ್ತಿಗೆ ಪರಿಚಯಿಸಿ. ಅವಕಾಶಗಳಿಗಾಗಿ ಹಾತೊರೆಯುತ್ತಿರುವ ಸಾವಿರಾರು ಹೆಣ್ಣುಮಕ್ಕಳು motivate ಆಗುತ್ತಾರೆ. ಇವತ್ತು ಭಾರತ ಮಹಿಳೆಯರ ಪಾಲಿಗೆ ಜಗತ್ತಿನಲ್ಲೇ ನಾಲ್ಕನೇ ಅತ್ಯಂತ ಅಪಾಯಕಾರಿ ದೇಶ. ಜಗತ್ತಿನ 40%ನಷ್ಟು ಬಾಲ್ಯ ವಿವಾಹಗಳು ಭಾರತದಿಂದ ವರದಿಯಾಗುತ್ತಿವೆ. 70%ನಷ್ಟು ಭಾರತೀಯ ಮಹಿಳೆಯರು ಕೌಟುಂಬಿಕ ಕಿರುಕುಳ ಅನುಭವಿಸುತ್ತಿದ್ದಾರೆ. National Records Bureau ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಪ್ರತಿ ಮೂರು ನಿಮಿಷಕ್ಕೊಂದು ಮಹಿಳೆಯರ ಮೇಲಿನ ಅಪರಾಧ ಘಟಿಸುತ್ತಿದೆ, ಪ್ರತಿ 29 ನಿಮಿಷಕ್ಕೊಂದು ಅತ್ಯಾಚಾರದ ಪ್ರಕರಣ ವರದಿಯಾಗುತ್ತಿದೆ ಮತ್ತು ಪ್ರತಿ 77 ನಿಮಿಷಕ್ಕೊಂದು ವರದಕ್ಷಿಣೆ ಕಾರಣಕ್ಕಾಗಿ ಹತ್ಯೆ ನಡೆಯುತ್ತಿದೆ. ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ (Trafficking), ಲೈಂಗಿಕ ಕಿರುಕುಳ (Sexual abuse), ಅತ್ಯಾಚಾರ (Sexual assault), ಹೆಣ್ಣು ಭ್ರೂಣ ಹತ್ಯೆ (Female infanticide), ವರದಕ್ಷಿಣೆ (dowry), ಕೌಟುಂಬಿಕ ಕಿರುಕುಳ (domestic violence), ಬಾಲ್ಯ ವಿವಾಹ (child marriage), ಆಸಿಡ್ ದಾಳಿ (acid throwing), ಇಂತಹ ಸಾವಿರಾರು ಸಮಸ್ಯೆಗಳನ್ನು ಹೊದ್ದು ಮಲಗಿರುವ ದೇಶ ಇದು. ಇದನ್ನೆಲ್ಲಾ ಬಿಟ್ಟು ಲೈಂಗಿಕ ಸ್ವಾತಂತ್ರ್ಯವೇ women empowerment ಎಂದು ನಿಮಗೇಕನ್ನಿಸಿತೋ ಗೊತ್ತಿಲ್ಲ. ಮುಕ್ತ ಲೈಂಗಿಕತೆಯೇ ನಾಗರೀಕತೆ ಎನ್ನುವುದಾದರೆ ನಾಯಿಯಷ್ಟು civillized ಪ್ರಾಣಿ ಯಾವುದಿದೆ ಹೇಳಿ. Valentines ದಿನ ಒಟ್ಟಾಗಿ ಕಾಣಿಸುವ ಹುಡುಗ ಹುಡುಗಿಯರನ್ನು ಮದುವೆ ಮಾಡಿಸುವ ಹಾಗೆ ನಾಳೆ ನಿಮ್ಮ ಹೆಸರಿನಲ್ಲಿ ಸೇನೆ, ದಳಗಳು ಹುಟ್ಟಿ ರಸ್ತೆಗಳಲ್ಲಿ ಸಿಗುವ ಜೋಡಿಗಳನ್ನು ಹೊತ್ತೊಯ್ದು, ವಿವಾಹೇತರ ಸಂಬಂಧಕ್ಕೆ ಒತ್ತಾಯ ಪಡಿಸದಿದ್ದರೆ ಸಾಕು!

 

 

 

Sunday 15 February 2015

ಪರಮ ನಾಸ್ತಿಕನಿಂದ ಪದುಮನಾಭನಿಗೊಂದು ಭಿನ್ನಹ!

 

(ಬಹುಶಃ ಭಕ್ತಿಗೀತೆಯೊಂದನ್ನು ಬರೆದ ಮೊದಲ ನಾಸ್ತಿಕ ನಾನೇ ಇರಬಹುದೇನೋ. ನಾಸ್ತಿಕ ಸಮುದಾಯ ನನ್ನ ಮೇಲೆ ಫತ್ವಾ ಹೊರಡಿಸದಿರಲಿ ಎಂಬ ಆಶಯದೊಂದಿಗೆ!!)


ನೀನಿರುವೆಯೋ ಇಲ್ಲವೋ ಅರಿಯದಾದೆ ಚಿನ್ಮಯ,
ಆದರೂ ನಿನ್ನ ಧ್ಯಾನದಲ್ಲೇ ನನ್ನ ಮನಸ್ಸು ತನ್ಮಯ!
ನೀನೇ ಸಿರಿ, ನೀನೇ ಹರಿ, ನೀನೇ ಶಕ್ತಿ, ನೀನು ಶಿವ
ನೀನೇ ತಾನೇ ವೀಣಾಪಾಣಿ, ನೀನೇ ಪದ್ಮಸಂಭವ!

ನೀನೇ ರಾತ್ರಿ, ನೀನೇ ಹಗಲು,
ಹಕ್ಕಿ ಕೊರಳು, ಕರೆವ ಮುಗಿಲು;
ಶರಧಿ ನೀನು, ಹೊಳೆಯೂ ನೀನೇ
ಮುಕ್ತಿದಾಯಕ ಮಾತ್ರವಲ್ಲ,
ಭಕ್ತ ಕೂಡಾ ನೀನೇ ತಾನೇ!
ನೀ ಹೇಗಿರುವೆಯೋ ಎಂತಿರುವೆಯೋ ತಿಳಿಯದಾದೆ ಚಿನ್ಮಯ
ಆದರೂ ನಿನ್ನ ಧ್ಯಾನದಲ್ಲೇ ನನ್ನ ಮನಸ್ಸು ತನ್ಮಯ!

ವ್ಯಾಪಿಸಿರಲು ಸರ್ವವನ್ನು ಓ! ಅನಂತ ಸೃಷ್ಠಿಲೋಲ,
ಊರ್ಧ್ವದೃಷ್ಠಿ ಹರಿಸಿದರೆ ಸಮಸ್ತವೂ ನೀಲ ನೀಲ!
ಬಾನ ಹಣ್ಣು, ನಿನ್ನ ಕಣ್ಣು, ಹೊಳೆವ ತಾರೆ, ನಿನ್ನ ಮೋರೆ,
ಗಮ್ಯ ನೀನೇ ಅಲ್ಲವೇನು, ದಾರಿ ಬೇರೆ, ಧಾರೆ ಬೇರೆ!
ನಿನ್ನ ಮೇರೆ ಅರಿಯಲಾರೆ, ಎಷ್ಟೆಂದರೂ ನಾ ಮೃಣ್ಮಯ;
ನಂಬದೆಯೂ ನಂಬಿರುವೆನು, ದಾರಿ ತೋರೋ ಚಿನ್ಮಯ!

Thursday 12 February 2015

ಈಗಲಾದರೂ ಬರಿದಾಗಬಾರದೇ ಈ ನನ್ನ ಅಕ್ಷಯ ಬತ್ತಳಿಕೆ...

           ಆ....ಹ್!.. ನಡೆದು ಬರುತ್ತಿದ್ದವನ ತನುಗಂಧವನ್ನು ತೃಪ್ತಿಯಾಗುವವರೆಗೂ ಆಘ್ರಾಣಿಸಲು ದೀರ್ಘ ಕಾಲ ಹಿಡಿದಿಟ್ಟುಕೊಂಡಿದ್ದ ಉಸಿರು ಈಗ ಮೆಲ್ಲನೆ ಬಳಲುತ್ತಿದೆ. ಎಷ್ಟೋ ವರುಷಗಳ ಹಿಂದೆ, ಹೀಗೆಯೇ ಈತನ ನೆತ್ತಿಯನ್ನು ಆಘ್ರಾಣಿಸಿ, ಇವನ ಕಿವಿಯಲ್ಲಿ 'ಬಭ್ರುವಾಹನ' ಎಂದು ಮೂರು ಬಾರಿ ಉಸುರಿದ್ದೆನಲ್ಲವೇ? ಎತ್ತರದಲ್ಲಿ ನನಗೆ ಸರಿಸಮನಾಗಿ ಬೆಳೆದು ನಿಂತಿದ್ದಾನೆ. ಕೇವಲ ದೈಹಿಕ ಎತ್ತರದಲ್ಲಷ್ಟೇ ಅಲ್ಲ, ಶೌರ್ಯದಲ್ಲಿಯೂ, ಪರಾಕ್ರಮದಲ್ಲಿಯೂ ಈ ಧನಂಜಯನನ್ನೇ ಮೀರಿಸುವಂತೆ ಬೆಳೆದು ನಿಂತಿದ್ದಾನೆ. ಉದಯಕಾಲದ ತರುಣ ಸೂರ್ಯನಂತೆ ಗಂಭೀರವಾದ ಮುಖಾರವಿಂದದಲ್ಲಿ ಸಾಕ್ಷಾತ್ ಇಂದ್ರನ ತೇಜಸ್ಸು ಕಂಗೊಳಿಸುತ್ತಿದೆ, ಎಷ್ಟೆಂದರೂ ಇಂದ್ರಪೌತ್ರನಲ್ಲವೇ ಈತ?! ಇವನ ಪರಾಕ್ರಮದ ವಾರ್ತೆ ಮಣಿಪುರದ ಸರಹದ್ದನ್ನು ದಾಟಿ, ಭರತವರ್ಷದ ದಿಗ್ದಿಗಂತಗಳಲ್ಲಿ ಪ್ರತಿಧ್ವನಿಯಾಗುತ್ತಿದುದನ್ನು ಹಸ್ತಿನೆಯಲ್ಲಿಯೇ ಕುಳಿತು ಕೇಳಿ ಅದೆಷ್ಟು ಆನಂದ ಪಡುತ್ತಿದ್ದೆ ನಾನು! ಪಡೆದರೆ ಪಡೆಯಬೇಕು ಬಭ್ರುವಾಹನನಂತಹ ಮಗನನ್ನು!


              ಒಂದೊಂದೇ ಹೆಜ್ಜೆಯನಿಕ್ಕುತ್ತಾ ಆರ್ದ್ರಭಾವದಿಂದ ಬರುವವನನ್ನು ನೋಡುತ್ತಿದ್ದರೆ, ನನ್ನ ದೇಹದ ಕೋಟಿ ಕೋಟಿ ರೋಮಗಳು ಭಾವೋತ್ಕರ್ಷದಿಂದ ನಿಮಿರಿ ನಿಲ್ಲುತ್ತಿವೆ. ಅಯ್ಯೋ ವಿಧಿಯೇ!, ನಾಳೆ ಸಮರಭೂಮಿಯಲ್ಲಿ ಇವನ ಮೇಲೆಯೇ ಶರಪ್ರಯೋಗ ಮಾಡಬೇಕೆ? ನನ್ನದೇ ರಕ್ತಮಾಂಸಗಳನ್ನು ಹಂಚಿಕೊಂಡು ಹುಟ್ಟಿದ ತನೂದ್ಭವನ ರಕ್ತಪಾತವನ್ನು ನೋಡಿ ನಾನು ತೃಪ್ತನಾಗಬೇಕೆ? ಇದೆಂತಹ ಪರೀಕ್ಷೆ ಪಾರ್ಥನ ಬದುಕಿನಲ್ಲಿ? ಇನ್ನೆಷ್ಟು ಅಗ್ನಿದಿವ್ಯಗಳನ್ನು ಹಾಯಬೇಕು ನಾನು? ಮೊದಲು ಪಿತಾಮಹನನ್ನು ಶರಶಯ್ಯೆಯಲ್ಲಿ ಮಲಗಿಸಿದೆ, ನಂತರ ಗುರುದೇವನ ಶಿರಚ್ಛೇದನದ ಬರ್ಬರತೆಗೆ ಸಾಕ್ಷಿಯಾದೆ, ಮುಂದೆ ಭ್ರಾತೃಹತ್ಯೆಯ ಮಹಾಪಾತಕದ ಭಾರಕ್ಕೆ ತಲೆಕೊಟ್ಟೆ. ಈಗ... ಈಗ... ಈಗ... ನನ್ನ ಕಂದನನ್ನು... ಇಲ್ಲ.. ಇಲ್ಲ.. ಶ್ರೀಹರೀ!!! ಪಾರ್ಥಜನ ಶ್ರೀದೇಹವನ್ನು ಘಾತಿಸುವ ಪ್ರತಿಯೊಂದು ಬಾಣವೂ ಪಾರ್ಥನ ಎದೆಯನ್ನೇ ನಾಟುತ್ತದಲ್ಲವೇ? ಇದಕ್ಕಿಂತ ಲೇಸು ನನ್ನ ಗಾಂಢೀವ ಈ ಕ್ಷಣವೇ ಛಿದ್ರವಾಗಿ ಹೋಗಲಿ. ಸವ್ಯಸಾಚಿಯ ಕ್ಷಾತ್ರಿಯ ತೇಜಸ್ಸು ಇವತ್ತಿಗೆ ಬತ್ತಿಹೋಗಿ ನಪುಂಸಕತ್ವ ಆವರಿಸಲಿ. ಬದುಕಿನುದ್ದಕ್ಕೂ ನನ್ನ ಬಾಣಗಳಿಂದ ನನ್ನ ಹೃದಯವನ್ನೇ ಇರಿದುಕೊಂಡಿದ್ದೇನೆ. ಈಗಲಾದರೂ ಬರಿದಾಗಬಾರದೇ ಈ ಅಕ್ಷಯ ಬತ್ತಳಿಕೆ...

            ಬಂದೆಯಾ ಕಂದಾ?.. ಬಾ.. ನಿನ್ನಪ್ಪನ ಪಾದಗಳನ್ನು ಹೀಗೆ ಕಣ್ಣೆವೆ ಮುಚ್ಚದೆ ದಿಟ್ಟಿಸಬೇಡವಪ್ಪಾ. ನನ್ನ ಪಾದಗಳ ಕಂಪನವನ್ನು ನೀನು ಗಮನಿಸಬಾರದು. ಬೆವರಸ್ನಾನದಿಂದ ತೋಯ್ದ ಕೈಗಳಿಂದ ಜಾರುತ್ತಿರುವ ಗಾಂಢೀವದೆಡೆಗೆ ದೃಷ್ಠಿ ಹಾಯಿಸಬೇಡ ಮಗೂ! ನನ್ನ ಅಪ್ಪಣೆಯನ್ನೂ ಮೀರಿ ನಿನ್ನನ್ನು ಬಿಗಿದಪ್ಪಲು ಮುಂದೆ ಚಾಚುತ್ತಿರುವ ನನ್ನ ತೋಳುಗಳನ್ನು ನೀನು ನೋಡಬಾರದು. ಬಭ್ರುವಾಹನ ಎಂದು ಕರೆಯಲು ಮನಸ್ಸು ಒಲ್ಲದು. ’ಪಾರ್ಥ ನಂದನ’ ಎಂಬ ಧ್ವನಿ ಮೊದಲು ತೊದಲಾಗಿ, ಈಗ ಪಿಸುಮಾತಾಗಿ, ಮುಂದಿನ ಕ್ಷಣ ದೀರ್ಘ ಉದ್ಘಾರವಾಗಿ ನಾಲಗೆಯಿಂದ ಹೊರಚಿಮ್ಮಲು ಹಾತೊರೆಯುತ್ತಿದೆ. ಒಂದೇ ಒಂದು ಕ್ಷಣ ನಿನ್ನಪ್ಪನಿಗಾಗಿ ನಿನ್ನ ಕಿವಿಗಳನ್ನು ಮುಚ್ಚಿಕೊಳ್ಳಬಾರದೇ, ಮನತಣಿಯುವಷ್ಟು ಸಲ ಮಗನೇ ಎಂದು ಕರೆಯುತ್ತೇನೆ. ಸಂವತ್ಸರಗಳ ಕಾಲ ತಡೆಒಡ್ಡಿದ್ದ ಪುತ್ರವಾತ್ಸಲ್ಯದ ಅಮೃತಪ್ರವಾಹ ಸಂಕಲ್ಪದ ಕಟ್ಟೆಯೊಡೆದು ಅಶ್ರುರಸಧಾರೆಯಾಗಿ ಹರಿಯುತ್ತಿದೆ. ನಿನ್ನ ಕೈ ಮುಗಿಯುತ್ತೇನೆ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡ ಮಗನೇ!.. ಹಿಂದಿನ ರಾತ್ರಿ ಶಿಬಿರದಲ್ಲಿ ತಳೆದಿದ್ದ ಧೃಢ ನಿರ್ಧಾರ ಹೀಗೆ ನಿನ್ನೆದುರಿನಲ್ಲಿ ನುಚ್ಚುನೂರಾಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಹೇ! ವಾಸುದೇವಾ, ಪಾರ್ಥಸಾರಥೀ ಎಲ್ಲಿದ್ದೀಯಾ?.. ಮೊಮ್ಮಗನಿಂದ ಅಜ್ಜಯ್ಯನನ್ನು ಕೊಲ್ಲಿಸಿ, ಶಿಷ್ಯನಿಂದ ಗುರುಹತ್ಯೆ ಮಾಡಿಸಿ, ತಮ್ಮ ಅಣ್ಣನನ್ನು ಕೊಲ್ಲುವ ಘೋರಗಳಿಗೆ ಸಾಕ್ಷಿಯಾಗಿ ಮುಗುಳ್ನಗುತ್ತಿರುವ ನಿನ್ನ ಲೀಲಾವಿನೋದಕ್ಕೆ ನನ್ನ ಧಿಕ್ಕಾರವಿರಲಿ! ನೀನು ಸೋದರಮಾವನಾದ ಕಂಸನನ್ನು ಕೊಂದಿದ್ದಕ್ಕೆ ಆತ ದುಷ್ಟನೆಂಬ ಸಮರ್ಥನೆಯಾದರೂ ಇತ್ತು. ಬೀಮ ನೂರು ಮಂದಿ ಸಹೋದರರನ್ನು ಕೊಲ್ಲುವಾಗ ಅವನೆದೆಯಲ್ಲಿ ಭ್ರಾತೃಪ್ರೇಮದ ಬಂಧನವಿರಲಿಲ್ಲ, ಇದ್ದುದು ಪ್ರತಿಕಾರದ ದಾವಾಗ್ನಿ ಮಾತ್ರ! ಆದರೆ ಅರ್ಜುನನ ಸ್ಥಿತಿ ಹಾಗಲ್ಲ, ಯಾವನ ಹೃದಯದಲ್ಲಿ ಋಜುತ್ವ ಸ್ಥಿರವಾಗಿ ನೆಲೆಸಿರುತ್ತದೋ, ಆತನಿಗೆ ಅರ್ಜುನನೆಂದು ಹೆಸರಂತೆ. ಋಜುತ್ವದ ಮಾತು ಹಾಗಿರಲಿ, ಹೃದಯವೇ ಇಲ್ಲದವನಂತೆ ಮತ್ತೆ ಮತ್ತೆ ಬಂಧುಗಳ ಮೇಲೆಯೇ ಶಸ್ತ್ರ ಹಿರಿದಿದ್ದೇನೆ! ಆಗದು, ಇನ್ನಾಗದು! ಆದದ್ದಾಗಲಿ, ಮುಕುಂದನಿದ್ದಾನೆ! ನನ್ನ ಚರಣಸ್ಪರ್ಶ ಮಾಡುತ್ತಿರುವ ಈತನ ಭುಜಗಳನ್ನು ಈಗಲೇ ಹಿಡಿದೆತ್ತಿ, ನನ್ನ ತೋಳುಗಳಿಂದ ಬಿಗಿದಪ್ಪಿ ಮುದ್ದಾಡು......
 
    ನಿಲ್ಲು
!!! ನಿಲ್ಲು ಪಾರ್ಥ ನಿಲ್ಲು! ಯಾರ ಪಾದಗಳ ಮೇಲೆ ನಿನ್ನ ಶಿರಸ್ಸನಿರಿಸಿ ಪೂಜಿಸಬೇಕಾಗಿತ್ತೋ, ಅಂತಹ ಅಗ್ರಜನ ಶಿರಸ್ಸನ್ನೇ ಕತ್ತರಿಸಿದ ಪರಮ ಪಾತಕಿ ನೀನು. ಅಂದು ಕರ್ಣನ ಕೊರಳನ್ನು ತರಿದ ತಪ್ಪಿಗೆ, ಇಂದು ಕರ್ಣಾನುಜನ ಕೊರಳನ್ನೇ ಬೆಲೆಯಾಗಿ ತೆರಬೇಕು. ನಿನ್ನ ತಪ್ಪುಗಳಿಗೆ ತಕ್ಕುದಾದ ಶಿಕ್ಷೆಯನ್ನು ನೀನೇ ವಿಧಿಸಿಕೊಳ್ಳದಿದ್ದರೆ ವಿಧಿ ಇನ್ನಷ್ಟು ಘೋರವಾದ ಶಿಕ್ಷೆಯನ್ನೇ ವಿಧಿಸೀತು ಎಚ್ಚರ!! ನಿನ್ನನ್ನು ನೀನು ಶಿಕ್ಷಿಸಿಕೊಳ್ಳುವ, ನಿನ್ನ ಪಾಪದ ಭಾರವನ್ನು ಹೆಗಲಿಂದ ಕೆಳಗಿಳಿಸುವ ಅವಕಾಶವೊಂದು ತಾನಾಗಿ ಒದಗಿಬಂದಿದೆ. ಕೈಚೆಲ್ಲದಿರು ಅದನ್ನು. ಅಣ್ಣನಿಗೆ ಮರಣವನ್ನು ತಂದವನು ಮಗನಿಂದಲೇ ಮೃತ್ಯುವನ್ನು ಪಡೆಯಬೇಕು. ಮಗನಲ್ಲದೇ ಮತ್ತೊಬ್ಬರಿಗೆ ಸೋಲುವವನಲ್ಲ ಫಲ್ಗುಣ! ಆಹ್ವಾನಿಸು ಆತನನ್ನು ಸಮರಾಂಗಣಕ್ಕೆ. ತಿರಸ್ಕಾರದ ಮಾತುಗಳ ಕೆಂಡದ ಮಳೆಯನ್ನೇ ಸುರಿಸು ಈತನ ಮೇಲೆ. ಅಷ್ಟಕ್ಕೂ ಆತನ ಪಿತೃಭಕ್ತಿ ಕುಂದದಿದ್ದರೆ ಮನಸಾರೆ ಚಿತ್ರಾಂಗದೆಯ ಕ್ಷಮೆಕೋರಿ, ’ಮಾತೃ ನಿಂದನೆ’ಯ ಬ್ರಹ್ಮಾಸ್ತ್ರದಿಂದ ಆತನ ಆತ್ಮಾಭಿಮಾನವೆಂಬ ಕವಚವನ್ನು ಭೇಧಿಸು. ಮಗನ ಮೂಲಕವೇ ವೀರಸ್ವರ್ಗವನ್ನು ಸೇರು.. ಮಗನ ಮೂಲಕವೇ ವೀರಸ್ವರ್ಗವನ್ನು ಸೇರು!!



         ಹೌದು! ಹೌದು! ಇದೇ ಸರಿ!! ನನ್ನ ಮನಸ್ಸಾಕ್ಷಿಯ ಮಾತೇ ದಿಟ. ನಡೆಯಲಿ ಅರ್ಜುನ ಬಭ್ರುವಾಹನರ ಕಾಳಗ. ನಾಳೆಯೊಂದು ದಿನದ ಮಟ್ಟಿಗೆ ಪಾರ್ಥನ ಪೌರುಷವೇ ನಷ್ಟವಾಗಿ ಹೋಗಲಿ! ನನ್ನ ಬತ್ತಳಿಕೆಯಲ್ಲಿರುವ ಮಹಾಸ್ತ್ರಗಳನ್ನು ನಿಯಂತ್ರಿಸುವ ಮಹಾಮಂತ್ರಗಳೇ ನನ್ನ ಸ್ಮೃತಿಯಿಂದ ಅಳಿಸಿಹೋಗಲಿ!! ನಾಳೆ ಸೂರ್ಯ ಅಸ್ತಮಿಸುವ ಮುನ್ನವೇ ನನ್ನ ಪ್ರಾಣ ನನ್ನಣ್ಣ ಸೂರ್ಯಸುತನನ್ನು ಸೇರಲಿ!!! ಇದೇ ನನ್ನ ಶಾಪ! ಇದೇ ನನ್ನ ಶಾಪ!! ಪಾರ್ಥನಿಗೇ ಪಾರ್ಥನೇ ವಿಧಿಸುತ್ತಿರುವ ಶಾಪ! ಪಾರ್ಥನಿಗೇ ಪಾರ್ಥನೇ ವಿಧಿಸುತ್ತಿರುವ ಶಾಪ!! ಇದಕ್ಕಿಲ್ಲದೇ ಹೋಗಲಿ ಯಾವ ಉಃಶಾಪ! ಇದಕ್ಕಿಲ್ಲದೇ ಹೋಗಲಿ ಯಾವ ಉಃಶಾಪ!!