Friday 29 June 2012

ಆತ್ಮನಿಗೆ


ಹೀಗೇಕೆ ಬದುಕುತಿರುವೆ?
ಬದುಕಿಗೆ ಬೆನ್ನು ತಿರುಗಿಸಿ,
ಇದು ಮತ್ತಿನ ಮಧುಪಾತ್ರೆಯಲ್ಲ,
ಕುಡಿದಷ್ಟೂ ಇಂಗದ ವಿಷದ ಬಟ್ಟಲು..
ಈ ಸಂಜೆಯಷ್ಟೇ ಈ ತಿಳಿಗಾಳಿ,
ನಾಳೆ ಮತ್ತೆ ಬೀಸಲಿದೆ ತೂಫಾನು!

ವಿಷದ ನಂಜಿಗೆ ನೀ ನಿತ್ರಾಣ,
ತೂಫಾನಿನ ಮುಂದೆ ನೀ ತರಗೆಲೆ
- ಆಗುವ ಬದಲು;
ಕಿಟಕಿ, ಬಾಗಿಲುಗಳು ಕುಸಿದ
ಈ ಮನೆಗೆ ಮುಕ್ತಿ ನೀಡುವ ಬದಲು...

ಹಾರು ಇನ್ನಷ್ಟು ಎತ್ತರಕ್ಕೆ,
ಏರು ಎಲ್ಲ ಸೆಳೆತಗಳ ಮೀರಿ..
ಮೋಹದ ಬಂಧನಗಳ ಹರಿದು,
ಸಾಗು ಅನಂತದಾಚೆ!

ಬೇಯುತಿದೆ ಭೂಮಿ,
ಸುರಿವ ಮೋಡದ ತುಣುಕಾಗು;
ರೆಕ್ಕೆಯಾಗು,
ತೆವಳುವ ಮನಸುಗಳಿಗೆ;
ಕಾಮಾಟಿಪುರದಲ್ಲಿ ಹುಟ್ಟುವ,
ಕನಸಾದರೂ ಆಗು!..

ಕತ್ತಲಿಗೆ ಬೆಳಕಾಗು,
ಬೆಳಕಿಗೆ ಕಣ್ಣಾಗು;
ಬೆಳಕಿಲ್ಲದ ಜೋಪಡಿಯ ಲಾಂದ್ರದ ಉರಿಯಾಗು!

ನಡುರಾತ್ರಿ ಹೆಜ್ಜೆ ತಪ್ಪಿದ ಹುಡುಗಿಯ,
ಕನ್ನೆತನವಾಗು;
ಇದ್ದಲ್ಲೇ ಸತ್ತು ಗೊಬ್ಬರವಾಗು,
ಇನ್ನೆಲ್ಲೋ ಅನ್ನವಾಗಲು;
ಶೃತಿ ಸತ್ತ ವೀಣೆಯ ತಂತಿಯಾದರೂ ಆಗು!

ಮೌನಕ್ಕೆ ಮಾತಾಗು,
ಮಾತಿಗೆ ಲಯವಾಗು;
ಮಾತು ಮಿತಿ ಮೀರಿದಾಗ ಮತ್ತೆ ಮೌನವಾಗು...
ನೀಲಿಯಾಗು ರೆಕ್ಕೆ ಬಲಿತ
ಮರಿಗಳಿಗೆ,
ಹಸಿರಾಗು ಬಂಜರಾದ ನೆಲಗಳಿಗೆ,
ಬಿಳಿಯಾಗು ಗಡಿಯಲ್ಲಿನ ಕೆಂಪು
ಧ್ವಜಗಳಿಗೆ!

ಇದಾವುದೂ ಆಗದಿದ್ದರೆ ಬಾ-
ಒಂದೇ ಉಸಿರಿನಲ್ಲಿ ಅದಿಷ್ಟೂ ವಿಷವನ್ನು-
ಕುಡಿದು ಮತ್ತೆ ನಗುವುದನ್ನು ಕಲಿ;
ಮೈಯೊಡ್ಡಿ ನಿಲ್ಲು ತೂಫಾನಿನ ಬಿರುಸಿನ ಮುಂದೆ!

Wednesday 27 June 2012

ಕವಿತೆ



ಹೇಳು ನೀನೆಲ್ಲಿರುವೆ?
ಅಂಗಳದಲ್ಲಿ ನಿಂತ ಕಡುಗೆಂಪು ಸ್ಕೂಟಿ,
ಅದರ ಕಾಲಿನ ತುದಿಯಲ್ಲಿ ಮಲಗಿರುವ
-ಸೇವಂತಿಗೆ
ಸಪೋಟ ಮರದ ಕಿಟಕಿಗಳಿಂದ ಹಾಯ್ದು-
ಬೆನ್ನು ತಬ್ಬಿರುವ ಇಳಿಬಿಸಿಲು.


ಒಳಗೆ ಕಾಲಿಟ್ಟರೆ,
ಗೋಡೆಯ ಮೇಲೊಂದು ಭಾವ ತುಂಬಿದ ಚಿತ್ರ,
ಬಿಳಿ ಫ್ರಾಕು, ಕೆಂಪು ರಿಬ್ಬನ್ನು,
ಕೆನ್ನೆಗಳ ಗುಲಾಬಿ, ಕಣ್ಣುಗಳು ನಕ್ಷತ್ರ..
ಈಗ ನೋಡಬೆಕು ನಿನ್ನ; ಫ್ರಾಕು ಎತ್ತರಿಸಿ,
ರಿಬ್ಬನ್ನು ಕತ್ತರಿಸಿ, ಗುಲಾಬಿ ಪಕಳೆಗಳು ಅರಳಿ ನಿಲ್ಲಬೇಕು;
ಮುದ್ದಾಗಿ ನಗಬೇಕು,
ನಕ್ಷತ್ರ ನುಂಗಿರುವ ಕಪ್ಪುರಂಧ್ರ!
ಟೀವಿಯಲಿ ಮೊರೆಯುತಿರುವ ಮಧ್ಯಾಹ್ನದ ಹೊಸರುಚಿಗೆ,


ಕಿಚನ್‍ನೊಳಕ್ಕೆ,
ಕುಕ್ಕರಿನಿಂದ ಹೊರಟ ಶಿಳ್ಳೆ ಸದ್ದು,
ಸ್ಟವ್ ಮೇಲೆ ಕುದಿಯುತ್ತಿರುವ ಕಾಫಿನೊರೆ,
ಡೈನಿಂಗ್ ಟೇಬಲಿನಲ್ಲಿ ಸಕ್ಕರೆಯ ಹರಳು ಹೊತ್ತು,
ಓಡುತ್ತಿರುವ ಇರುವೆ...
ಮತ್ತೆಷ್ಟು ಹುಡುಕಬೇಕು,
ಹೇಳು ನೀನೆಲ್ಲಿರುವೆ?


ನಿನ್ನ ರೂಮಿನೊಳಗೆ,
ನಿಲುವುಗನ್ನಡಿಯಲ್ಲಿ ಈಗಷ್ಟೇ ಮಸುಕಾಗುತ್ತಿರುವ,
ನಿನ್ನ ತಾಜಾ ನಿಲುವುಗಳು...
ಮುಚ್ಚಳ ತೆರೆದಿಟ್ಟ ನೇಲ್‍ಪಾಲಿಷ್,
ಉದುರಿದ ಕೂದಲಿನ ಎಳೆಗಳಲ್ಲಿ,
ಬಂಧಿಯಾಗಿರುವ ಒದ್ದೆ ಬಾಚಣಿಕೆ.
ಕನ್ನಡಿಯ ಕೆನ್ನೆಗೆ ಮುತ್ತಿಕ್ಕಿರುವ-
ಹಣೆಯ ಬಿಂದಿ.
ನೀ ಬಿಚ್ಚಿಡುವ ಹೊತ್ತಲ್ಲಿ,
ಹುಚ್ಚುಚ್ಚು ರಾಗಗಳ ಸ್ಫುರಿಸಿ;
ನಿಃಶಬ್ಧವನೇ ಹಾಡುತಿವೆ ನಿನ್ನ ನೂಪುರಗಳು,
ಈಗಷ್ಟೇ ಕೊನೆಯ ಆಲಾಪ ಮುಗಿಸಿ!
ನಿನ್ನ ಮೌನದಂತೆಯೇ ಅವಕ್ಕೂ ಇಲ್ಲ,
ಯಾರದೂ ಪರಿವೆ!
ಮತ್ತೆಷ್ಟು ಹುಡುಕಬೇಕು,
ಹೇಳು ನೀನೆಲ್ಲಿರುವೆ?


ಬಚ್ಚಲಿನ ಒಳ ಹೊಕ್ಕರೆ,
ಅದು ಬೇರೆಯದೇ ನಿಹಾರಿಕೆ!
ಸೋಪು ಷಾಂಪುಗಳು ಬೆರೆತ ಹೊಸತು
-ವಾತಾವರಣ.
ಗೋಡೆಯನು ಅಪ್ಪಿರುವ ಹಬೆಯ ಪರದೆಯ ಸೀಳಿ,
ಬೆರಳ ತುದಿಯಲ್ಲಿ ಕೆತ್ತಿರುವ ನಿನ್ನ ಹೆಸರು.


ಹೊರಗೆ ಕಾಲಿಟ್ಟರೆ ನೈಲಾನ್ ದಾರದ ಮೇಲೆ,
ಹೂಬಿಸಿಲಿಗೆ ಮೈ ಬೆತ್ತಲಾದ ನೀಲಿ ಟವೆಲ್ಲಿನ
ಘಮ, ಅದರ ಅಂಚುಗಳಿಂದ
ತೊಟ್ಟಿಕ್ಕುತ್ತಿದೆ ನಿನ್ನ ಮೈ ತೋಯ್ದ ಅಮೃತ!
ತುಂಟಾಟ ಸಾಕಿನ್ನು ಕೊನೆಯ ಬಾರಿಗೆ ಕರೆವೆ,
ಮತ್ತೆಷ್ಟು ಹುಡುಕಬೇಕು,
ಹೇಳು ನೀನೆಲ್ಲಿರುವೆ?

ಬಚ್ಚಲುಮನೆ ದಾಟಿ, ಹಿತ್ತಿಲನು ಬಳಸಿ,
ಮತ್ತೆ ಅಂಗಳಕ್ಕೆ ಬಂದರೆ,
ಅಲ್ಲಿ ಅಂಗಳವೂ ಇಲ್ಲ, ಸ್ಕೂಟಿಯೂ ಇಲ್ಲ,
ಮನೆಯಿದ್ದ ಜಾಗದಲಿ ಖಾಲಿ ಬಯಲು,
ನಿಂತ ಎದೆ, ನಿಟ್ಟುಸಿರು;
ಕೊನೆಯತ್ತ ಸಾಗಿರುವ ಸಂಜೆ ಮುಗಿಲು!

04/03/2012
Chikmagalur

ಕವಿತೆ




ನೀ ದೂರಾದ ಹೊತ್ತಲ್ಲಿ,
ನಾನು ನಾನಾಗಿರಲಿಲ್ಲ;
ಎದೆಗೆ ವಿಷವೇರಿದ ಮತ್ತಲ್ಲಿ,
ಮೌನ ಮಾತಾಗಿರಲಿಲ್ಲ..
ಇನ್ನಾದರೂ ಹರಿಯಲಿ, ನೆನಪುಗಳ ಒರತೆ,
ನಿನ್ನದೇ ಮೋಹಕ್ಕೆ, ಶರಣಾಗಿದೆ ಕವಿತೆ!

ನೀ ಹೋದ ದಾರಿಯಲಿ ಉಸಿರೊಂದು ಚೆಲ್ಲಿದೆ,
ತನ್ನನ್ನೇ ಬಿಗಿಹಿಡಿದು ದನಿಯೊಂದ ಹುಡುಕಿದೆ;
ಹಸಿದಿರುವ ಜೀವಕ್ಕೆ ಮುತ್ತೊಂದ ಕೇಳುವೆ,
ಮತ್ತೆಂದು ಬರುವೆ ನೀ ಕೊನೆಯಿರದ ಮೌನವೇ?

ಅನುಕ್ಷಣವೂ ತೆರೆಯುವೆ ನೆನಪುಗಳ ಬಾಗಿಲು,
ಒಳಹೋದರೆ ವಶವಾಗುವೆ ನಿನ್ನುಸಿರು ತಾಕಲು;
ಈ ಸಂಜೆ ಯಾತಕೋ ಖಾಲಿಯಾಗಿಯೇ ಕಳೆದಿದೆ,
ನೀನಿರದೆ ಹೋಗಲು ಮತ್ತೇನು ಉಳಿದಿದೆ?

ಆವರಿಸು ನೀ ನನ್ನ ಕನಸಿನಲ್ಲಾದರೂ,
ಅನುಭವಿಸು ಎಲ್ಲವನು ನಾ ಹೇಳದೆಯೇ ಹೋದರೂ;
ನೀ ನಕ್ಕಾಗಲೆಲ್ಲಾ ನನಗೊಂದು ನಕ್ಷತ್ರ ಸಿಗಲು,
ಈ ರಾತ್ರಿ ಬೊಗಸೆಯಲಿ ತುಂಬಿರಲಿ ಮುಗಿಲು!


15/05/2012
Chikmagalur

ನಿವೇದನೆ-೨



(ವಿಶೇಷ ಸೂಚನೆ: ಈ ಪತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಮತ್ತು ಸನ್ನಿವೇಷಗಳು ಕೇವಲ ಕಾಲ್ಪನಿಕ. ಯಾವುದೇ ಮೃತ ಅಥವಾ ಜೀವಂತ ವ್ಯಕ್ತಿಯೊಂದಿಗೆ ಸಂಬಂಧ ಇರುವುದಿಲ್ಲ. ಹಾಗೇನಾದರೂ ಸಂಬಂಧ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯವಷ್ಟೇ)

ಮಧುರ್,

                ಇಷ್ಟೊಂದು ನೆಮ್ಮದಿಯಾಗಿ ನಿದ್ರಿಸಿ ಎಷ್ಟೊಂದು ಶತಮಾನಗಳಾಗಿದ್ದವು? ಕಣ್ಣು ತೆರೆದರೆ ರೆಪ್ಪೆಗಳನ್ನು ಹಿತವಾಗಿ ತಬ್ಬುವ ಬೆಳಕಿನ ಹನಿಗಳು, ಗಾಡವಾದ dettol ಘಮ. ಹತ್ತು ನಿಮಿಷಕೊಮ್ಮೆ ಕಾರಿಡಾರ್‌ನಲ್ಲಿ ಸರಿದಾಡುವ ನರ್ಸ್‌ಳ ಕಾಲ್ಗೆಜ್ಜೆ ಸದ್ದು. ಸ್ಟೂಲ್‌ನ ಮೇಲೆ ನಿನ್ನ ಡುಮ್ಮ ಡುಮ್ಮ ಕೆನ್ನೆಗಳನ್ನು ನೆನಪಿಸುವ ಸೇಬುಹಣ್ಣುಗಳು. ಕಣ್ಮುಚ್ಚಿದ್ದರೆ ನೀನು ತುಂಬು ಪ್ರೀತಿಯಿಂದ ನನ್ನ ಹಣೆ ಸವರಿದಂತೆ ಕನಸು. ಎದ್ದು ನೋಡಿದರೆ ಗಡಿಯಾರ 5:47 AM ತೋರಿಸುತ್ತಿತ್ತು. ತುಂಬಾ ಖುಷಿಯೇನೂ ಆಗಲಿಲ್ಲ. ಏಕೆಂದರೆ ನಂಗೀಗ ಗೊತ್ತಾಗಿ ಹೋಗಿದೆ, ಬೆಳಿಗ್ಗೆ ಮುಂಚೆ ಬೀಳೋ ಕನಸುಗಳೆಲ್ಲಾ ನನಸಾಗಲ್ಲ ಅಂತ. In fact ನನ್ನ ಯಾವ ಕನಸು ಕೂಡಾ ನನಸಾಗಲ್ಲ ಅಂತಲೂ. ಯಾವ ಕನಸೂ ಕೂಡಾ ಇಲ್ಲಿ ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯ ಜನರಲ್ ವಾರ್ಡಿನಲ್ಲಿ ಮಲಗಿರುವ ನನ್ನನ್ನು, ಅಲ್ಲಿ ದೂರದ ಯುರೋಪಿನ ಪ್ಯಾರಿಸ್ ನಗರಿಯ ಅಮೃತಶಿಲೆಯ ಮಹಲಿನಲ್ಲಿರುವ ನಿನ್ನ ಬಳಿಗೆ ತಲುಪಿಸಲಾರದು.

                ಈ ದುಃಖ, ಇಷ್ಟೊಂದು ತೀವ್ರವಾದ ಪ್ರೀತಿ, ಖಾಲಿಯಾಗದ ವಿರಹ, ತೇವಗೊಂಡ ಮನಸ್ಸು, ಮುನಿಸಿಕೊಂಡ ಕವಿತೆ, ಎದೆಯಲ್ಲಿ ಲಂಗರು ಹಾಕಿ ನಿಂತ ನಿನ್ನ ನೆನಪುಗಳ ನೌಕೆ, ಕಳೆದುಹೋದ ಸಂತಸ ಇದೆಲ್ಲಾ ಇವತ್ತಿನದಲ್ಲ. ಹದಿನಾರು ವರ್ಷಗಳ ಹಿಂದೆ, ಅವತ್ತು ಜೂನ್ ತಿಂಗಳ ಮಳೆಗಾಲದ ಮಧ್ಯಾಹ್ನದ ಒಂದು ಅಪೂರ್ವ ಕ್ಷಣದಲ್ಲಿ ನಿನ್ನ ನೋಡಿದಾಗಲೇ ಏಳು ವರ್ಷಗಳ ದಿವ್ಯ ಪ್ರೀತಿಯೊಂದು ಅದು ಕೊಡಲಿರುವ ಅನನ್ಯವಾದ ಸಂತೋಷ ಮತ್ತು ಅಗಾಧವಾದ ನೋವುಗಳೊಂದಿಗೇ ಕರುಣಿಸಲ್ಪಟ್ಟಿತ್ತು. ಹದಿನೇಳು ವರ್ಷದ ಹುಡುಗನೊಬ್ಬನ ಖಾಲಿ ಎದೆಯೊಳಗೆ, ಹದಿನಾರರ ಪುಟ್ಟ ಕಿನ್ನರಿಯೊಬ್ಬಳು ಸದ್ದಿಲ್ಲದೆ ನಡೆದುಬಂದಿದ್ದಳು.

           ಈಗಲೂ ನನ್ನ ಬದುಕು ನಿನ್ನ ಮೊದಲ ಸಲ ನೋಡಿದ ಆ ದಿವ್ಯ ಕ್ಷಣದಲ್ಲಿಯೇ ಸ್ತಂಭಿಸಿದೆ. ನನ್ನ ಆತ್ಮದ ಚೂರೊಂದು ನೀನು ಪ್ರತಿನಿತ್ಯವೂ ನಡೆದಾಡುತ್ತಿದ್ದ ಶೃಂಗೇರಿಯ ಭಾರತೀ ಬೀದಿಯ ಕೊನೆಯ ತಿರುವಿನಲ್ಲಿ ಇನ್ನೂ ನಿನ್ನ ಪ್ರತೀಕ್ಷೆಯಲ್ಲಿಯೇ ಕಾಲೂರಿ ನಿಂತಿದೆ. ಇವತ್ತು ನೀನಿಲ್ಲ ಎಂಬ ನೋವಿಗಿಂತ, ನಾಳೆಯೂ ನೀನಿಲ್ಲಿರುವುದಿಲ್ಲ ಎಂಬ ಆತಂಕವೇ ನನ್ನ ಕೊಲ್ಲುತ್ತಿದೆ. ನಿಂಗೆ ಹೇಳದೇ ಉಳಿದ ಮಾತುಗಳು, ಕೊಡದೆಯೇ ಉಳಿದ ಮುತ್ತುಗಳು, ನಿನಗಷ್ಟೇ ಕೇಳಿಸಬೇಕಾದ ಹಾಡುಗಳು, ನಿನ್ನ ಮೋಹಕ್ಕೆ ಶರಣಾದ ಕವಿತೆಗಳು ಎಲ್ಲಾ ನನ್ನ ಬಳಿಯೇ ಉಳಿದು ಬಿಟ್ಟಿವೆ. ಇದನ್ನೆಲ್ಲಾ ನಿನ್ನೊಂದಿಗೆ ಹಂಚಿಕೊಳ್ಳಬೇಕೆಂದರೆ ಬದುಕು ಮತ್ತೆ ಏಳು ವರ್ಷಗಳಷ್ಟು ಹಿಂದಕ್ಕೆ ಚಲಿಸಬೇಕು. ಮತ್ತೆ ಶೃಂಗೇರಿಯ ಶ್ರೀ ಜಗದ್ಗುರು ಚಂದ್ರಶೇಕರ ಭಾರತಿ ಸ್ಮಾರಕ ಕಾಲೇಜಿನ ಕಾರಿಡಾರ್‌ಗಳಲ್ಲಿ ನಿನ್ನ ಹೆಜ್ಜೆಗುರುತುಗಳನ್ನು ಹುಡುಕಬೇಕು. ನಿನ್ನ organic chemistry notesನೊಳಗಿಂದ ನಿನ್ನ ಸ್ಪರ್ಶವೊಂದನ್ನು ಎತ್ತಿ ತರಬೇಕು. 1997ರ ಮಳೆಗಾಲದ ರಾತ್ರಿಯ ಕನಸೊಂದರಲ್ಲಿ ಬಂದವಳನ್ನು ಹಾಗೆಯೇ ಅಪ್ಪಿಕೊಂಡು ಹೊರಕ್ಕೆಳೆದು ತರಬೇಕು, ತುಂಗಾನದಿಯ ತಟದಲ್ಲಿನ ಕೊನೆಯ ಕಲ್ಲಿನ ಮೆಟ್ಟಿಲಿನ ಮೇಲೆ ನಿಂತು, ನೀರಿನಲ್ಲಿ ಕಾಲು ಇಳಿಬಿಟ್ಟವಳ ಬೆರಳುಗಳನ್ನು ಮುತ್ತಿಕ್ಕಿದ ಮೀನು ನಿನ್ನ ಮುಖದಲ್ಲಿ ಮೂಡಿಸಿದ ಪುಳಕವನ್ನು ಮತ್ತೆ ಕಣ್ತುಂಬ ನೋಡಬೇಕು. ಅದೊಂದು ದೀಪಾವಳಿಯ ರಾತ್ರಿ ನಿನ್ನ ಕೈಗಳಲ್ಲಿ ಉರಿಯುತ್ತಿದ್ದ ನಕ್ಷತ್ರಕಡ್ಡಿಯ ಕಿಡಿಗಳಿಗೆ ನನ್ನ ಎದೆಯನ್ನು ತಾಕಿಸಿ, ನನ್ನನೇ ನಾನು ದಹಿಸಿಕೊಳ್ಳಬೇಕು. ನೀನಿಲ್ಲದ್ದಿದ್ದರೆ ಏನಂತೆ? ಎಷ್ಟು ಕುಡಿದರೂ ಮುಗಿಯದ ನಿನ್ನ ನೆನಪುಗಳ ಮಧುಶಾಲೆ ಇದೆ. ನನ್ನ ಮಧುಪಾನ ನಿರಂತರ!

                ಮೊದಲ ಸಲ ನಿನ್ನ ನೋಡಿದಾಗ, ತಿಳಿ ಗುಲಾಬಿ ಬಣ್ಣದ ಸೆಲ್ವಾರ್ ಕಮೀಜ಼್‍ನ ಒಳಗೆ ಬೆಚ್ಚಗಿನ ಯೌವನವೊಂದು ಅರಳಿ ನಿಲ್ಲುತ್ತಿತ್ತು. ನೀನು ಬಾಟನಿ ಕ್ಲಾಸಿನ ಕ್ರೌಡ್‍ನ ಮಧ್ಯೆ ನಿಂತು ಮಧುರ್, ಸಕಲೇಶಪುರ, new admission ಅಂತ ಪರಿಚಯಿಸಿಕೊಂಡ ಕ್ಷಣ ಇನ್ನೂ ಕಣ್ಣಲ್ಲಿಯೇ ಇದೆ. ಸೆಕೆಂಡ್ ಪಿಯು ಕ್ಲಾಸುಗಳು ಶುರುವಾಗಿ ಅವತ್ತಿಗೆ ಹತ್ತು ದಿನಗಳಾಗಿದ್ದವು. ನೀ ಬಂದ ದಿನವಷ್ಟೇ ಶೃಂಗೇರಿಯಲ್ಲಿ ಆ ವರ್ಷದ ಮೊದಲ ಮಳೆ ಚೆಲ್ಲುತ್ತಿತ್ತು. ಕ್ಲಾಸ್‌ರೂಮಿನ ತುಂಬಾ ಹರಡಿದ್ದುದು, ಮೊದಲ ಮಳೆಗೆ ತೋಯ್ದ ಕಪ್ಪು ಮಣ್ಣಿನ ಪರಿಮಳ. ಗೋಡೆಯ ಮೂಲೆಯಲ್ಲಿ ಹೆಣ್ಣು ಜೇಡವೊಂದು ತನ್ನ ಬಲೆಯ ಅಂಚಿನಲ್ಲಿ ಕುಳಿತು, ಉಗುರಿನಿಂದ ತಂತುವೊಂದನ್ನು ಮೀಟಿ  infrasonic  ನಿನಾದಗಳನ್ನು ಝೇಂಕರಿಸಿ ತನ್ನ ಜೊತೆಗಾರನಿಗೆ ಪ್ರೀತಿಸಲು ಆಹ್ವಾನ ನೀಡುತ್ತಿತ್ತು. ಛಾವಣಿಯಲ್ಲಿ ಗೂಡು ಕಟ್ಟಿದ್ದ ಜೋಡಿ ಪಾರಿವಾಳಗಳೆರಡು ಒಂದನ್ನೊಂದು ಮುದ್ದಿಸುತ್ತಿದ್ದವು. ನಂದೇನೂ ತಪ್ಪಿರಲಿಲ್ಲ. ಪ್ರಕೃತಿಯೇ ಉನ್ಮಾದದಲ್ಲಿ ತೇಲುತ್ತಿರುವಾಗ ನಾನಾದರೂ ಏನು ಮಾಡಬಹುದಿತ್ತು? ಮೊದಲ ಮಳೆ, ಮಣ್ಣಿನ ಗಂಧ, ಮಧುರ್ ಎಂಬ ನಿನ್ನ ಹೆಸರು, ಕಣ್ಣ ಹೊಳಪು, ತುಟಿಯ ತಿರುವು, ದನಿಯಲ್ಲಿನ ಕಂಪನ, ತುಟಿಯ ಮೇಲಿನ ಮಚ್ಛೆ, ಕೆನ್ನೆಗಳ ಗುಳಿ ಎಲ್ಲವೂ ಸೇರಿ......... ಹ್!.. ಎದೆಯ ನಿಹಾರಿಕೆಯ ಮೇಲೆ ಉಲ್ಕೆಯೊಂದು ಧಗಧಗಿಸಿ ಉರಿದು ಬಿದ್ದಂತಾಯಿತು. ಹದಿನೇಳು ವರ್ಷಗಳ ನನ್ನ ಪರಿಶುದ್ಧವಾದ ಯೌವನ ಮೊದಲ ಬಾರಿಗೆ ಅಪವಿತ್ರವಾಗಿ ಹೋಯಿತು!

               ಆಮೇಲೇಕೋ ಗೊತ್ತಿಲ್ಲ, ನೀನು ಹತ್ತು ದಿನ ಕಾಣಿಸಿಕೊಳ್ಳಲೇ ಇಲ್ಲ. ನಮ್ಮ ಕ್ಲಾಸ್‌ರೂಮು, ಫಿಸಿಕ್ಸ್ ಲ್ಯಾಬ್, ಲೈಬ್ರರಿ, ಕೆಫೆಟೇರಿಯ, ಆಡಿಟೋರಿಯಮ್ ನಿನ್ನನ್ನು ನಾನು ಹುಡುಕದ ಜಾಗಗಳೇ ಇಲ್ಲ. ಇನ್ನೇನು ನೀನು ಕಳೆದೇಹೋದೆ ಎಂದು, ಮಾಮು ಕ್ಯಾಂಟೀನಿನಲ್ಲಿ ಕುಳಿತು ಸಿಗರೇಟು ಉರಿಸಿ, ಅರ್ಧ ಟೀ ಕುಡಿದು, ಮತ್ತೊಂದು ಸಿಗರೇಟಿಗೆ ಕಿಡಿ ತಾಕಿಸುವ ಹೊತ್ತಿಗೆ ಸರಿಯಾಗಿ ನೀನು ಪ್ರತ್ಯಕ್ಷವಾಗಿದ್ದೆ. ಹಾಗೆ ಕಂಡವಳು ಕಣ್ಣ ತುದಿಯಲ್ಲೇ ನನ್ನ ನೋಡಿ ನಕ್ಕ ನಿಮಿಷದಲ್ಲಿಯೇ, ಇನ್ನು ನಿನ್ನ ಪ್ರೀತಿಸುವುದೊಂದನ್ನು ಬಿಟ್ಟು ಮತ್ತೇನೂ ಮಾಡಬಾರದು ಎಂದು ನಿರ್ಧರಿಸಿದ್ದೆ. ಆ ನಂತರದ ನನ್ನ ಬದುಕಿನ ಏಳು ವರ್ಷಗಳಲ್ಲಿ ನಾನು ನಿನ್ನ ಪ್ರೀತಿಸುವುದೊಂದನ್ನು ಬಿಟ್ಟು ಮತ್ತೇನೂ ಮಾಡಲೇ ಇಲ್ಲ. ನನ್ನ ಟೆಕ್ಸ್ಟ್ ಬುಕ್ಕು, ನೋಟ್ಸು, ಅಸೈನ್‍ಮೆಂಟುಗಳನ್ನು ರಾಶಿ ಹಾಕಿ ಬೆಂಕಿ ಇಟ್ಟ ದಿನ ನಾನು ನಿನ್ನ  officially  ಪ್ರೀತಿಸಲು ಶುರುಮಾಡಿದ್ದೆ. ಶಿಸ್ತಿನಿಂದ, ನಿಯತ್ತಿನಿಂದ, professional ಆಗಿ ಪ್ರೀತಿ ಮಾಡಲು ಹೊರಟವನಿಗೆ ಈ ಫಿಸಿಕ್ಸು, ಕೆಮಿಸ್ಟ್ರಿ, ಮ್ಯಾಥಮೆಟಿಕ್ಸ್‌ನಂತಹ ಬ್ಯಾಡ್ ಹ್ಯಾಬಿಟ್ಸು ಇರಲೇಬಾರದು!

                  ಅವತ್ತಿನಿಂದ ಒಂದು ವರ್ಷಗಳ ಕಾಲ, ನಿನ್ನ ಸತ್ತು ಹೋಗುವಷ್ಟು ಉನ್ಮತ್ತನಾಗಿ ಪ್ರೀತಿಸಿದೆ. ನೀನು ನಂಗೆ ದಿನ ದಿನಕ್ಕೂ ಹೆಚ್ಚು ಅರ್ಥವಾಗುತ್ತಾ, ಅರ್ಥವಾದಷ್ಟೂ ಹೆಚ್ಚು ಇಷ್ಟವಾಗುತ್ತಾ ಹೋದೆ. ನಿನ್ನ ಕಡುನೀಲಿ ಕೈನೆಟಿಕ್ ಹೋಂಡಾದ ರಿಜಿಸ್ಟರ್ ನಂಬರ್ KA13 G 1048, ನೀನು ಪ್ರತಿ ರಾತ್ರಿ ಜೊತೆಗೆ ಮಲಗಿಸಿಕೊಳ್ಳುತ್ತಿದ್ದ ಟೆಡ್ಡಿಬೇರ್‌ನ ಹೆಸರು ರಿಂಕೂ, ನಿನ್ನ ಬೆಸ್ಟ್ ಫ್ರೆಂಡ್ ಅನುಪ್ರಿಯ, ಮಳೆಗಾಲದಲ್ಲಿ ನಿಂಗೆ ಮತ್ತೆ ಮತ್ತೆ ಬೆಚ್ಚಗಿನ ಜ್ವರ ಬರುತ್ತೆ, ನಿಂಗೆ ಪೆಟ್ರೋಲಿನ ವಾಸನೆ, ಗಾಜರ್ ಕಾ ಹಲ್ವಾ ಮತ್ತು ಶಾರುಖ್ ಖಾನ್ ಇಷ್ಟ ಎನ್ನುವುದರಿಂದ ಹಿಡಿದು, ನೀವು ಶುದ್ಧ ಮಾಧ್ವ ಬ್ರಾಹ್ಮಣರು, ಪ್ರತಿದಿನ ಬೆಳಿಗ್ಗೆ ದೇವರ ಪೂಜೆ ಮಾಡುತ್ತಿದ್ದೆ ಮತ್ತು ಶನಿವಾರದ ಸಂಜೆಗಳಲ್ಲಿ ಸಂತೆ ಮಾರ್ಕೆಟ್‍ನ ತಳ್ಳುಗಾಡಿಗಳಲ್ಲಿ ಕದ್ದು ಆಮ್ಲೆಟ್ ತಿನ್ನುತ್ತಿದ್ದೆ ಎನ್ನುವವರೆಗೂ ನಂಗೆ ನಿನ್ನ ಬಗೆಗಿನ ಅತಿ ಚಿಕ್ಕ  details  ಕೂಡಾ ಗೊತ್ತಿತ್ತು. ಯಾಕೆ ಗೊತ್ತಾ ಮಧುರ್? ಆಗ ನಾನು ನಾನಾಗಿರುವುದಕ್ಕಿಂತ ಹೆಚ್ಚಾಗಿ ನಾನು ನೀನಾಗಿದ್ದೆ!

                 ಹಾಗೆ ಒಂದು ವರ್ಷದ ನನ್ನ ತಪಸ್ಸಿನಂತಹ ಪ್ರೀತಿಗೆ ಮೆಚ್ಚಿ, Aphrodite (goddess of love and beauty in greek myths) ವರ ನೀಡಿದ್ದಳು. 1996ರ Valentines day  ಸಂಜೆಯನ್ನು ನಾವಿಬ್ಬರೂ ತುಂಗಾನದಿಯ ದಡದಲ್ಲಿನ ಕಲ್ಲಿನ ಮೆಟ್ಟಿಲುಗಳ ಮೇಲೆ, ಬೆರಳುಗಳನ್ನು ಬೆಸೆದುಕೊಂಡು ಮೌನವಾಗಿ ಕುಳಿತು ಕಳೆದಿದ್ದೆವು. ಹಾಗೊಂದು ಸೋಮವಾರದ ಮಧ್ಯಾಹ್ನದ ಲಂಚ್ ಬ್ರೇಕ್‌ನಲ್ಲಿ ದೊರೆತ ಎರಡು ನಿಮಿಷಗಳ ಏಕಾಂತದಲ್ಲಿ ನೀ ನನ್ನ ಮೊದಲ ಸಲ ತಬ್ಬಿಕೊಂಡಿದ್ದೆ. ನಿನ್ನ ಮೊದಲ ಅಪ್ಪುಗೆ ದೊರೆತು ಹದಿನೈದು ವರ್ಷಗಳೇ ಕಳೆದಿದ್ದರೂ, ಈಗಿನ್ನೂ ಐದು ನಿಮಿಷಗಳ ಹಿಂದಷ್ಟೇ ನೀ ನನ್ನ ಅಪ್ಪಿಕೊಂಡಂತೆ ನಿನ್ನ ಬೆಚ್ಚಗಿನ ಉಸಿರು ನನ್ನ ಎದೆಯ ಮೇಲೆಲ್ಲಾ ಚೆಲ್ಲಿದೆ. ನಿಂಗೆ ನೆನಪಿದೆಯಾ ಮಧುರ್? ನಾವಿಬ್ಬರೂ ಜೊತೆಯಾಗಿ ಕುಳಿತು ನೋಡಿದ ಮೊದಲ ಸಿನಿಮಾದ ಹೆಸರು, ದಿಲ್ ತೋ ಪಾಗಲ್ ಹೈ. ಥಿಯೇಟರ್‌ನ ಕತ್ತಲಲ್ಲಿ ಒಂದು ವರ್ಷಗಳ ಕಾಲ ಕೂಡಿಟ್ಟಿದ್ದ ಮುತ್ತುಗಳ ಭಾರವನ್ನೆಲ್ಲಾ ನಿನ್ನ ಕಣ್ಣುಗಳ ಮೇಲೆ ಇಳಿಸಿದ ಕ್ಷಣ ಮನಸು ಮತ್ತು ತುಟಿ ಎರಡೂ ನಿರಾಳವಾಗಿದ್ದವು. ಆಮೇಲಿನ ಆರು ವರ್ಷಗಳನ್ನು ಒಬ್ಬರನ್ನೊಬ್ಬರು ಇನ್ನಿಲ್ಲದಷ್ಟು ಪ್ರೀತಿಸುತ್ತಾ, ಮುದ್ದು ಮಾಡುತ್ತಾ, ಜಗಳವಾಡುತ್ತಾ, ಕನಸು ಕಾಣುತ್ತಾ, ವರ್ಷಗಳು ಕಳೆದಷ್ಟೂ ಹೆಚ್ಚೆಚ್ಚು ಪೊಸೆಸಿವ್ ಆಗುತ್ತಾ ಕಳೆದುಬಿಟ್ಟೆವು.

                   ನಂತರದ ಆರು ವರ್ಷಗಳು ಒಂದು ಸುಂದರವಾದ ಕನಸಿನಂತೆ ಸರಿದುಹೋದವು. ಎಲ್ಲವೂ ಸರಿಯಾಗಿ ನಡೆಯುತ್ತಿದ್ದಾಗಲೇ, ಅದೊಂದು ಭಾನುವಾರದ ಮಧ್ಯಾಹ್ನ ನೀನು ನನ್ನ ರೂಮಿನ ಬಾಗಿಲಿನಲ್ಲಿದ್ದೆ. ಕಣ್ಣುಗಳು ಬಾಡಿಹೋಗಿದ್ದವು. ಹಣೆ ಮುಟ್ಟಿದರೆ ಬೆಂಕಿಯಂತಹ ಜ್ವರ ಸುಡುತ್ತಿತ್ತು. ಅವತ್ತು ನಿಂಗೆ ಅನ್ನ ತಿಳಿಸಾರು ಕಲೆಸಿ, ತುತ್ತು ಮಾಡಿ ತಿನ್ನಿಸಿ, ಸಿರಪ್ ಕುಡಿಸಿ, ಹಣೆ ಮತ್ತು ಕುತ್ತಿಗೆಗಳನ್ನು ವಿಕ್ಸ್ ಹಚ್ಚಿ ಬೆಚ್ಚಗೆ ಮಾಡಿ, ನನ್ನ ತೋಳಿನ ಮೇಲೆ ಮಲಗಿಸಿಕೊಂಡು ಕೆನ್ನೆ ತಟ್ಟಿ ನಿದ್ದೆ ಮಾಡಿಸುವ ಹೊತ್ತಿಗೆ ನನ್ನ ಕಣ್ಣ ತುದಿಯಲ್ಲಿ ನೀರಿತ್ತು. ಸಂಜೆ ಎದ್ದವಳು ಒಂದು ಮಾತನ್ನೂ ಆಡದೆ, ನನ್ನ ಹಣೆಗೊಂದು ಮುತ್ತಿಕ್ಕಿ ಹೊರಟಾಗಲೇ ನಂಗೆಲ್ಲಾ ಅರ್ಥವಾಗಿ ಹೋಯಿತು. ಅದಾಗಿ ನಾಲ್ಕು ತಿಂಗಳಿಗೆ ನೀನು ನಿನ್ನ ಸಾಫ್ಟ್‍ವೇರ್ ಎಂಜಿನಿಯರ್ ಗಂಡನೊಂದಿಗೆ ಯುರೋಪ್‍ನಲ್ಲಿದ್ದೆ.

              ನೀನು ನನ್ನ ಬಿಟ್ಟುಹೋದ ಮೆಲಿನ ನಾಲ್ಕು ವರ್ಷಗಳ ಒಂದೊಂದು ನಿಮಿಷವೂ ಭೀಕರವಾಗಿತ್ತು. ನಿನ್ನನ್ನು ಮರೆಯಲೆಂದು ಕುಡಿಯಲು ಶುರುಮಾಡಿದವನು ಕೊನೆಗೆ ನನ್ನನ್ನು ನಾನೇ ಮರೆತುಬಿಟ್ಟೆ. ಹಗಲೆಲ್ಲಾ ಕಫ್ ಸಿರಪ್‍ನ ನಶೆಯಲ್ಲಿ ಮುಳುಗಿರುತ್ತಿದ್ದರೆ, ರಾತ್ರಿ ನಿನ್ನ ನೆನಪುಗಳನ್ನು ನೆಂಚಿಕೊಂಡು ವಿಸ್ಕಿ ಹೀರಿ ಗಾಲಿಬ್‍ನ ಕವಿತೆಗಳನ್ನು ಗುನುಗುತ್ತ ಬಾರ್‌ಗಳಲ್ಲಿ, ರಸ್ತೆಗಳ ಮೇಲೆ, ಥಿಯೇಟರ್‌ನ ಗಾಂಧೀ ಕ್ಲಾಸ್‌ನಲ್ಲಿ, ಎಲ್ಲೆಂದರಲ್ಲಿ ಮಲಗಿ ಕಳೆಯುತ್ತಿದ್ದೆ. ಐದು ವರ್ಷಗಳ ಹಿಂದೆ ಅಂಥದೇ ಒಂದು ರಾತ್ರಿ, ನೀ ನನ್ನ ಬಿಟ್ಟುಹೋದ ನಾಲ್ಕನೇ ವರ್ಷದ ಆನಿವರ್ಸರಿ ಸೆಲೆಬ್ರೇಟ್ ಮಾಡಿ, ನನ್ನ CD 100  ಹತ್ತಿ ರಸ್ತೆಗೆ ಇಳಿದಿದ್ದೆನೋ ಇಲ್ಲವೋ, ಟಿಂಬರ್ ಲಾರಿಯೊದು ಬಂದು ಅಪ್ಪಳಿಸಿದ್ದಷ್ಟೇ ನೆನಪು. ಕಣ್ಣು ತೆರೆದಾಗ ಮೈಯೆಲ್ಲಾ ರಕ್ತ! ನರ್ಸ್ ಒಬ್ಬಳು ಬ್ಲಡ್ ಪ್ರೆಶರ್ ನೋಡುತ್ತಾ, ನೀವು ಬದುಕಿ ಬಂದಿದ್ದೇ ಹೆಚ್ಚು, ದೇವರು ದೊಡ್ಡೋನು ನೀವು ಸಾವನ್ನು ಗೆದ್ದು ಬಂದಿದ್ದೀರಿ ಅಂದಳು. ಪಾಪ, ಅವಳಿಗೇನು ಗೊತ್ತು, ನಾನು ಸತ್ತು ಅವತ್ತಿಗಾಗಲೇ ನಾಲ್ಕು ವರ್ಷಗಳಾಗಿದ್ದವು ಅಂತ!

                 ಇವತ್ತೇಕೋ ತುಂಬಾ ಮಾತನಾಡಿಬಿಟ್ಟೆ. ಇದು ನಿಂಗೆ ಬರೆದು ಹರಿದು ಹಾಕುತ್ತಿರುವ ಎಷ್ಟನೇ ಪತ್ರವೋ ನೆನಪಿಲ್ಲ. ಇವತ್ತಿಗಿಷ್ಟು ಸಾಕು. ಹೀಗೆಲ್ಲಾ ನಾನು ಮತ್ತೆ ಮತ್ತೆ ಜ್ವರ ಬಂದು ಮಲಗಬಾರದು. ಡಿಸ್‌ಛಾರ್ಜ್ ಮಾಡಿಸಿಕೊಂಡು ಮೊದಲು ಮನೆ ಸೇರಬೇಕು. ಇನ್ನೇನು ಮಧುರ್ ಸ್ಕೂಲ್‌ನಿಂದ ಬರುವ ಹೊತ್ತಾಯಿತು. ಮನೆಯಲ್ಲಿ ಬೇಕಾದಷ್ಟು ಕೆಲಸ ಹಾಗೆಯೇ ಉಳಿದಿವೆ, ಅವಳು ಬರುವುದರೊಳಗೆ ಅದನ್ನೆಲ್ಲಾ ಮಾಡಿ ಮುಗಿಸಬೇಕು. ಅವಳು ಬಂದ ತಕ್ಷಣ ಸೋಫಾದ ಮೇಲೆ ಕೂರಿಸಿ, ಷೂಗಳ ಲೇಸ್ ಬಿಚ್ಚಿ, ಸಾಕ್ಸ್ ತೆಗೆದು, ಟೆರೇಸ್‌ನ ಮೇಲೆ ಎತ್ತಿಕೊಂದು ಹೋಗಿ ನಕ್ಷತ್ರಗಳನ್ನು ತೋರಿಸುತ್ತಾ ಅವಳಿಗಿಷ್ಟವಾದ ಗಾಜರ್ ಕಾ ಹಲ್ವಾ ತಿನ್ನಿಸಬೇಕು. ಓಹ್! ನಿಂಗೆ ಮಧುರ್ ಯಾರು ಅಂತ ಹೇಳಲೇ ಇಲ್ಲ. ಮಧುರ್ ನನ್ನ ಮಗಳು. ಐದು ವರ್ಷಗಳ ಹಿಂದೆ ಒಂದು ಹೆಣ್ಣು ಮಗುವನ್ನು ದತ್ತು ಪಡೆದು, ಅದಕ್ಕೆ ನಿನ್ನದೇ ಹೆಸರಿಟ್ಟು, ಎದೆಗೆ ತಬ್ಬಿಕೊಂಡ ದಿನ ನಾನು ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದೆ. ನನ್ನ ಮಗಳು ನಂಗೆ ಮತ್ತೆ ಬದುಕುವುದನ್ನು ಹೇಳೀಕೊಟ್ಟಳು. ಒಂದು ಹೆಣ್ಣು ಮಗುವಿನ ಅಪ್ಪ ಆಗುವುದಕ್ಕಿಂತ ಅದ್ಭುತವಾದದ್ದು ಜಗತ್ತಿನಲ್ಲಿ ಇನ್ನೇನಿದೆ ಮಧುರ್? ಪ್ರತಿದಿನ ಬೆಳಿಗ್ಗೆ ಎದ್ದು ಅವಳಿಗೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿ, ಮೃದುವಾದ ಟವೆಲ್ಲಿನಲ್ಲಿ ಮೈ ಒರೆಸಿ, ಯುನಿಫಾರ್ಮ್ ಹಾಕಿ, ತಿಂಡಿ ತಿನ್ನಿಸಿ, ತಲೆ ಬಾಚಿ, ಪೌಡರ್ ಹಚ್ಚಿ, ಕಾಡಿಗೆ ತೀಡಿ, ದೃಷ್ಟಿ ತೆಗೆದು, ನನ್ನ ಎರಡೂ ಕೆನ್ನೆಗಳಿಗೂ ಒಂದೊಂದು ಮುತ್ತು ಪಡೆದು, ಸ್ಕೂಲ್ ಬಸ್ ಹತ್ತಿಸಿ ಈಚೆ ತಿರುಗಿದರೆ ನನ್ನ ಕಣ್ಣುಗಳು ಒದ್ದೆಯಾಗಿರುತ್ತವೆ. ಮತ್ತೆ ಅವಳು ಬರುವವರೆಗೆ ನಂಗೆ ಯಾರಿದ್ದಾರೆ ಮಧುರ್? ಸಂಜೆಯೆಲ್ಲಾ ಅವಳಿಗೋಸ್ಕರ ಕಾದು, ಅವಳು ಸ್ಕೂಲ್ ಬಸ್ ಇಳಿದು ’ಪಪ್ಪಾ’ ಅಂತ ಓಡಿ ಬಂದು ತಬ್ಬಿಕೊಂಡರೆ, ಬೆಳಿಗ್ಗೆಯಿಂದ ತಡೆದಿದ್ದ ಪ್ರೀತಿಯೆಲ್ಲಾ ಒಂದೇ ಸಲ ಉಕ್ಕಿ ಬಂದು ಅವಳಿಗಿಂತ ಗಟ್ಟಿಯಾಗಿ ತಬ್ಬಿಕೊಳ್ಳುತ್ತೇನೆ. ಆಮೇಲೆ ಅವಳ ಹೋಂವರ್ಕ್ ಮಾಡಿಸಿ, ಅವಳೊಂದಿಗೇ ರೈಮ್ಸ್ ಹೇಳಿ, ಜೊತೆಗೆ ಕುಳಿತುಕೊಂಡು ಕಾರ್ಟೂನ್ ನೆಟ್‍ವರ್ಕ್ ನೋಡಿ, ರಾತ್ರಿ ನನ್ನ ತೊಡೆಗಳ ಮೇಲೆ ಕೂರಿಸಿಕೊಂಡು, ಒಂದೊಂದು ತುತ್ತಿಗೂ ಒಂದೊಂದು ಕಥೆ ಹೇಳಿ ಊಟ ತಿನ್ನಿಸಿ, ಅವಳ ಕಾಲುಗಳಿಗೊಂದು ಮುತ್ತಿಕ್ಕಿ, ಅವಳ ಟೆಡ್ಡಿಬೇರ್‌ನ ಸಮೇತ ಅವಳನ್ನು ಎದೆಯ ಮೇಲೆ ತಬ್ಬಿಕೊಂಡು ಮಲಗಿ ಕೆನ್ನೆ ಸವರಿ ನಿದ್ದೆ ಮಾಡಿಸುತ್ತಾ ಕಣ್ಮುಚ್ಚಿದ್ದರೆ.......... ಅದನ್ನು ಮಾತುಗಳಲ್ಲಿ ಹೇಗೆ ಹೇಳಲಿ ಮಧುರ್,.. ದೇವರೂ ಕೂಡಾ ಇಂಥಹ ಸುಖವನ್ನು ಯಾವತ್ತೂ ಅನುಭವಿಸಿರಲಾರ!

                  ನಿಂಗೊತ್ತಾ ಮಧುರ್? ಅವಳಿದ್ದರೆ ಮನೆ ತುಂಬಾ ಅವಳ ಮಾತುಗಳು ಮತ್ತು ನಗುವಿನದ್ದೇ ಕಲರವ. ನನ್ನ ಮಗಳು ಯಾವಾಗಲೂ ನಗುತ್ತಾಳೆ, ಹಾಡುತ್ತಾಳೆ, ಫ್ಲವರ್ ವಾಸ್‌ನಿಂದ ಹಿಡಿದು ನನ್ನ ಕನ್ನಡಕದವರೆಗೆ ಕೈಗೆ ಸಿಕ್ಕಿದ್ದನ್ನೆಲ್ಲಾ ಮುರಿದು ಹಾಕುತ್ತಾಳೆ ಮತ್ತು ಟೀವಿಯಲ್ಲಿ ಶಾರುಖ್ ಕಂಡರೆ ಸೋಫಾ ಹತ್ತಿ ಕುಣಿಯುತ್ತಾಳೆ. ಈಗಂತೂ ಅದ್ಯಾರು ಕಲಿಸಿದರೋ ಇದೊಂದು ಕೆಟ್ಟ ಅಭ್ಯಾಸ, ನನ್ನ ಬೈಕಿನ ಪೆಟ್ರೋಲ್ ಟ್ಯಾಂಕಿನ ಮೇಲೆ ಕುಳಿತು, ಟ್ಯಾಂಕ್‌ನ ಮುಚ್ಚಳ ತೆರೆದು ಅದರೊಳಗೆ ಮೂಗು ತೂರಿಸುತ್ತಾಳೆ. ಆದರೆ ಇಷ್ಟೊಂದು ಖುಷಿ ಕೊಡುವ ನನ್ನ ಮಗು, ನನಗಂಥ ಈ ಜಗತ್ತಿನಲ್ಲಿ ಇರುವ ಒಂದೇ ಒಂದು ಜೀವ ಮಳೆಗಾಲ ಶುರುವಾಯಿತೆಂದರೆ ಸಾಕು, ಪದೇ ಪದೇ ಜ್ವರಕ್ಕೆ ಬೀಳುತ್ತಾಳೆ. ಅಂತಹ ಮಳೆಗಾಲದ ರಾತ್ರಿಗಳಲ್ಲಿ ಅದೆಷ್ಟು ಭಯವಾಗುತ್ತದೆಂದರೆ, ರಾತ್ರಿಯೆಲ್ಲಾ ಒಂದು ನಿಮಿಷವೂ ಕಣ್ಣು ಮುಚ್ಚದೇ ಅವಳನ್ನು ಎದೆಗೆ ಅವುಚಿಕೊಂಡು ಮಲಗಿ ಬಿಡುತ್ತೇನೆ. ಆದರೆ ಇದೆಲ್ಲಾ ಒಂದೆರಡು ದಿನಗಳಷ್ಟೇ. ಮತ್ತೆ ನನ್ನ ಮಧುರ್ ಮನೆ ತುಂಬಾ ಓಡಾಡುತ್ತಾಳೆ, ನನ್ನ ಬೆನ್ನ ಮೇಲೆ ಕುಳಿತು ಕಿವಿ ಹಿಂಡಿ ದಸರಾ ಮೆರವಣಿಗೆ ಹೊರಡಿಸುತ್ತಾಳೆ, ನನ್ನ ಯಾರೂ ಪ್ರೀತಿಸದಷ್ಟು ಪ್ರೀತಿಸುತ್ತಾಳೆ, ಮತ್ತು ಅದಕ್ಕಿಂತ ಹೆಚ್ಚು ಪ್ರೀತಿಸಿಕೊಳ್ಳುತ್ತಾಳೆ. ನಾನೀಗ ಸಂತೃಪ್ತ! ಇನ್ನೇನು ಮಳೆಗಾಲ ಶುರುವಾಯಿತು, ಮೊದಲು ಒಂದು ರೂಮ್ ಹೀಟರ್ ತರಬೇಕು. ಈ ಬಾರಿಯ ಮಳೆಗಾಲದಲ್ಲಿ ನನ್ನ ಮಗಳನ್ನು ಬೆಚ್ಚಗಿರಿಸಬೇಕು, ಮಳೆಯಿಂದ ಮತ್ತು ಮತ್ತೆ ಮತ್ತೆ ಕಾಡುವ ಜ್ವರದಿಂದ..

                                                                                                                        ಖುಷಿಯಿಂದ,

                                                                                                                           ...........

Sunday 17 June 2012

ನಿವೇದನೆ-೧



ನನ್ನ ನೂರ್,


ನಿನ್ನ ಅಪ್ಪುಗೆಯ ಸಹಾರೆ ತಪ್ಪಿಹೋಗಿ ಇವತ್ತಿಗೆ ಸರಿಯಾಗಿ ಹನ್ನೊಂದು ದಿನ, ಹನ್ನೆರಡು ರಾತ್ರಿ ಮತ್ತು ಅಷ್ಟೇ ಸಾಯಂಕಾಲಗಳು. ಈ ಕ್ಷಣಕ್ಕೂ ಅಲ್ಲಿ ನನ್ನ ಪುಟ್ಟ ಜೋಪಡಿಯ ಪ್ರತಿ ಮಣ್ಣಿನ ಹರಳಿನಲ್ಲೂ ನಿನ್ನ ಮೈಯ ಘಮವಿದೆ. ಕೆನ್ನೆಗಳ ಮೇಲೆ ನೀನಿತ್ತಿರೋ ಮುತ್ತುಗಳ ತೇವ. ಎದೆಯ ಮೇಲೆ ಮಲಗಿರುವ ಮೂರು ತಿಂಗಳ ಮಗು ಮುಹಬ್ಬತ್ ನಿನ್ನ ನೆನಪುಗಳಷ್ಟೇ ಅಗಾಧವಾದ ತನ್ನ ಕಣ್ಣುಗಳಿಂದ ಬಿಟ್ಟುಹೋದ ಅಮ್ಮೀಜಾನ್‍ಳನ್ನು ಹುಡುಕುತ್ತಿದೆ. ಮುಹಬ್ಬತ್‍ಗೆ ನೀನು ಬೇಕು. ನನಗೆ ನಿನ್ನ ಮುಹಬ್ಬತ್!


ಹಾಗೊಂದು ಮುಂಜಾವು ನೀ ನನಗೆ ಕಾಣದೇ ಹೋಗಿದ್ದರೆ, ಅಲ್ಲಾಹ್ ನನ್ನ ಅದೃಷ್ಟಹೀನ ಅಂಗೈನ ಮೇಲೆ ಅದೊಂದು ಬೆಳ್ಳಿಯ ರೇಖೆ ಗೀಚದೆ ಹೋಗಿದ್ದರೆ, ಈ ಫಕೀರನ ಬದುಕು ಎಷ್ಟೊಂದು ಖಾಲಿ ಖಾಲಿಯಾಗಿರುತ್ತಿತ್ತು. ನೀ ಬರುವ ಮುನ್ನ ಅಲ್ಲಿ ಪೇಷಾವರ್ ನಗರಿಗೆ ಆತ್ಮವೇ ಇರಲಿಲ್ಲ. ನೀ ಬಂದ ಮೇಲೇ ಅಲ್ಲವೇ ಮೇರಿ ಜಾನ್, ಮೈ ತೋಯುವಷ್ಟು ಬೆಳದಿಂಗಳು ಸುರಿದಿದ್ದು, ಮನಸ್ಸು ಹೂವಾಗುವಷ್ಟು ಮಳೆ ಬಿದ್ದಿದ್ದು ಮತ್ತು ನಿನ್ನ ಸ್ಪರ್ಶದಷ್ಟೇ ಹಿತವಾದ ಬಿಸಿಲು ಚೆಲ್ಲಿದ್ದು.


ನಿನ್ನನ್ನು ಮೊದಲ ಸಲ ನೋಡಿದ ಮುಂಜಾವು ಇನ್ನೂ ಸ್ಪಷ್ಟವಾಗಿ ನೆನಪಿದೆ. ಪೇಷಾವರದ ಗಡಿ ಕಾಯುವ ಸಿಪಾಯಿಯಾಗಿದ್ದ ನನ್ನನ್ನು ಖಾವಂದರಾದ ನವಾಬ್ ಅಕ್ಬರ್‌ಖಾನ್‍ರ ಆಸ್ಥಾನದ ಮನ್‍ಸುಬಹ್‍ದಾರ್ ದಿಲ್‍ಷಾದ್‍ಖಾನ್‍ರ ಮಹಲಿನ ಪಹರೆಗೆ ನೇಮಿಸಲಾಗಿತ್ತು. ಮುಂಜಾವು ಖಾವಂದರು ಮರ್ದಾನಾದ ಹಜ಼ಾರದಲ್ಲಿ ಹುಕುಮು ನೀಡುತ್ತಿದ್ದಾಗ, ಅವರ ಬಲಭಾಗದ ಮಹಡಿಯ ಮೇಲಿನ ಜನಾನದ ಕಿಟಕಿಯ ಸರಳುಗಳ ಹಿಂದೆ ಅರ್ಧ ನಕಾಬು ಜಾರಿದ ಕಣ್ಣುಗಳೆರಡು ನನ್ನನ್ನೇ ದಿಟ್ಟಿಸುತ್ತಿದ್ದವು. ತಿಳಿಜೇನು ಬಣ್ಣದ ಕಣ್ಣಗೊಂಬೆಗಳ ಸುತ್ತ ಮೊಲದ ಬಿಳುಪು, ಸಾವಿರ ರಂಜ಼ಾನ್ ಚಂದ್ರರ ಹೊಳಪು.. ನಾನೆಂಥ ಹುಚ್ಚ, ಇದೆಂತಹ ದಿವಾನಗಿ ನಂದು ನೀನೇ ಹೇಳು? ಜಗತ್ತಿನ ಹಕ್ಕಿಗಳ ಪುಚ್ಛಗಳನೆಲ್ಲಾ ಹೆಕ್ಕಿ ತಂದು ಮಸಿಯಲ್ಲಿ ಅದ್ದಿ ಬರೆದರೂ, ನಿನ್ನ ಕಣ್ಣುಗಳ ಬಗ್ಗೆ ಬರೆದು ಮುಗಿಸಲಾದೀತೆ ಜಾನಮ್? ಅವತ್ತೇ ಈ ಖಾಲಿ ಎದೆಯ ಮೇಲೆ ನೀನು ಮುಹಬ್ಬತ್ ಎಂಬ ಭಿತ್ತಿಪತ್ರ ಅಂಟಿಸಿ ಹೋಗಿದ್ದೆ. ಅದು ಸನ್ ೧೮೦೩ನೇ ಇಸವಿ, ಪವಿತ್ರ ರಂಜ಼ಾನ್ ಮಾಸದ ಹದಿಮೂರನೇ ದಿನ!

ನಂತರ ನೀನು ನಿನ್ನ ನೌಕರಾನಿಯೊಂದಿಗೆ ’ಅಜ಼ೀಮ್ ಷಾ’ ದರ್ಗಾಕ್ಕೆ ಬಂದಾಗಲೆಲ್ಲಾ, ನಿಮ್ಮ ಅಬ್ಬಾಜಾನ್ ನಿನ್ನ ರಕ್ಷಣೆಗೆ ನನ್ನನ್ನೇ ಕಳಿಸುತ್ತಿದ್ದರು. ದರ್ಗಾದ ಹೊರಗೆ ನೀನು ಡೋಲಿಯಿಂದ ಇಳಿದ ಕ್ಷಣ, ನಿನ್ನ ಪರಿಮಳವನ್ನು ಹುಡುಕಿ ನನ್ನ ಉಸಿರು ಬಳಲುತ್ತಿತ್ತು. ವಾಪಸು ಮಹಲಿಗೆ ಬರುವ ದಾರಿಯಲ್ಲಿ ಡೋಲಿ ಹೊರುವವನನ್ನು ಪಕ್ಕಕ್ಕೆ ಸರಿಸಿ, ತುಸು ದೂರ ನಾನು ಡೋಲಿಗೆ ಹೆಗಲು ಕೊಡುತ್ತಿದ್ದೆ. ಅಷ್ಟು ಮಾತ್ರದ ಅದೃಷ್ಟ ಕರುಣಿಸಿದ್ದಕ್ಕಾಗಿ ನಾನು ಖುದಾನ ಸನ್ನಿದಿಯಲ್ಲಿ ಸಾವಿರ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೆ.


ನನ್ನ ಜನ್ಮಗಳ ದುವಾಗಳಿಗೆ ಫಲ ಸಿಕ್ಕ ದಿನವನ್ನು ಹೇಗೆ ಮರೆಯಲಿ? ಮಹಲಿನಲ್ಲಿ ಬೆಳೆದ ಹುಡುಗಿ, ಅವತ್ತು ಸಂಜೆ ನನ್ನ ಜೋಪಡಿಯ ಕಪ್ಪು ನೆಲದ ಮೇಲೆ ಕಾಲಿಟ್ಟಿದ್ದೆ. ಪೇಷಾವರ ಮುಳುಗಿ ಹೋಗುವಷ್ಟು ಮಳೆ ಸುರಿಯುತ್ತಿತ್ತು ಆ ಹೊತ್ತಲ್ಲಿ. ತಡಿಕೆಯ ಕಿಂಡಿಗಳಿಂದ ಮಳೆನೀರು ಸೋರಿ ನೆಲ ಕೆಸರಾಗಿತ್ತು. ಹಸೀ ನೆಲದ ಮೇಲೆ, ನಿನ್ನ ನೂಪುರದ ನಾದದಷ್ಟೇ ನಯವಾದ ಪಾದಗಳನ್ನು ಊರುತ್ತ ನಡೆದುಬಂದೆ. ಹಾಳಾದ ಮಳೆ ಬರದೇ ಹೋಗಿದ್ದರೆ, ತೋಟದಿಂದ ಗುಲಾಬಿ ಹೂಗಳ ಪಕಳೆಗಳನ್ನು ಬಿಡಿಸಿ ತಂದು ನೆಲದ ಮೇಲೆ ಸುರಿಯುತ್ತಿದ್ದೆ. ಜೋಪಡಿಯ ಬಾಗಿಲಿನಿಂದ ನನ್ನ ಮಂಚಕ್ಕೆ ಮೂರು ಹೆಜ್ಜೆ, ನೀನು ಹನ್ನೆರಡು ಹೆಜ್ಜೆಗುರುತುಗಳನ್ನು ಮೂಡಿಸಿ ನನ್ನ ಸನಿಹಕ್ಕೆ ಬಂದೆ. ಸುಮ್ಮನೇ ಬರಲಿಲ್ಲ, ಬಂದವಳು ಗೋಡೆಗೆ ತೂಗಿಹಾಕಿದ್ದ ಚಲಿಸುವುದನ್ನು ಮರೆತಿದ್ದ ಗಡಿಯಾರಕ್ಕೆ ಕೀಲಿ ಕೊಟ್ಟು, ಲಾಂದ್ರದೊಳಕ್ಕೆ ಎಣ್ಣೆ ಸುರಿದೆ. ಲಾಂದ್ರದ ಬೆಳಕು ನಿಧಾನವಾಗಿ ನಮ್ಮಿಬ್ಬರ ಮೇಲೆ ಚೆಲ್ಲಿತು. ಆಗ ಸರಿಯಿತು ನಕಾಬು! ಸುಭನಲ್ಲಾಹ್!! ಅಲ್ಲಿಯವರೆಗೆ ನಾನು ನೋಡಿದ್ದ ಸೌಂದರ್ಯವೆಲ್ಲ ನಿನ್ನ ಪಾದದ ಕೆಳಗಿನ ಧೂಳಲ್ಲದೇ ಇನ್ನೇನು? ಬೊಗಸೆಯ ತುಂಬಾ ಮಳೆನೀರು ಹಿಡಿದು, ಅದರಲ್ಲಿನ ನಿನ್ನ ಬಿಂಬವನ್ನು ಕಣ್ಣುಗಳೊಳಕ್ಕೆ ಬಸಿದುಕೊಳ್ಳುತ್ತಿದ್ದೆ. ನಿನ್ನ ಕಣ್ಣುಗಳಿಗೆ ಕಣ್ಣು ಸೇರಿಸುವಷ್ಟು ಧೈರ್ಯ ನಿಮ್ಮ ಅಬ್ಬಾಜಾನ್‍ರ ಕೆಳಗಿನ ಸಾಮಾನ್ಯ ಸಿಪಾಯಿಯಾದ ನನಗೆಲ್ಲಿಂದ ಬಂದೀತು? ನೀ ಹೋಗುವ ಮುಂಚೆ ನಿನ್ನ ಬೆರಳುಗಳು ನನ್ನ ತಾಕಿದವು. ನಿನ್ನ ದೇಹದ ಕಂಪನವೊಂದು ನಿನ್ನ ಕಿರುಬೆರಳಿನ ಮೂಲಕ ನನ್ನ ದೇಹದಲ್ಲಿ ಪ್ರವಹಿಸಿ ಎದೆಯಲ್ಲಿ ಝೇಂಕರಿಸಿತು!

ಅವತ್ತೇ ಕೊನೆ, ಆಮೇಲೆ ನಾನು ನಾನಾಗಿ ಉಳಿಯಲೇ ಇಲ್ಲ. ನಿನ್ನ ನೆನಪುಗಳ ಬೆಂಕಿಗೆ ನನ್ನ ಸಂಜೆಗಳು ಆಹುತಿಯಾದವು. ಕನಸಿನಲ್ಲಿ ನೀನು ಬರಬಹುದೆಂಬ ಅತಿ ಚಿಕ್ಕ ಆಸೆ ಹೊತ್ತು ನಿದ್ದೆಯೂ ಎಚ್ಚರವಾಗಿರುತ್ತಿತ್ತು. ಪ್ರೀತಿಯ ರಾವೀ ನದಿಯಲ್ಲಿ ನಿನ್ನ ಹೆಸರಿನ ಪ್ರಣತಿಗಳ ಮೆರವಣಿಗೆ ಹೊರಟಿತು. ನಂಗೆ ಇಷ್ಟು ಮಾತ್ರ ಅರ್ಥವಾಗಿ ಹೋಯಿತು, ನೀನು ಇಲ್ಲಿಯವಳಲ್ಲವೇ ಅಲ್ಲ. ಯಾವುದೋ ದೂರದ ನಕ್ಷತ್ರ ಲೋಕದಿಂದ, ನನ್ನ ವಿಷಾದಗಳ ವಿಷದ ಬಟ್ಟಲಿಗೆ, ಮುಹಬ್ಬತ್ ಎಂಬ ಮಧು ಸುರಿಯಲು ಬಂದ ಕಿನ್ನರಿ ನೀನು!


ಷಹಜ಼ಾದೇ ದಿಲ್‍ಷಾದ್‍ಖಾನ್ ನಿನ್ನ ನಿಕಾಹ್ ಕುರಿತು ಮಾತನಾಡಿದ ದಿನ, ನಿನ್ನ ಕಣ್ಣುಗಳು ಸಮುದ್ರವಾಗಿದ್ದವು. ಅವತ್ತು ನಮಗೆ ಪೇಷಾವರ್ ತೊರೆಯದೆ ಬೇರೆ ದಾರಿಯಾದರೂ ಎಲ್ಲಿತ್ತು? ನಾವು ಪೇಷಾವರ್ ಬಿಟ್ಟ ಮರುಕ್ಷಣವೇ, ನಿಮ್ಮ ಅಬ್ಬಾಜಾನ್‍ರ ಸೇನೆಯ ತುಕಡಿಯೊಂದು ನಮ್ಮ ಬೆನ್ನ ಹಿಂದೆಯೇ ಬರಲಿದೆ ಎಂಬುದು ನಮ್ಮಿಬ್ಬರಿಗೂ ತಿಳಿದಿತ್ತು. ಪೇಷಾವರ್‌ನಿಂದ ಲಾಹೋರ್ ತಲುಪುವ ಮಧ್ಯೆ ಎಷ್ಟು ಕಾಡುಗಳು, ಅದೆಷ್ಟು ಹಳ್ಳಿಗಳು, ಕೊನೆಯೇ ನಿಲುಕದ ರಸ್ತೆಗಳು, ಇರುಕಾದ ಪರ್ವತಗಳು, ಸಾವಿನ ಕಣಿವೆಗಳು... ನಮ್ಮ ಪ್ರೀತಿಯ ಆಸರೆಯೊಂದು ಇಲ್ಲದೇ ಹೋಗಿದ್ದರೆ ಇದೆಲ್ಲವನ್ನು ದಾಟಿಯೂ ಬದುಕಿರಲು ಹೇಗೆ ಸಾಧ್ಯವಾಗುತ್ತಿತ್ತು?


ಪೇಷಾವರ್‌ನಲ್ಲಿ ಮುಳುಗಿದ ಸೂರ್ಯ ಲಾಹೋರಿನಲ್ಲಿ ಉದಯಿಸಿದ್ದ. ಲಾಹೋರದ ಬೀದಿಗಳಲ್ಲಿ ನಿನ್ನ ಕೈ ಬೆರಳುಗಳನ್ನು ಹಿಡಿದು ನಡೆಯುತ್ತಿದ್ದರೆ, ಜನ್ನತ್ ಇದಕ್ಕಿಂತ ಅಧ್ಬುತವಿರಲು ಸಾಧ್ಯವೇ ಎಂದು ನಾನು ಯೋಚಿಸುತ್ತಿದ್ದೆ. ಈಗ ನಮ್ಮಿಬ್ಬರ ಪ್ರೀತಿಯ ಕುರುಹಾಗಿ ನಮ್ಮ ಮಗುವಿತ್ತು. ಅದಕ್ಕೆ ’ಮುಹಬ್ಬತ್’ ಎಂಬ ಹೆಸರಿಟ್ಟ ದಿನ, ಕಲ್ಲುಸಕ್ಕರೆ ತಿಂದು ನಾವು ಮೂರೂ ಜೀವಗಳು ಸಂಭ್ರಮಿಸಿದ್ದೆವು. ಇದೆಲ್ಲಾ ಖುಷಿ, ಇಂಥಹ ದಿವ್ಯ ಸಂತೋಷದ ಅಂತ್ಯ ಕೆಲವೇ ದಿನಗಳ ಸನಿಹದಲ್ಲಿದೆ ಎಂಬ ಅರಿವಿದ್ದರೂ, ನಮ್ಮ ಪ್ರೀತಿಯ ದಿನಗಳಲ್ಲಿ ಅಂತಹ ಭಯಗಳು ನಮ್ಮನ್ನು ಘಾಸಿಗೊಳಿಸಲಿಲ್ಲ.


ಸನ್ ೧೮೦೫ರ ಹೊಸ ವರ್ಷದ ಮೊದಲ ದಿನದ ಮುಂಜಾವು, ಪೇಷಾವರ್‌ನ ಸೈನಿಕರು ನಮ್ಮ ಜೋಪಡಿಯ ಬಾಗಿಲಿನಲ್ಲಿದ್ದರು. ನಿನ್ನನ್ನು ಮತ್ತೆ ಪೇಷಾವರಕ್ಕೆ ಎಳೆದೊಯ್ಯಲಾಯಿತು. ನಾನೀಗ ಲಾಹೋರದ ಜೈಲಿನ ಬಂಧಿ. ಷಹಜ಼ಾದೇ ನವಾಬರು ನನಗೆ ಮರಣ ಶಿಕ್ಷೆ ವಿಧಿಸಿದ್ದಾರೆ. ನಾಳೆ ಮುಂಜಾನೆ ನನ್ನ ಕುತ್ತಿಗೆಗೆ ಸಾವಿನ ಕುಣಿಕೆ ಬೀಳುತ್ತದೆ. ನನ್ನ ಜೊತೆ ಸಾವಿದೆ. ನಿನ್ನೊಂದಿಗೆ ನಿನ್ನ ಅಬ್ಬಾಜಾನ್, ನಿನ್ನ ಪೇಷಾವರ್ ನಗರಿ ಇದೆ. ಆದರೆ ಮುಹಬ್ಬತ್? ಅಮ್ಮೀ, ಅಬ್ಬೂ ಇಲ್ಲದ ಮುಹಬ್ಬತ್ ಇನ್ನು ಅನಾಥ! ಆದರೂ ಅಲ್ಲಾಹ್ ಎಷ್ಟೊಂದು ಕರುಣಾಮಯಿ ನೋಡು? ಸಾವಿರ ಜನ್ಮಗಳಿಗಾಗುವಷ್ಟು ನಿನ್ನ ಪ್ರೀತಿ ಕೊಟ್ಟು, ಬದಲಿಗೆ ಕೇವಲ ಸಾವೆಂಬ ಪುಟ್ಟ ಕಂದಾಯ ಕಟ್ಟಿಸಿಕೊಳ್ಳುತ್ತಿದ್ದಾನೆ. ನಿನ್ನ ಪ್ರೀತಿಗೆ ಋಣಿ ನಾನು. ನನ್ನ ಮೇಲೆ ಕ್ಷಮೆ ಇರಲಿ ನೂರ್. ಎಲ್ಲಾ ಸವಾಲುಗಳನ್ನು ಎದುರಿಸಿ, ನಮ್ಮ ಕನಸಿನ ಗಮ್ಯವನ್ನು ಸೇರಿಸುವ ಹಡಗು ನನ್ನ ಬಳಿ ಇರಲಿಲ್ಲ. ನನ್ನಂಥ ನಿಕೃಷ್ಟ ತೇಲಿಬಿಟ್ಟ ಕಾಗದದ ನೌಕೆ ಖುದಾನ ಕರುಣೆ ಇದ್ದಷ್ಟು ಹೊತ್ತು ಮಾತ್ರ ಮುಂದೆ ಸಾಗುತ್ತಿತ್ತು!..



೦೫-೦೨-೧೮೦೫                                                                     ಅಲ್ಲಾಹ್ ಹಾಫೀಜ಼್!

ಲಾಹೋರ್