Monday 21 October 2013

ನಿನ್ನ ಕಣ್ಣುಗಳ ಪರಿಮಳವು...



ನಿನ್ನ ಕಣ್ಣುಗಳ ಪರಿಮಳವು ನನಗಷ್ಟೇ ಕೇಳಲಿ,
ನಿನ್ನ ಕನಸುಗಳ ಪರಿಚಯವು ನನಗಷ್ಟೇ ಆಗಲಿ,
ನೀ ನನ್ನನ್ನೇ ಹುಡುಕುವಾಗ ನಾ ಕಳೆದು ಹೋಗಲಿ,
ಮತ್ತೆ ನಾ ಸಿಗುವಷ್ಟರಲಿ ಪ್ರೀತಿ ಉಂಟಾಗಲಿ!

ಬರೀ ಮಾತಲ್ಲೇ ಹೊರಡಿಸಬಲ್ಲೆ,
ಹುಸಿ ಭರವಸೆಗಳ ಉತ್ಸವ;
ಆದರೂ ನೀ ನಂಬಲೇಬೇಕು,
ಎಷ್ಟೆಂದರೂ ನಾ ನಿನ್ನವ!

ನಾಳೆಗಳ ಚಿಂತೆ ಇನ್ನೇಕೆ,
ನಿನ್ನದೇ ಈ ಸಮಸ್ತ ಆಸ್ತಿ;
ಈ ಜೋಪಡಿ, ಆ ಅಂಗಳ ಮತ್ತು 
ಚೆಲ್ಲುವ ಬೆಳದಿಂಗಳು ಪೂರ್ತಿ!

ಹಗಲು ನಿನ್ನ ಪ್ರೀತಿಸಿ ದಣಿದು,
ರಾತ್ರಿ ಮತ್ತೆ ಬರುವೆ ನಿನ್ನದೇ ಬಳಿಗೆ;
ಮುನಿಸು ತೋರಿ ಕೊಲ್ಲದೆ ನನ್ನ,
ಸೆಳುದುಕೋ ನಿನ್ನ ಚಾದರದೊಳಗೆ!

Thursday 17 October 2013

ಕನಸು ಮತ್ತು ಎಚ್ಚರದ ನಡುವೆ..

ಕಾವ್ಯವೂ ಒಂದೊಂದು ಸಲ ಕೈಕೊಡುವುದು,
ಅದನ್ನು ಬಿಟ್ಟರೆ ಖಾಲಿ ಹಾಳೆಯಂತೆ!

     ಬೆಳಿಗ್ಗೆ ಮುಂಚೆ ಬಿದ್ದ ಕನಸಿನಲ್ಲಿ ನಾನು ಈ ಸಾಲುಗಳನ್ನು ಬರೆಯುತ್ತಿದ್ದೆ. ಈ ಎರಡು ಸಾಲು ಬರೆಯುವಷ್ಟರಲ್ಲಿ ಯಾರೋ ಬಾಗಿಲು ಬಡಿದು ಎಚ್ಚರವಾಗಿ ಕನಸು ಒಡೆಯಿತು. ಎದ್ದ ತಕ್ಷಣ ಈ ಸಾಲುಗಳನ್ನು ಬರೆದಿಟ್ಟುಕೊಂಡೆ. ಇದು ಕವಿತೆಯಾ? ನನಗೆ ಗೊತ್ತಿಲ್ಲ. ಇದು ನನ್ನ ಕನಸಲ್ಲಿ ಬಿದ್ದ ಕವಿತೆ ಎನ್ನೋಣವೆಂದರೆ ಕವಿತೆ ಎಲ್ಲಿಂದ ಬೀಳುತ್ತದೆ ಎಂಬ ಪ್ರಶ್ನೆ ಕಾಡುತ್ತದೆ. ಕನಸಿನಲ್ಲಿ ಹೊಳೆಯಿತು ಎಂದುಕೊಳ್ಳೋಣವೆಂದರೆ ಎಚ್ಚರದ ಸ್ಥಿತಿಯಲ್ಲಿಯೇ ಮುನಿಸಿಕೊಳ್ಳುವ ಕವಿತೆ ನಿದ್ದೆಯಲ್ಲಿ ಒಲಿಯಲು ಸಾಧ್ಯವೇ? ಪಂಪನ ಕಾಲದಲ್ಲೋ, ಕಡೇಪಕ್ಷ ಕುಮಾರವ್ಯಾಸನ ಕಾಲದಲ್ಲೋ ನಾನು ಬದುಕಿದ್ದರೆ ಲಘು, ಗುರು ಎಳೆದು ಈ ಸಾಲುಗಳು ಛಂದೋಬದ್ದವಾಗಿಲ್ಲ, ಇದು ಕವಿತೆಯೇ ಅಲ್ಲ ಎಂದು ನಿರ್ಧರಿಸಿ ಮರೆತುಬಿಡಬಹುದಿತ್ತು. ಅದಕ್ಕೆ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ. ಈ ಸಾಲುಗಳಿಗೆ ಅರ್ಥವಿಲ್ಲ ಎಂದು ನಿಮಗೆ ಅನ್ನಿಸಿದರೆ, ನಿಮ್ಮ ಸಮಯ ಹಾಳು ಮಾಡಿದ್ದಕ್ಕಾಗಿ ನನಗೆ ಕ್ಷಮೆಯಿರಲಿ. ಈ ಸಾಲುಗಳಿಗೆ ಯಾವುದಾದರೂ ಗಹನವಾದ ಅರ್ಥ ಹೊಳೆದರೆ ದಯವಿಟ್ಟು ನನ್ನ ಮೆಚ್ಚಿಕೊಳ್ಳಬೇಡಿ.  ಏಕೆಂದರೆ ಅಂಥಹಾ ಪಕ್ಷದಲ್ಲಿ, ಇದು ಯಾವುದೋ ಕಾಲದಲ್ಲಿ ಓದಿದ್ದ ಯಾರದೋ ಕವಿತೆಯ ಸಾಲೊಂದು ನನ್ನ ಕನಸಲ್ಲಿ ಮತ್ತೆ (ಸ್ವಲ್ಪ ಬದಲಾವಣೆಯೊಂದಿಗೆ?) ನೆನಪಾಗಿದ್ದಿರಬಹುದು. ಹಾಗಲ್ಲದೇ ಹೋದರೂ ಹೇಗಿದ್ದರೂ ಈ ಕವಿತೆ ನಿದ್ದೆಯಲ್ಲಿ ನನ್ನ ಚಾದರದೊಳಗೆ ಸೇರಿ ತಬ್ಬಿಕೊಂಡದ್ದರಿಂದ, ಅದು ತಬ್ಬಿಕೊಂಡವಳ ಔದಾರ್ಯವೇ ಹೊರತು ನನ್ನ ಪ್ರಯತ್ನ ಹೇಗಾದೀತು?



            ಕನಸಿನಿಂದ ಎದ್ದು ಕುಳಿತವನಿಗೆ ಸಿಗ್ಮಂಡ್ ಫ್ರಾಯ್ಡ್ ನೆನಪಾಗುತ್ತಿದ್ದಾನೆ. ಆತನ The Interpretation of Drems ಓದಿದ ನಂತರವೂ ಹಲವು ತಿಂಗಳುಗಳ ಕಾಲ ನನ್ನನ್ನು ಕಾಡಿದ ಕೃತಿ. ಆ ಪುಸ್ತಕದಲ್ಲಿ ಆತ Delboeuf ಎಂಬ ತತ್ವಶಾಸ್ತ್ರಜ್ಞನ ಅನುಭವವೊಂದನ್ನು ದಾಖಲಿಸಿದ್ದಾನೆ. ಒಮ್ಮೆ ಆತನಿಗೆ ಕನಸಿನಲ್ಲಿ "ಮಂಜಿನಿಂದ ಆವೃತವಾದ ತನ್ನ ಮನೆಯ ಅಂಗಳ ಕಾಣಿಸಿತು. ಆ ಮಂಜಿನ ಹೊದಿಕೆಯಲ್ಲಿ ಸಿಲುಕಿ ಹೆಪ್ಪುಗಡುತ್ತಿರುವ ಎರಡು ಹಲ್ಲಿಗಳು ಕಾಣುತ್ತವೆ. ಸ್ವಭಾವತಃ ಪ್ರಾಣಿಪ್ರಿಯನಾದ Delboeuf ಅವೆರಡು ಹಲ್ಲಿಗಳನ್ನು ಛಳಿಯಿಂದ ರಕ್ಷಿಸಿ, ಬೆಚ್ಚಗೆ ಮಾಡಿ, ಗೋಡೆಯ ಮೇಲೆ ಬೆಳೆದಿದ್ದ fern (ಅಂಟಾರ್ಟಿಕಾ ಹೊರತುಪಡಿಸಿ ಜಗತ್ತಿನ ಎಲ್ಲಾ ಭಾಗಗಳಲ್ಲೂ ಕಾಣಸಿಗುವ ಒಂದು ಜಾತಿಯ ಸಸ್ಯ. ನೀವೂ ನಿಮ್ಮ ಊರಿನಲ್ಲಿ ಇದನ್ನು ನೋಡಿರಬಹುದು. ಚಿತ್ರವನ್ನು ನೋಡಿ ನೆನಪಿಸಿಕೊಳ್ಳಿ) ತಿನ್ನಿಸುತ್ತಾನೆ. ಕನಸಿನಲ್ಲಿ ಆ ಸಸ್ಯದ ಹೆಸರು ಲ್ಯಾಟಿನ್ ಭಾಷೆಯ Asplenium ruta muralis ಎಂದು ಆತನಿಗೆ ತಿಳಿದಿರುತ್ತದೆ. ತಿನ್ನಿಸಿ ರಸ್ತೆಯೆಡೆಗೆ ನೋಡಿದರೆ ಸಾವಿರಾರು ಹಲ್ಲಿಗಳ ಮೆರವಣಿಗೆಯೊಂದು ತನ್ನತ್ತಲೇ ಸಾಗಿ ಬರುತ್ತಿರುವುದು ಕಾಣುತ್ತದೆ" ಇದಿಷ್ಟು ಕನಸು. ಎಚ್ಚರಗೊಂಡವನಿಗೆ ತಾನು ಫರ್ನ್‌ಗಳ ಬಗ್ಗೆ ಎಲ್ಲಿಯೂ ಓದಿಲ್ಲ, Asplenium ಎಂಬ ಹೆಸರನ್ನೇ ತನ್ನ ಜೀವಮಾನದಲ್ಲಿ ಎಂದೂ ಕೇಳಿಲ್ಲ ಮತ್ತು ತನಗೆ ಲ್ಯಾಟಿನ್ ಭಾಷೆಯೇ ತಿಳಿದಿಲ್ಲ ಎಂದು ನೆನಪಾಗುತ್ತದೆ. ಸುಮ್ಮನೆ ಕುತೂಹಲಕ್ಕೆ ಲ್ಯಾಟಿನ್ ಭಾಷೆಯಲ್ಲಿ ಫರ್ನ್‌ನ ಹೆಸರು ಹುಡುಕಿದಾಗ ಅದು Asplenium ruta muraria ಎಂದು ತಿಳಿದು ಅವನಿಗೆ ಅಚ್ಚರಿಯಾಗುತ್ತದೆ. ಮುಂದೆ ಹದಿನಾರು ವರ್ಷಗಳ  ಕಾಲ ಈ ಕನಸು ಆತನಿಗೆ ಬಗೆಹರಿಸಲಾಗದ ನಿಗೂಢ ಪ್ರಶ್ನೆಯಾಗಿಯೇ ಉಳಿಯುತ್ತದೆ. 



         ಹದಿನಾರು ವರ್ಷಗಳ ನಂತರ Delboeuf  ತನ್ನ ಹಳೆಯ ಸ್ನೇಹಿತನೊಬ್ಬನನ್ನು ಭೇಟಿಯಾಗುತ್ತಾನೆ. ಅಚಾನಕ್ಕಾಗಿ ಆತನ ಮನೆಯಲ್ಲಿದ್ದ herbarium (ಒಣಗಿಸಿದ ಹೂವುಗಳನ್ನು ಒತ್ತಿ ಕಾಗದಕ್ಕೆ ಅಂಟಿಸಿ ಮಾಡಿದ ಆಲ್ಬಂ, ಇದನ್ನು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡುವ ಪರಿಪಾಠವಿದೆ) ಒಂದನ್ನು ತೆರೆದು ನೋಡುತ್ತಾನೆ. ಅಲ್ಲಿ ಆತನ ಕನಸಿನಲ್ಲಿ ಕಂಡಿದ್ದ asplenium ಹೂವು ಕೂಡಾ ಕಾಣುತ್ತದೆ ಮತ್ತು ಆ ಹೂವಿನ ಕೆಳಗೆ asplenium ruta muraria ಎಂದು ತನ್ನದೇ ಕೈಬರಹದಲ್ಲಿ ಬರೆದಿದ್ದನ್ನು ನೋಡಿ ತನ್ನನ್ನು ಹದಿನಾರು ವರ್ಷ ಕಾಡಿದ ಕನಸಿನ ರಹಸ್ಯ ಬಗೆಹರಿದು ಆನಂದಗೊಳ್ಳುತ್ತಾನೆ. ಹದಿನೆಂಟು ವರ್ಷಗಳ ಹಿಂದೆ (ಕನಸು ಬೀಳುವ ಎರಡು ವರ್ಷ ಮೊದಲು) ತಾನಿದ್ದ ಊರಿಗೆ ಭೇಟಿ ನೀಡಿದ್ದ ಈ ಗೆಳೆಯನ ಸೋದರಿ ತನ್ನ ಸೋದರನಿಗೆ ಉಡುಗೊರೆ ನೀಡಲು ಈ herbarium ಕೊಂಡಾಗ, ಅದರಲ್ಲಿನ ಹೂವುಗಳ ಲ್ಯಾಟಿನ್ ಹೆಸರುಗಳನ್ನು botanist ಒಬ್ಬ  ಒಂದೊಂದಾಗಿ ಹೇಳುತ್ತಾ ಹೋದ ಹಾಗೆ ತಾನು  ಅದನ್ನು ಯಾಂತ್ರಿಕವಾಗಿ ಬರೆದುಕೊಟ್ಟಿದ್ದು ನೆನಪಾಗುತ್ತದೆ. ಮುಂದೊಂದು ದಿನ ಪತ್ರಿಕೆಯೊಂದರ ಹಲವು ವರ್ಷಗಳ ಹಿಂದಿನ ಸಂಚಿಕೆಯೊಂದನ್ನು ತಿರುವಿ ಹಾಕುತ್ತಿದ್ದಾಗ ಅದರಲ್ಲಿ ತಾನು ಕನಸಲ್ಲಿ ಕಂಡಿದ್ದ ಸಾವಿರಾರು ಹಲ್ಲಿಗಳ ಮೆರವಣಿಗೆಯ ಚಿತ್ರವನ್ನು ನೋಡಿ ತಾನು ಕೆಲವು ಕಾಲ ಆ ಪತ್ರಿಕೆಗೆ ಚಂದಾದಾರನಾಗಿದ್ದುದು ನೆನಪಾಗಿ ತನ್ನ ಕನಸಿನ ಹೀಂದಿನ ಪ್ರೇರಣೆಗಳು (stimuli) ಇನ್ನಷ್ಟು ಸ್ಪಷ್ಟವಾಗಿ  ನಿರಾಳನಾಗುತ್ತಾನೆ.

          ನಮ್ಮ ಕನಸುಗಳಲ್ಲಿ ಕಾಣುವ ಯಾವ ಚಿತ್ರವೂ, ಯಾವ ಮುಖವೂ ಅಪರಿಚಿತವಲ್ಲ. ಸುಮ್ಮನೇ ಯೋಚಿಸಿ, ನೀವಿವತ್ತು ಬೆಂಗಳೂರಿನ ಟ್ರಾಫಿಕ್ಕಲ್ಲಿ ಆಫೀಸು ಸೇರಿ, ಕೆಲಸ ಮುಗಿಸಿ, ಸಂಜೆ ಮನೆ ಸೇರಿ ಟಿವಿ ನೋಡಿ ಮಲಗುವಷ್ಟರಲ್ಲಿ ಏನಿಲ್ಲವೆಂದರೂ ಸಾವಿರ ಮುಖಗಳನ್ನು ನೋಡುತ್ತೀರಿ. ಅದರಲ್ಲಿ ಏನಿಲ್ಲವೆಂದರೂ 990 ಮುಖಗಳನ್ನು ಅವತ್ತಿಗೇ ಮರೆತುಬಿಡುತ್ತೀರಿ. ಆದರೆ ಎಷ್ಟೋ ವರ್ಷಗಳ ನಂತರ ಆ 990 ಮುಖಗಳಲ್ಲಿಯೇ ಒಂದು ಮುಖ ನಿಮ್ಮ ಕನಸಲ್ಲಿ ಕಾಣಿಸಿಕೊಳ್ಳಬಹುದು. ನಿನ್ನೆ ರಾತ್ರಿ ನಿಮ್ಮ ಕನಸಲ್ಲಿ ಬಂದ ಅಪರಿಚಿತ ಮುಖವೊಂದು ಜೀವ ಪಡೆದು ಇವತ್ತು ನಿಮ್ಮ ಕಣ್ಣ ಮುಂದೆಯೇ ಬಂದರೆ ಎಷ್ಟು ರೋಮಾಂಚನವಾಗಬಹುದು ಊಹಿಸಿ! ನಮ್ಮಲ್ಲಿ ಹೆಚ್ಚಿನವರಿಗೆ ನಾವು ನಿದ್ದೆ ಮಾಡುವುದು ಆಯಾಸ ಪರಿಹಾರಕ್ಕೆ ಎಂಬ misconception ಇದೆ. ಖಂಡಿತಾ ಅಲ್ಲ! ನಾವು ನಿದ್ದೆ ಮಾಡುವುದೇ ಕೇವಲ ಕನಸು ಕಾಣುವುದಕ್ಕಾಗಿ. ಮನುಷ್ಯ ಬೌದ್ದಿಕವಾಗಿ ಬೆಳೆಯುತ್ತಾ ಹೋಗುವುದೇ ಕನಸಿನಲ್ಲಿ. ಈ ಬೆಳವಣಿಗೆಯನ್ನು ನೀವೂ ಅನುಭವಿಸಬಹುದು. ಇಲ್ಲಿಯವರೆಗೆ ನೀವು ಆಡಿರದ ಹೊಸತೊಂದು ಕಾರ್ ರೇಸ್ ಗೇಮ್ ಅನ್ನು ನಿಮ್ಮ ಮೊಬೈಲ್‌ನಲ್ಲೋ, ಕಂಪ್ಯೂಟರ್‌ನಲ್ಲೋ ಆಡಿನೋಡಿ. ಮೊದಲ ದಿನ ನೀವು ಮತ್ತೆ ಮತ್ತೆ ನಿಮ್ಮ ಮುಂದಿರುವ ಕಾರಿಗೆ ಡಿಕ್ಕಿ ಹೊಡೆಯುತ್ತೀರಿ. ಕಾರು ರಸ್ತೆ ಬಿಟ್ಟು ಅಡಾದಿಡ್ಡಿಯಾಗಿ ಓಡುತ್ತದೆ. ಎಲ್ಲಿ ಬ್ರೇಕ್ ಹಿಡಿಯಬೇಕೆಂದೇ ತಿಳಿಯದೇ ಕಾರನ್ನು ಪಲ್ಟಿ ಹೊಡೆಸುತ್ತೀರಿ. ನಾಳೆ ಇದೇ ಗೇಮನ್ನು ಮತ್ತೆ ಆಡಿ. ನಿಮಗೇ ಅಚ್ಚರಿಯಾಗುವಷ್ಟು ನಿಮ್ಮ ಆಟ ಸುಧಾರಿಸಿರುತ್ತದೆ. ತಪ್ಪುಗಳು ಕಡಿಮೆಯಾಗಿರುತ್ತವೆ. ಕೆಲವೇ ದಿನಗಳಲ್ಲಿ ಈ ಆಟ ನೀರು ಕುಡಿದಷ್ಟು ಸರಾಗ ಎನ್ನಿಸುತ್ತದೆ. ಕಾರಣ ಏನಿರಬಹುದು? ಮೊದಲ ದಿನ ನೀವು ಆಟವಾಡಿ ಮಲಗಿದಾಗಲೇ ನಿಮ್ಮ ಕನಸಿನಲ್ಲಿ ಗೇಮ್‌ನ ಪರದೆ ತೆರೆಯುತ್ತದೆ. ನಿಮ್ಮ ಮೆದುಳು ನಿಮ್ಮ ಆಟವನ್ನು frame by frame ವಿಮರ್ಶಿಸುತ್ತದೆ. ಆಟದ ವೇಗಕ್ಕೆ ಸರಿಯಾಗಿ ನಿಮ್ಮ reflexesಗಳನ್ನು synchronise ಮಾಡುತ್ತದೆ. ಕಣ್ಣು ಮತ್ತು ಬೆರಳುಗಳ ನಡುವಿನ communication ಸುಧಾರಿಸುತ್ತದೆ. ಕನಸುಗಳೇ ಇಲ್ಲದೆ ಹೋಗಿದ್ದರೆ ನೂರು ದಿನ ಆಡಿದರೂ ನಮ್ಮ ಕಾರು ಪಲ್ಟಿ ಹೊಡೆದು ನಮ್ಮನ್ನು ಅಣಕಿಸುತ್ತಲೇ ಇರುತ್ತಿತ್ತು.

           ಹುಡುಗಿಯೊಬ್ಬಳು ದೊಡ್ಡವಳಾದ ದಿನ ಆಕೆಗೆ ಹೊಸ ಸೀರೆ ಉಡಿಸಿ, ಆರತಿ ಎತ್ತಿ ಸಂಭ್ರಮಿಸುತ್ತಾರೆ. ಏಕೆಂದರೆ ಆಕೆಗೆ ತನ್ನಲ್ಲಾದ ಬದಲಾವಣೆ ಅರಿವಾಗುವುದು ಎಚ್ಚರದ ಸ್ಥಿತಿಯಲ್ಲಿ. ಆದರೆ ಒಬ್ಬ ಹುಡುಗ ದೊಡ್ಡವನಾಗುವುದನ್ನು ಯಾರೂ ಗುರುತಿಸುವುದೇ ಇಲ್ಲ. ಏಕೆಂದರೇ ಪ್ರತೀ ಹುಡುಗನೂ ದೊಡ್ಡವನಾಗುವುದೇ ಕನಸಿನಲ್ಲಿ. ತನ್ನ ವಯಸ್ಸಿನ ಹೆಣ್ಣುಮಕ್ಕಳ ಮಧ್ಯೆ ಯಾವ ಸಂಕೋಚವೂ ಇಲ್ಲದೆ ಆಡಿ ಬೆಳೆಯುವ ಹುಡುಗನಿಗೆ ಕನಸೊಂದರಲ್ಲಿ ಮೊದಲ ಸಲ ಸಿಹಿಯಾದ ಅಪಘಾತವಾಗಿ ಸ್ಖಲನವಾಗಿ, ಏನನ್ನೋ ಪಡೆದುಕೊಂಡ, ಏನನ್ನೋ ಕಳೆದುಕೊಂಡ ಸಂತೋಷ, ದುಃಖ, ಅಚ್ಚರಿ, ತಳಮಳಗಳನ್ನು ಅನುಭವಿಸುವುದನ್ನು ಯಾರೂ ಗುರುತಿಸುವುದೇ ಇಲ್ಲ. ತನ್ನ ಮಗನಿಗೆ ಕನಸಿನ ಕುರಿತು ತಿಳಿಹೇಳಿ, ಅವನ ದೇಹದಲ್ಲಾದ ಬದಲಾವಣೆಗಳನ್ನು ಅರ್ಥಮಾಡಿಸಿ, ಅವನಿಗೊಂದು moral fence ಹಾಕುವ ಕೆಲಸವನ್ನು ಯಾವ ತಂದೆಯೂ ಮಾಡುವುದಿಲ್ಲ. ಬಹುಶಃ ಈಡನ್ ಗಾರ್ಡನ್‌ನಲ್ಲಿ Adam ತಿಂದ knowledge fruit ( ಜ್ಞಾನವೃಕ್ಷದ ಫಲ) ಈ ಕನಸೇ ಇರಬಹುದೇನೋ! ಕನಸುಗಳೇ ಇಲ್ಲದೇ ಹೋಗಿದ್ದರೆ ನಾವು ಸತ್ತವರಿಗೆ ಶ್ರಾದ್ಧ ಕರ್ಮಗಳನ್ನೇ ಮಾಡುತ್ತಿರಲಿಲ್ಲ. ಹಬ್ಬದಲ್ಲಿ ಪಿತೃಗಳಿಗೆ ಎಡೆ ಇಡುತ್ತಿರಲಿಲ್ಲ. ನಮ್ಮ ಪೂರ್ವಜರಿಗೆ ಕನಸಿನಲ್ಲಿ ಸತ್ತವರು ಕಾಣಿಸಿಕೊಂಡಾಗ, ಅವರಿಗೆ ಸತ್ತವರು ಇನ್ನಾವುದೋ ಲೋಕದಲ್ಲಿ ಇದ್ದಿರಬಹುದಾದ ನಂಬಿಕೆ ಹುಟ್ಟಿ ಅವರನ್ನು ತೃಪ್ತಿ ಪಡಿಸುವ ಇಂತಹ ಆಚರಣೆಗಳನ್ನು ಆರಂಭಿಸಿದರೆಂದು ತೋರುತ್ತದೆ!

        ಕನಸಿನ ಕುರಿತು ನನ್ನದೇ ಒಂದು ಅನುಭವವನ್ನು ಹೇಳುತ್ತೇನೆ. ಇಂತಹುದೇ ಅನುಭವಗಳು ನಿಮಗೂ ಹಲವು ಸಾರಿ ಆಗಿರಬಹುದು. ಕಳೆದ ಸೆಮಿಸ್ಟರ್‌ನ ಪರೀಕ್ಷೆಗಳಿಗೆ ತಯಾರಾಗುತ್ತಿದ್ದಾಗ ಪ್ರತೀ ದಿನವೂ ಬೆಳಿಗ್ಗೆ 5:30ಕ್ಕೆ alarm ಇಡುತ್ತಿದ್ದೆ. ಆದರೆ ಪ್ರತೀ ಬೆಳಿಗ್ಗೆಯೂ ಅಲಾರ್ಮ್ ಕೂಗುವ ಮುಂಚೆಯೇ, ಸರಿಯಾಗಿ 5:25ಕ್ಕೆ ಕನಸೊಂದು ಒಡೆದು ಯಾರೋ ತಟ್ಟಿ ಎಬ್ಬಿಸಿದ ಹಾಗೆ ಎಚ್ಚರವಾಗುತ್ತಿತ್ತು. ಒಂದು ವಾರ ಕಾಲ ಹೀಗೆಯೇ ಆಯಿತು. ಒಂದು ದಿನವಾದರೂ 5:24ಕ್ಕೋ ಅಥವಾ 5:26ಕ್ಕೋ ಎಚ್ಚರವಾಗಲಿಲ್ಲ. ಒಂದು ನಿಮಿಷವೂ ಹೆಚ್ಚು-ಕಡಿಮೆಯಾಗದಂತೆ ಶಾರ್ಪ್ 5:25ಕ್ಕೆ ಎಚ್ಚರಿಸುವ ಗಡಿಯಾರದಷ್ಟೇ precise ಆಗಿ ಕೆಲಸ ಮಾಡುವ mechanism ಒಂದನ್ನು ನಮ್ಮೊಳಗೇ ಸೃಷ್ಟಿಸಿರುವ, ನಮ್ಮನ್ನು ಎಚ್ಚರಿಸುವ, ಪೊರೆಯುವ, ಶಿಕ್ಷಿಸುವ, ಕೈ ಹಿಡಿದು ನಡೆಸುವ ಪ್ರಕೃತಿ ಎಂಬ ಮಹಾನ್ ಚೈತನ್ಯದ ಮುಂದೆ ನನ್ನಂತಹ ನಾಸ್ತಿಕನ ಅಹಂಕಾರ ಎಷ್ಟು ನಿಕೃಷ್ಟವಾದುದು ಎನ್ನಿಸಿ ನಾಚಿಕೆಯಾಗುತ್ತದೆ. 

        ಇನ್ನು ಕವಿತೆಯ ವಿಷಯಕ್ಕೆ ಮತ್ತೆ ಬರೋಣ. ಅರೆ ಎಚ್ಚರದಲ್ಲಿ ಹೊಳೆದಿದ್ದು ಖಂಡಿತಾ ಕವಿತೆಯಾಗಿರಲಿಕ್ಕಿಲ್ಲ. ಒಂದು ಕವಿತೆಯ ಸಾಫಲ್ಯವಿರುವುದು ಅದು ಭೂತ, ವರ್ತಮಾನ, ಭವಿಷ್ಯತ್ತುಗಳನ್ನು ಒಂದೇ ಬಿಂದುವಿನಲ್ಲಿ ಕೇಂದ್ರೀಕರಿಸಿದಾಗ ಎಂದಿದ್ದರು ಗೋಪಾಲಕೃಷ್ಣ ಅಡಿಗರು. ಯಾವತ್ತಿಗೂ ಎಚ್ಚರಗೊಳ್ಳದ ನಾಯಕರು, ರಾಜಕಾರಣಿಗಳು, ಮತಾಂಧರು, ಸರ್ವಾಧಿಕಾರಿಗಳಿಂದಾಗಿಯೇ ಜಗತ್ತಿನ ಇತಿಹಾಸ ರಕ್ತಸಿಕ್ತವಾಗಿದೆ. ಇನ್ನು ಕವಿ ಕೂಡಾ ಎಚ್ಚರವಿಲ್ಲದೇ ಬರೆದಿದ್ದರೆ ಇನ್ನೆಷ್ಟು ಅನಾಹುತಗಳಾಗುತ್ತಿತ್ತು ಯೋಚಿಸಿ. ಮನುಷ್ಯರನ್ನೂ ಯಂತ್ರಗಳಂತೆ ನೋಡುವ ಬೆಂಗಳೂರಿನಂತಹ ನಗರಗಳ ಜೀವನ ಶೈಲಿ, ಕವಿಯೊಬ್ಬನಿಗೆ ಇರಲೇಬೇಕಾದ ಒಳಗಣ್ಣನ್ನೂ, ಅಂತರ್ದೃಷ್ಠಿಯನ್ನೂ ಕಿತ್ತುಕೊಳ್ಳುತ್ತಿದೆ ಎನ್ನಿಸುತ್ತದೆ. "ಮುಗಿಲ ಮಾರಿಗೆ ರಾಗ ರತಿಯಾ ನಂಜ ಏರಿತ್ತಾ, ಆಗ ಸಂಜೆಯಾಗಿತ್ತಾ" ಎಂಬ ವರಕವಿಯ ಸಾಲುಗಳನ್ನು ಓದಿ ಇನ್ನಿಲ್ಲದಷ್ಟು ರೋಮಾಂಚನವಾಗಿ ಮುಗಿಲ ಮೋರೆಯನ್ನು ನೋಡಲು ಹೊರಬಂದರೆ ಸಾಲು ಸಾಲು ಬಹುಮಹಡಿ ಕಟ್ಟಡಗಳು, ಕರೆಂಟ್ ಕೇಬಲ್‌ಗಳ ಮಧ್ಯೆ ಕಂಡಿದ್ದೇ ಬೊಗಸೆಯಷ್ಟು ಅಗಲದ ಆಕಾಶ! ಬೇಂದ್ರೆಯವರು ಸಾಧನಕೇರಿಯಲ್ಲಲ್ಲದೆ ಇವತ್ತಿನ ಬೆಂಗಳೂರಿನಲ್ಲೇನಾದರೂ ಹುಟ್ಟಿದ್ದಿದ್ದರೆ ಇಂತಹ ಸಾಲುಗಳನ್ನು ಕೇಳುವ ಸೌಭಾಗ್ಯ ನಮಗೆ ಸಿಗುತ್ತಿತ್ತೇ? ಬ್ರಹ್ಮಾಂಡವನ್ನೇ ಒಂದು ಬೃಹತ್ ವೀಣೆಯನ್ನಾಗಿ ಕಲ್ಪಿಸಿ, ಪುರುಷನಾದ ನಾನು, ಪ್ರಕೃತಿಯಾದ ನೀನು, ನಮ್ಮಿಬ್ಬರ ಮಿಲನದಿಂದ ಹುಟ್ಟಿದ ಆನು, ಪರಾತತ್ವವಾದ ತಾನು ಅದರ ನಾಲ್ಕು ತಂತಿಗಳು ಎಂದು ಕರೆಯುವ ಕವಿಗೆ ಅದಿನ್ನೆಂತಹ ಜಾಗ್ರತೆಯ ಅವಸ್ಥೆಯಲ್ಲಿ ಇಂತಹುದೊಂದು ದರ್ಶನವಾಗಿರಬಹುದೆಂದು ನೆನೆದರೆ ಇನ್ನೂ ಮಂಪರಿನಲ್ಲಿಯೇ ಇದನ್ನೆಲ್ಲಾ ಬರೆಯುತ್ತಿರುವ ನನಗೆ ಕನಸಲ್ಲಿ ಹೊಳೆದ ಆ ಸಾಲುಗಳ ಮತ್ತು ಈ ಲೇಖನ ಎರಡರ ನಿರರ್ಥಕತೆ ಅರಿವಾಗಿ ಕುಬ್ಜನಾಗುತ್ತಿದ್ದೇನೆ.

(ಕೊನೆಯ ಹನಿ: ಹೊಲಿಗೆ ಯಂತ್ರ ಕಂಡುಹಿಡಿದ ಈಲಿಯಾಸ್ ಹೋವ್‌ಗೆ ಯಂತ್ರದ ಕೊನೆಯಲ್ಲಿರುವ ಸೂಜಿಗೆ ಎಲ್ಲಿ ರಂಧ್ರ ಕೊರೆಯಬೇಕೆಂಬ ಪ್ರಶ್ನೆ ಹಲವು ದಿನ ಸಮಸ್ಯೆಯಾಗಿ ಕಾಡುತ್ತಿತ್ತು. ಒಂದು ರಾತ್ರಿ ಹೋವ್ ತನ್ನ ಕನಸಿನಲ್ಲಿ ತುದಿಯಲ್ಲಿ ರಂಧ್ರವಿರುವ ದೊಡ್ಡ ಸೂಜಿಯೊಂದನ್ನು ಹೆಗಲ ಮೇಲೆ ಹೊತ್ತ ಕಾಡು ಮನುಷ್ಯನೊಬ್ಬ ತನ್ನನ್ನು ಅಟ್ಟಿಸಿಕೊಂಡುಬರುವುದನ್ನು ಕಾಣುತ್ತಾನೆ. ಎಚ್ಚರಗೊಂಡ ಹೋವ್ ತನ್ನ ಯಂತ್ರಕ್ಕೆ ಕನಸಲ್ಲಿ ಕಂಡಂತಹದೇ ಸೂಜಿಯನ್ನು ಬಳಸುತ್ತಾನೆ. ಅವತ್ತು ಆ ಕನಸೊಂದು ಬೀಳದೇ ಹೋಗಿದ್ದರೆ ಇವತ್ತಿಗೂ ಹೆಣ್ಣುಮಕ್ಕಳು ಯು ನೆಕ್ಕು, ವಿ ನೆಕ್ಕು ಹೀಗೆ A to Zವರೆಗಿನ 26 ನೆಕ್ಕುಗಳ ಸಲ್ವಾರ್ ಕಮೀಜ್‌ಗಳನ್ನು ತಾವೇ ಹೊಲಿದುಕೊಳ್ಳಬೇಕಾಗುತ್ತಿತ್ತು. ಇದನ್ನು ಓದಿದ ಹೆಣ್ಣುಮಕ್ಕಳಿಗೆ ಈಲಿಯಾಸ್ ಹೋವ್ ಮತ್ತು ಅವನ ಕನಸಲ್ಲಿ ಬಂದ ಕಾಡು ಮನುಷ್ಯನ ಉಪಕಾರ ಅರ್ಥವಾದರೆ ನಾಳೆಯೇ ನಿಮ್ಮ ಚೆಂದದ ಸೆಲ್ವಾರ್‌ಗಳನ್ನು ಹೊಲಿದು ಕೊಡುವ ಟೈಲರ್‌ಗೊಂದು  thanks ಹೇಳಿ. ಡೀಪ್ ನೆಕ್ಕು ಮತ್ತು ಚೋಟುದ್ದದ ಸ್ಕರ್ಟುಗಳನ್ನು ಹೊಲಿಯುವ ಟೈಲರ್‌ಗಳಿಗೆ ಸಮಸ್ತ ಪೋಲಿ ಗಂಡುಮಕ್ಕಳ ಪರವಾಗಿ ನಾನು thanks ಹೇಳುತ್ತೇನೆ. ಹಾಂ! ಹೇಳಲು ಮರೆತೆ. ಅಬ್ರಹಾಂ ಲಿಂಕನ್‌ಗೆ ತನ್ನ ಸಾವಿನ ಕುರಿತು ಮೂರು ದಿನ ಮುಂಚೆಯೇ ಮುನ್ಸೂಚನೆ ದೊರೆತಿತ್ತು. ಅದೂ ಕನಸಲ್ಲಿ!!)














Tuesday 15 October 2013

ಮತ್ತೆ ಮತ್ತೆ ಕಾಡುವ ಆ ಮೂರು ಕಥೆಗಳು ( ಮೂರನೆಯ ಕಥೆಯ ಅರ್ಥ ಹೇಳಿದವರಿಗೆ ಮೊದಲನೆಯ ಕಥೆಯಲ್ಲಿ ಬರುವ ರಾಜನ ಅರ್ಧ ರಾಜ್ಯವನ್ನೂ ಮತ್ತು ಅವನ ಮಗಳನ್ನೂ ಬಹುಮಾನವನ್ನಾಗಿ ನೀಡಲಾಗುವುದು!)

ಕಥೆ ೧: ಖುಷಿ

ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೊಬ್ಬ ಪುಟ್ಟ ರಾಜಕುಮಾರ. ಎಲ್ಲಾ ಮಕ್ಕಳಂತೆಯೇ ಆಡುತ್ತಾ, ಹಾಡುತ್ತಾ, ಖುಷಿಯಿಂದ ಬಾಲ್ಯ ಕಳೆದ ರಾಜಕುಮಾರ, ಹದಿನಾರನೇ ವಯಸ್ಸಿಗೆ ಕಾಲಿಟ್ಟ ಕೂಡಲೇ ಮಂಕಾಗಿ ಹೋಗುತ್ತಾನೆ. ಆಟ, ಊಟ, ಬೇಟ, ಕಲೆ, ಸಂಗೀತ, ನಾಟಕ, ಸೋಮ ಯಾವುದರಲ್ಲಿಯೂ ರಾಜಕುಮಾರನಿಗೆ ಆಸಕ್ತಿ ಇಲ್ಲ. ಸದಾಕಾಲವೂ ನಿರ್ಲಿಪ್ತವಾಗಿ, ನಿರ್ವಿಕಾರವಾಗಿ, ಆಕಾಶವೇ ತಲೆಯ ಮೇಲೆ ಬಿದ್ದ ಹಾಗೆ ಆಡುತ್ತಿರುವ ಮಗನನ್ನು ನೋಡಿ ರಾಜ ಕೂಡಾ ಚಿಂತೆಗೆ ಬೀಳುತ್ತಾನೆ. ರಾಜಕುಮಾರನನ್ನು ಖುಷಿಗೊಳಿಸಲು ದೇಶವಿದೇಶಗಳಿಂದ ನರ್ತಕಿಯರು, ಕವಿಗಳು, ಸಂಗೀತಗಾರರು, ನಟರು, ವಿದೂಷಕರನ್ನು ಕರೆಸುತ್ತಾನೆ. ಸುರಸುಂದರಿಯರಾದ ಯುವತಿಯರನ್ನು ಕರೆಸಿ ಅವರೊಂದಿಗೆ ಜಲಕ್ರೀಡೆಯನ್ನು ಆಡಿಸುತ್ತಾನೆ! ಆದರೂ ರಾಜಕುಮಾರನ ಬೇಸರ ಮಾತ್ರ ಹೋಗುವುದಿಲ್ಲ. ಬೇಸತ್ತ ರಾಜ ಸೀದಾ ತನ್ನ ಮಗನ ಬಳಿಗೇ ಹೋಗಿ "ಮಗನೇ, ನಿನ್ನ ಚಿಂತೆಗೆ ಕಾರಣ ಏನು? ಮಗನನ್ನೇ ಸಂತೋಷಪಡಿಸಲಾಗದ ರಾಜ, ಇನ್ನು ಪ್ರಜೆಗಳನ್ನು ಹೇಗೆ ಸಂತೋಷಪಡಿಸುತ್ತಾನೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಈಗಲಾದರೂ ಹೇಳು ನಿನ್ನನ್ನು ಸಂತೋಷಪಡಿಸಲು ನಾನೇನು ಮಾಡಬೇಕು? ಬೇಕಿದ್ದರೆ ಒಂದು ಕೋಟಿ ಚಿನ್ನದ ನಾಣ್ಯಗಳು ಖರ್ಚಾದರೂ ಪರವಾಗಿಲ್ಲ. ನಿನ್ನ ಸಂತೋಷಕ್ಕಾಗಿ ನಾನು ಏನನ್ನು ಬೇಕಾದರೂ ತಂದುಕೊಡುತ್ತೇನೆ" ಎಂದನು.

          ಈ ಮಾತುಗಳನ್ನು ಕೇಳಿ ರಾಜಕುಮಾರ "ಅಪ್ಪಾ, ನನಗೂ ನನ್ನ ವಯಸ್ಸಿನ ಎಲ್ಲರಂತೆಯೇ ಖುಷಿಯಾಗಿರಬೇಕೆಂಬ ಆಸೆ. ಆದರೆ ನನ್ನ ದುಃಖಕ್ಕೆ ಕಾರಣವೇನೆಂದು ನನಗೇ ತಿಳಿದಿಲ್ಲ. ನೀವು ನನಗೋಸ್ಕರ ಏನನ್ನಾದರೂ ತಂದು ಕೊಡುವುದಿದ್ದರೆ ’ಖುಷಿ’ಯನ್ನು ತಂದುಕೊಡಿ" ಎಂದನು. ತಕ್ಷಣ ರಾಜ ತನ್ನ ಮಂತ್ರಿಗಳ, ಜ್ಯೋತಿಷಿಗಳ, ಚಿಂತಕರ ತುರ್ತು ಸಭೆ ಕರೆದು ತನ್ನ ಮಗನಿಗೆ ’ಖುಷಿ’ಯನ್ನು ಹುಡುಕಿ ತಂದು ಕೊಡುವಂತೆ ಸೂಚಿಸುತ್ತಾನೆ. ಒಬ್ಬೊಬ್ಬರು ಒಂದೊಂದು ಸಲಹೆ ಕೊಡುತ್ತಾರೆ. ಕೊನೆಯಲ್ಲಿ ಜ್ಯೋತಿಷಿಯೊಬ್ಬ ಕವಡೆ ಹಾಕಿ, ಎಣಿಸಿ, ಗುಣಿಸಿ "ರಾಜನ್, ನಿನ್ನ ಸಾಮ್ರಾಜ್ಯದಲ್ಲಿ ಯಾವುದೇ ರೀತಿಯ ಚಿಂತೆ, ದುಃಖಗಳಿಲ್ಲದೆ ಅತ್ಯಂತ ಸಂತೋಷವಾಗಿರುವ ಮನುಷ್ಯನನ್ನು ಹುಡುಕು. ಅವನು ಧರಿಸಿರುವ ಬಟ್ಟೆಯಲ್ಲಿ ’ಖುಷಿ’ ಇದೆ. ಆ ಬಟ್ಟೆಯನ್ನು ರಾಜಕುಮಾರ ಧರಿಸಿದರೆ ಬಟ್ಟೆಯಲ್ಲಿರುವ ’ಖುಷಿ’ ನಿಮ್ಮ ಮಗನೊಳಗೆ ಸೇರಿ ಆತ ಮೊದಲಿನಂತಾಗುತ್ತಾನೆ" ಎಂದು ಪರಿಹಾರ ಸೂಚಿಸಿದನು. ಜ್ಯೋತಿಷಿಯ ಮಾತಿಗೆ ತಲೆದೂಗಿದ ರಾಜ ತನ್ನ ಸಾಮ್ರಾಜ್ಯದಲ್ಲೇ ಅತ್ಯಂತ ಸಂತೋಷವಾಗಿರುವ ವ್ಯಕ್ತಿ ನಾಳೆಯೇ ತನ್ನ ಅರಮನೆಗೆ ಬಂದು ತಾನು ಉಟ್ಟಿರುವ ಬಟ್ಟೆಯನ್ನು ನೀಡಿದರೆ ಅವನಿಗೆ ತನ್ನ ಅರ್ಧ ರಾಜ್ಯವನ್ನೇ ಬಹುಮಾನವನ್ನಾಗಿ ನೀಡುತ್ತೇನೆ ಎಂದು ಎಲ್ಲಾ ಊರುಗಳಲ್ಲಿಯೂ ಡಂಗೂರ ಹೊಡೆಸಿದನು!

ಮಾರನೆಯ ದಿನ ಬೆಳಿಗ್ಗೆ ಅರಮನೆಯ ಮುಂದೆ ಜನಜಾತ್ರೆಯೇ ಸೇರುತ್ತದೆ. ರೈತರು, ಅಧಿಕಾರಿಗಳು, ಜಮೀನ್ದಾರರು, ಕಳ್ಳರು, ಕೊತ್ವಾಲರು ಹೀಗೇ ಲಕ್ಷಾಂತರ ಮಂದಿ ಬಂದು ಸೇರುತ್ತಾರೆ. ರಾಜ ಒಬ್ಬೊಬ್ಬರನ್ನೇ ಪರೀಕ್ಷೆ ಮಾಡುತ್ತಾ ಹೋಗುತ್ತಾನೆ. ಅರ್ಧ ರಾಜ್ಯದ ಆಸೆಗೆ ’ಖುಷಿ’ಯ ಮುಖವಾಡ ಹಾಕಿಕೊಂಡು ನಿಂತ ಒಬ್ಬೊಬ್ಬರ ಮನಸ್ಸಲ್ಲೂ ನೂರಾರು ಚಿಂತೆಗಳು ಗೂಡು ಕಟ್ಟಿರುತ್ತವೆ. ರೈತರಿಗೆ ಮಳೆಯ ಚಿಂತೆ, ಅಧಿಕಾರಿಗಳಿಗೆ ಲೋಕಾಯುಕ್ತರ ಚಿಂತೆ, ಜಮೀನ್ದಾರರಿಗೆ ಕಳ್ಳರ ಚಿಂತೆ, ಕಳ್ಳರಿಗೆ ಕೊತ್ವಾಲರ ಚಿಂತೆ, ಅಜ್ಜಿಗೆ ಅನ್ನದ ಚಿಂತೆಯಾದರೆ, ಮೊಮ್ಮಗಳಿಗೆ ಬಾಯ್‌ಫ್ರೆಂಡ್ ಚಿಂತೆ! ಹೀಗೆ ಇವರೆಲ್ಲರೂ ತನ್ನ ಮಗನ ಹಾಗೆಯೇ ದುಃಖಿತರಾಗಿರುವವರೇ ಎಂದು ತಿಳಿದು ರಾಜ ನಿರಾಶನಾಗುತ್ತಾನೆ.

ಹೀಗೆ ದಿನಗಳು ಕಳೆಯುತ್ತಿರಲು ಒಂದು ದಿನ ರಾಜ ತನ್ನ ಕುದುರೆಯನ್ನೇರಿ ಬೇಟೆಗೆ ಹೊರಡುತ್ತಾನೆ. ಮಧ್ಯಾಹ್ನದವರೆಗೆ ಅಲೆದರೂ ಯಾವ ಪ್ರಾಣಿಯೂ ಸಿಗದೆ ಬಿಸಿಲಲ್ಲಿ ಬಸವಳಿದ ಅವನಿಗೆ ದೂರದಲ್ಲೊಂದು ಕುರಿ ಹಿಂಡು ಮತ್ತು ಆ ಕುರಿಗಳನ್ನು ಮೇಯಿಸುತ್ತಿರುವ ಹುಡುಗನೊಬ್ಬ ಕಾಣುತ್ತಾನೆ. ತನ್ನಷ್ಟಕ್ಕೇ ಹಾಡುತ್ತಾ, ಕುಣಿಯುತ್ತಿರುವ ಹುಡುಗನನ್ನು ನೋಡಿದ ರಾಜನಿಗೆ ತನ್ನ ರಾಜ್ಯದಲ್ಲಿ ಚಿಂತೆಗಳೇ ಇಲ್ಲದೆ ಅತ್ಯಂತ ಸಂತೋಷವಾಗಿರುವ ವ್ಯಕ್ತಿ ಈತನೊಬ್ಬನೇ ಇರಬೇಕು ಎನ್ನಿಸುತ್ತದೆ. ದೂರದಿಂದಲೇ ಆತನಿಗೆ "ನನ್ನೊಂದಿಗೆ ಅರಮನೆಗೆ ಬಾ! ನಿನಗೆ ಅರ್ಧರಾಜ್ಯವನ್ನು ಕೊಡುತ್ತೇನೆ" ಎಂದು ಕರೆಯುತ್ತಾನೆ. ಇದನ್ನು ಕೇಳಿದ ಕುರಿ ಕಾಯುವ ಹುಡುಗ "ನಾನು ಕುರಿ ಮೇಯಿಸಿಕೊಂಡೇ ಖುಷಿಯಾಗಿದ್ದೇನೆ. ನಿನ್ನ ಅರ್ಧರಾಜ್ಯವನ್ನು ನೀನೆ ಇಟ್ಟುಕೋ" ಎನ್ನುತ್ತಾನೆ. ಈಗ ರಾಜನಿಗೆ ಈತನೇ ಅತ್ಯಂತ ಸಂತೋಷವಾಗಿರುವ ವ್ಯಕ್ತಿ  ಎನ್ನುವುದು ಯಾವ ಅನುಮಾನವೂ ಇಲ್ಲದೇ ಧೃಡವಾಗುತ್ತದೆ. "ಹೋಗಲಿ, ನಿನ್ನ ಬಟ್ಟೆಯನ್ನಾದರೂ ಬಿಚ್ಚಿಕೊಡು" ಎಂದು ರಾಜ ಬೇಡಿಕೊಳ್ಳುತ್ತಾನೆ. ಅದಕ್ಕೆ ಕುರಿ ಮೇಯಿಸುವವನು " ಬೇಕಿದ್ದರೆ ನೀನೇ ಬಂದು ಬಿಚ್ಚಿಕೊಂಡು ಹೋಗು" ಎಂದು ಹೇಳಿ ತನ್ನ ಹಾಡು ಮತ್ತು ಕುಣಿತವನ್ನು ಮುಂದುವರಿಸುತ್ತಾನೆ. ಸರಿ ಎಂದ ರಾಜ ಕುದುರೆಯಿಂದಿಳಿದು ಆತನ ಹತ್ತಿರಕ್ಕೆ ಹೋಗಿ ಅವನ ಬಟ್ಟೆಗೆ ಕೈ ಹಾಕುತ್ತಾನೆ.

ಕೈ ಹಾಕಿದ ರಾಜನಿಗೆ ಅಚ್ಚರಿ ಕಾದಿರುತ್ತದೆ. ಆ ಕುರಿ ಮೇಯಿಸುವ ಹುಡುಗ ಬಟ್ಟೆಯನ್ನೇ ಹಾಕಿರುವುದಿಲ್ಲ!!

(ಡೆನ್ಮಾರ್ಕ್‌ನ ಪ್ರಸಿದ್ಧ ಜಾನಪದ ಕಥೆ)

ಕಥೆ ೨: ಕೌಪೀನ(ಲಂಗೋಟಿ)

ಒಂದು ಹಳ್ಳಿ. ಆ ಹಳ್ಳಿಯ ಅಂಚಿನಲ್ಲಿ ದಟ್ಟವಾದ ಕಾಡು. ಆ ಕಾಡಿನ ಮಧ್ಯೆ ಹೊಳೆಯ ದಂಡೆಯ ಮೇಲೆ ಜೋಪಡಿಯೊಂದನ್ನು ನಿರ್ಮಿಸಿಕೊಂಡು ಸನ್ಯಾಸಿಯೊಬ್ಬ ಧ್ಯಾನ ತಪಸ್ಸುಗಳಲ್ಲಿ ಕಾಲ ಕಳೆಯುತ್ತಿರುತ್ತಾನೆ. ಒಂದು ಲಂಗೋಟಿ ಬಿಟ್ಟು ಬೇರೇನನ್ನೂ ಧರಿಸದ ಆತ ಪ್ರತೀದಿನ ಹಳ್ಳಿಯಲ್ಲಿ ಭಿಕ್ಷೆ ಬೇಡಿ ತಂದ ಆಹಾರವನ್ನು ಮಾತ್ರ ತಿನ್ನುತ್ತಿರುತ್ತಾನೆ. ಒಂದು ದಿನ ಅವನು ನದಿಗೆ ಸ್ನಾನ ಮಾಡಲು ಹೋದಾಗ ಅವನ ಲಂಗೋಟಿಯನ್ನು ಇಲಿಗಳು ಕಚ್ಚಿ ಹರಿದು ಹಾಕುತ್ತವೆ. ಆವತ್ತು ಹಳ್ಳಿಗೆ ಭಿಕ್ಷೆಗೆ ಹೋದ ಸನ್ಯಾಸಿ ಅನ್ನದ ಜೊತೆ ಒಂದು ಹೊಸ ಲಂಗೋಟಿಯನ್ನೂ ಭಿಕ್ಷೆ ಬೇಡಿ ತರುತ್ತಾನೆ. ಆದರೆ ಎರಡೇ ದಿನದಲ್ಲಿ ಈ ಹೊಸ ಲಂಗೋಟಿಯನ್ನೂ ಇಲಿಗಳು ಕಚ್ಚಿ ಹರಿದು ಹಾಕುತ್ತವೆ. ಸನ್ಯಾಸಿ ಹಳ್ಳಿಗೆ ಹೋಗಿ ಮತ್ತೊಂದು ಲಂಗೋಟಿ ಭಿಕ್ಷೆ ಕೇಳುತ್ತಾನೆ. ಇದನ್ನು ನೋಡಿದ ಹಳ್ಳಿಯವನೊಬ್ಬ "ಹೀಗೆ ಪದೇ ಪದೇ ಲಂಗೋಟಿಯನ್ನು ಭಿಕ್ಷೆ ಬೇಡುವ ಬದಲು ಬೆಕ್ಕೊಂದನ್ನು ಸಾಕಿಬಿಡಿ. ಇಲಿಗಳ ತೊಂದರೆ ತಪ್ಪುತ್ತದೆ. ನಿಮ್ಮ ಲಂಗೋಟಿಯೂ ಉಳಿಯುತ್ತದೆ" ಎಂದು ಸಲಹೆ ನೀಡುತ್ತಾನೆ. ಸನ್ಯಾಸಿಗೂ ಈ ಸಲಹೆ ಇಷ್ಟವಾಗಿ ಬೆಕ್ಕೊಂದನ್ನು ಸಾಕುತ್ತಾನೆ. ಈಗ ಇಲಿಗಳ ಕಾಟವೇನೋ ನಿಂತುಹೋಯಿತು. ಆದರೆ ಸನ್ಯಾಸಿಗೆ ತನ್ನ ಆಹಾರದ ಜೊತೆಗೆ ಬೆಕ್ಕಿಗೆ ಕುಡಿಸಲು ಹಾಲನ್ನೂ ಭಿಕ್ಷೆ ಬೇಡುವ ಪರಿಸ್ಥಿತಿ ಒದಗುತ್ತದೆ.

ಹೀಗೆ ಒಂದಿಷ್ಟು ದಿನಗಳು ಕಳೆದ ಮೇಲೆ ಅದೇ ಹಳ್ಳಿಯವನು ಮತ್ತೆ ಸನ್ಯಾಸಿಯ ಬಳಿ ಬಂದು "ಹೀಗೆ ದಿನವೂ ಹಾಲನ್ನು ಭಿಕ್ಷೆ ಬೇಡುವ ಬದಲು ಹಸುವೊಂದನ್ನು ಸಾಕಿಬಿಡಿ! ನಿಮ್ಮ ಹಾಲಿನ ಸಮಸ್ಯೆ ನೀಗುತ್ತದೆ" ಎಂದು ಉಪಾಯವೊಂದನ್ನು ಹೇಳುತ್ತಾನೆ. ಹಳ್ಳಿಯವನ ಮಾತಿಗೆ ತಲೆದೂಗಿದ ಸನ್ಯಾಸಿ ಹಸುವನ್ನು ಸಾಕುತ್ತಾನೆ. ಈಗ ಹಾಲಿನ ಸಮಸ್ಯೆಯೇನೋ ತೀರಿತು. ಆದರೆ ಹಸುವಿಗೆ ತಿನ್ನಿಸಲು ಹುಲ್ಲು ಎಲ್ಲಿಂದ ಬರಬೇಕು ಸನ್ಯಾಸಿಗೆ? ಹಳ್ಳಿಗೆ ತೆರಳಿ ಹುಲ್ಲನ್ನು ಭಿಕ್ಷೆ ಕೇಳುತ್ತಾನೆ. ಒಂದು ವಾರ ಕಳೆಯುವಷ್ಟರಲ್ಲಿ ಮತ್ತೆ ಹಳ್ಳಿಯವನು ಸಿಕ್ಕಿ "ಹೀಗೆ ಪ್ರತಿದಿನವೂ ಹುಲ್ಲನ್ನು ಬೇಡುವ ಬದಲು, ನಿಮ್ಮ ಗುಡಿಸಲಿನ ಸುತ್ತಲಿನ ಬಯಲಿನಲ್ಲಿ ಭತ್ತ ಬೆಳೆದುಬಿಡಿ! ಹುಲ್ಲನ್ನು ಹಸುವಿಗೆ ಹಾಕಿ ಭತ್ತವನ್ನು ನೀವು ಉಪಯೋಗಿಸಿದರೆ ನಿಮ್ಮ ಭಿಕ್ಷೆಯ ಸಮಸ್ಯೆಯೇ ನೀಗುತ್ತದೆ" ಎಂದನು! ಹಳ್ಳಿಯವನ ಮಾತು ಕೇಳಿ ಖುಷಿಯಾದ ಸನ್ಯಾಸಿ ಮೊದಲು ಸಣ್ಣ ಜಾಗದಲ್ಲಿ ಭತ್ತ ಬೆಳೆಯುತ್ತಾನೆ. ವರ್ಷವರ್ಷವೂ ಭತ್ತದ ಫಸಲು ಹೆಚ್ಚುತ್ತಾ ಹೋಗಿ, ಭತ್ತದ ಪೈರು ಗುಡಿಸಲಿನ ಸುತ್ತಲಿನ ಇಡೀ ಬಯಲನ್ನೇ ಹಬ್ಬಿ ನಿಂತು ಕೆಲವೇ ವರ್ಷಗಳಲ್ಲಿ ಆತ ದೊಡ್ಡ ಜಮೀನ್ದಾರನೇ ಆಗಿಹೋಗುತ್ತಾನೆ! ಈಗ ನೂರಾರು ಎಕರೆ ಜಮೀನಿನ ಕೆಲಸ ಮತ್ತು ಮನೆ ಕೆಲಸಗಳ ಜವಾಬ್ದಾರಿ ಎರಡನ್ನೂ ನಿಭಾಯಿಸುವುದು ಆತನಿಗೆ  ಕಷ್ಟವಾಗುತ್ತದೆ. ಸನ್ಯಾಸಿಯ ಕಷ್ಟ ನೋಡಿದ ಹಳ್ಳಿಯವನು "ಒಂದು ಮದುವೆಯಾಗಿಬಿಡಿ. ನೀವು ಜಮೀನಿನ ಕೆಲಸ ನೋಡಿಕೊಂಡರೆ, ಹೆಂಡತಿ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಾಳೆ. ನಿಮ್ಮ ಹೊರೆ ಕಡಿಮೆಯಾಗುತ್ತದೆ" ಎಂದು ಸಲಹೆ ನೀಡಿದನು. ಈ ಮಾತು ಸನ್ಯಾಸಿಗೂ ಹಿತವೆನಿಸಿ ಶೀಘ್ರದಲ್ಲಿಯೇ ಹೆಣ್ಣೊಂದನ್ನು ಹುಡುಕಿ ಮದುವೆಯಾಗುತ್ತಾನೆ. ಸನ್ಯಾಸಿಯಾಗಿದ್ದವನು ಸಂಸಾರಿಯಾಗಿ ಹೆಂಡತಿ, ಮಕ್ಕಳು, ಬಂಧು, ಬಳಗದೊಡನೆ ಸುಖ(?)ವಾಗಿ ಬಾಳುತ್ತಾನೆ!

(ಆಚಾರ್ಯ ರಜನೀಶ್ ಹೇಳಿದ ಕಥೆ)

ಕಥೆ ೩: ಜ್ಞಾನ

ಗುರು ಶಿಷ್ಯರಿಬ್ಬರ ನಡುವೆ ಮಾತುಕತೆ ನಡೆಯುತ್ತಿದೆ.

ಶಿಷ್ಯ ಕೇಳುತ್ತಾನೆ: "ಗುರುಗಳೇ, ಕಣ್ಣು ಎಂದರೆ ಏನು?"

ಗುರು: "ಕಣ್ಣು ಎಂದರೆ ಕಣ್ಣಿನ ಕಣ್ಣು!"

ಶಿಷ್ಯ: "ಕಿವಿ ಎಂದರೆ ಏನು?"

ಗುರು: "ಕಿವಿ ಎಂದರೆ ಕಿವಿಯ ಕಿವಿ!"

ಶಿಷ್ಯ: "ನಾಲಗೆ ಎಂದರೆ ಏನು?"

ಗುರು: "ನಾಲಗೆ ಎಂದರೆ ನಾಲಗೆಯ ನಾಲಗೆ!"

(ಉಪನಿಷತ್ತಿನ ಒಂದು ಕಥೆ)

ಈ ಮೂರೂ ಕಥೆಗಳನ್ನು ಓದಿದರೆ ನಿಮಗೆ ನಗು ಬರಬಹುದು. ಆದರೆ ಈ ಕಥೆಗಳ ಹಿಂದೆ ಆಳವಾದ ಫಿಲಾಸಫಿ ಇದೆ. ಮೊದಲನೆಯ ಕಥೆಯಲ್ಲಿ ಬರುವ ಕುರಿ ಮೇಯಿಸುವವನಿಗೂ, ಶ್ರವಣಬೆಳಗೊಳದ ಗೊಮ್ಮಟೇಶ್ವರನಿಗೂ, ಗೋಪಾಲಕೃಷ್ಣ ಅಡಿಗರ "ಬೆತ್ತಲಾಗದೇ ಬಯಲು ಸಿಕ್ಕದಿಲ್ಲಿ" ಎಂಬ ಸಾಲುಗಳಿಗೂ ಏನಾದರೂ ಸಂಬಂಧವಿರಬಹುದೇ ಯೋಚಿಸಿ. ಎರಡನೆಯ ಕಥೆಯನ್ನು ನಮ್ಮ ಬದುಕಿಗೆ ಅನ್ವಯಿಸಿ ನೋಡಿದರೆ ಇಲ್ಲಿ ಬರುವ ಸನ್ಯಾಸಿ, ಹಳ್ಳಿಯವನು, ಲಂಗೋಟಿ, ಇಲಿಗಳು ಏನನ್ನು ಸಂಕೇತಿಸುತ್ತವೆ ತಿಳಿಯಿತೇ? ಮೊದಲೆರಡು ಕಥೆಗಳಿಗಿಂತಲೂ ಅರ್ಥಪೂರ್ಣವಾದುದು ಮೂರನೆಯ ಕಥೆ. ಬಹುಶಃ ಜಗತ್ತಿನ ಮೊದಲ ನ್ಯಾನೋ ಕಥೆ ಇದೇ ಇರಬಹುದು. ಮೂರನೆಯ ಕಥೆಯ ಅರ್ಥ ಹೇಳಿದವರಿಗೆ ಮೊದಲನೆಯ ಕಥೆಯಲ್ಲಿ ಬರುವ ರಾಜನ ಅರ್ಧ ರಾಜ್ಯವನ್ನೂ ಮತ್ತು ಅವನ ಮಗಳನ್ನೂ ಬಹುಮಾನವನ್ನಾಗಿ ನೀಡಲಾಗುವುದು! ಪ್ರಯತ್ನಿಸಿ ನೋಡಿ!!



Friday 4 October 2013

ಹೈಕುಗಳು

(A HAIKU is a Japanese form of poetry with exactly 17 alphabets and three lines, first line being 5 syllables, second line being 7 syllables and third line being 5 syllables.)




 *
ನಿನ್ನ ಎದೆಯೊ-
ಳಗಿನ ಬೆಂಕಿ ನನ್ನ-
ನ್ನಷ್ಟೇ ಸುಡಲಿ!

  *
ರೆಕ್ಕೆ ಮುರಿದ
ಹಕ್ಕಿಯ ಆಸೆಗಳು
ನೀಲಿ ಆಕಾಶ!

  *
ನನ್ನ ಮೇಲಾಣೆ
ನಿನ್ನ ಹೃದಯ ಕದ್ದ-
ವಳು ನಾ’ನಲ್ಲ’!

  *
ಭೂಮಿ ಬೆತ್ತಲು,
ಮುಗಿಲಿನ ಕತ್ತಲು
ಸುರಿದ ಸೋನೆ!

  *
ನೀನು ಬಂದಾಗ
ಕಣ್ಮುಚ್ಚಿದೆ, ನಾನಿನ್ನೂ
ಸತ್ತಿರಲಿಲ್ಲ!

  *
ದೇವರು ನನ್ನ
ನಂಬಿರಲಿಲ್ಲ ಈಗ
ನಾನೂ ನಾಸ್ತಿಕ!

  *
ನಿನ್ನ ಕಣ್ಣುಗ-
ಳ ಪರಿಮಳ ನನ-
ಗಷ್ಟೇ ಕೇಳಲಿ!

*
ಹೂ ತುಳಿದ ಪಾ-
ದಗಳ ಚುಚ್ಚಿದ್ದು ಪ
  -ರಾಗದ ಹುಡಿ! 

*
ನೀ ಬರಲು ನ- 
ನ್ನ ಕನಸೊಳಗೆ ನಿ-
ದ್ದೆಗೂ ಎಚ್ಚರ!

*
ಜೇನು ತೊಯ್ದ ನಿ-
ನ್ನ ತುಟಿಗಳ ಹಿಂದೆ
ನಾಗರ ವಿಷ!

*
ಮುತ್ತುಗಳ ಭಾ-
ರ ಕಣ್ಣ ಮೇಲಿಳಿಸಿ
ತುಟಿ ನಿರಾಳ!

*
ಹೂ ತುಳಿದ ಪಾ-
ದಗಳ ಚುಚ್ಚಿದ್ದು ಪ
  -ರಾಗದ ಹುಡಿ! 

Tuesday 1 October 2013

ಇಷ್ಟೊಂದು ಗಾಂಧಿಗಳ ಗದ್ದಲದ ಮಧ್ಯೆ ನಾವು ಮರೆತಿರುವ ಗಾಂಧಿಯ ಹೆಸರು ಫಿರೋಜ್!



"A mutiny in my mind has compelled me to rise this debate. When things of such magnitude as I shall describe to you later occur, silence become a crime...."


           ಪ್ರಶ್ನೋತ್ತರ ವೇಳೆಯಲ್ಲಿ ರಾಯ್‌ಬರೇಲಿ ಕ್ಷೇತ್ರದ ಸಂಸದ ಹೀಗೆ ಘರ್ಜಿಸುತ್ತಿದ್ದರೆ, ಇಡೀ ಲೋಕಸಭೆ ಆತನ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿತ್ತು. ಅಸಲಿಗೆ ಆತ ಮಾತನಾಡುತ್ತಿದ್ದುದೇ ಅಪರೂಪ. ಆದರೆ ಮಾತನಾಡಲು ನಿಂತಾಗಲೆಲ್ಲಾ ಸರ್ಕಾರಿ ಇಲಾಖೆಯೊಂದರ ಹಗರಣವನ್ನೋ, ಅವ್ಯವಸ್ಥೆಯನ್ನೋ ದಾಖಲೆಗಳ ಸಮೇತ ಬಯಲಿಗೆಳೆದು ಸರ್ಕಾರವನ್ನು ಮುಜುಗರಕ್ಕೀಡು ಮಾಡುತ್ತಿದ್ದರು. ಅವರದೇ ಪಕ್ಷದ ಸಂಸದರು ಅವರನ್ನು ಭಯ ಮಿಶ್ರಿತ ಮೆಚ್ಚುಗೆಯಿಂದ 'dangerously well informed person' ಎಂದು ಕರೆಯುತ್ತಿದ್ದರು.

ಅವತ್ತು ಅವರು ದನಿಯೆತ್ತಿದ್ದು ’ಹರಿದಾಸ್ ಮುಂದ್ರಾ’ ಹಗರಣದ ವಿರುದ್ಧ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸರ್ಕಾರವೇ ಭಾಗಿಯಾಗಿದೆ ಎಂಬ ಆರೋಪ ಬಂದ ಮೊದಲ ಹಗರಣ ಅದು. ಅಷ್ಟೇ ಅಲ್ಲ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಭ್ರಷ್ಟಾಚಾರದ ಹೊಣೆ ಹೊತ್ತು ರಾಜೀನಾಮೆ ನೀಡಲು ಕಾರಣವಾದ ಹಗರಣ ಅದು. ಅವತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಪಕ್ಷದ ಸರ್ಕಾರ. ಲೋಕಸಭೆಯಲ್ಲಿ ಹಗರಣವನ್ನು ಎಳೆ‌ಎಳೆಯಾಗಿ ತೆರೆದಿಟ್ಟು ಸರ್ಕಾರ ತಲೆತಗ್ಗಿಸುವಂತೆ ಮಾಡಿದ ವ್ಯಕ್ತಿ ವಿರೋಧ ಪಕ್ಷಕ್ಕೆ ಸೇರಿದವರೇನೂ ಆಗಿರಲಿಲ್ಲ, ಬದಲಿಗೇ ಅದೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಸದಸ್ಯ. ಅವರ ಪತ್ನಿ ಆಗ ತಾನೇ ಕಾಂಗ್ರೆಸ್ ಪಕ್ಷದ ಭವಿಷ್ಯದ ನಾಯಕಿ ಎಂದು ಗುರುತಿಸಿಕೊಳ್ಳತೊಡಗಿದ್ದರು. ಯಾವ ಸರ್ಕಾರದ ವಿರುದ್ಧ ಅವರು ಆರೋಪಗಳನ್ನು ಮಾಡುತ್ತಿದ್ದರೋ, ಅವರ ಮಾವ ಆಗ ಅದೇ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿದ್ದರು!!!

ಈ ದೇಶ ಮಹಾತ್ಮಾ ಗಾಂಧಿಯನ್ನು ಯಾವತ್ತಿಗೂ ಮರೆಯಲಾರದು. ಕಡೇ ಪಕ್ಷ ಅವರು ಕರೆನ್ಸಿ ನೋಟುಗಳಲ್ಲಾದರೂ ಜೀವಂತವಿರುತ್ತಾರೆ. ಇಂದಿರಾ ಗಾಂಧಿಯ ಜನಪ್ರಿಯತೆ ಇವತ್ತಿಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷದ ಅತಿ ದೊಡ್ಡ ವೋಟ್ ಬ್ಯಾಂಕ್. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಡಿದು, ರಾಷ್ಟ್ರದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯವರೆಗೆ ರಾಜೀವ್ ಗಾಂಧಿಯ ಹೆಸರನ್ನು ಕಾಂಗ್ರೆಸ್ ಪಕ್ಷ ಅಜರಾಮರಗೊಳಿಸಿದೆ. ಸೋನಿಯಾ ಗಾಂಧಿ ಇಂದು ಭಾರತದ ಅತ್ಯಂತ ಪ್ರಭಾವೀ ವ್ಯಕ್ತಿ. ಫ಼ೇಸ್‌ಬುಕ್‌ಗೆ ಲಾಗಿನ್ ಆದರೆ ಅಲ್ಲಿ ನಿಮಗೆ ರಾಹುಲ್ ಗಾಂಧಿ ಜೋಕುಗಳಾಗಿ, ಕಾರ್ಟೂನ್‌ಗಳಾಗಿ ಕಾಣಸಿಗುತ್ತಾರೆ. ಮೇನಕಾ ಗಾಂಧಿ ಪ್ರಾಣಿಗಳ ಸಂರಕ್ಷಣೆ ಕುರಿತು ಪತ್ರಿಕೆಗಳಿಗೆ ಬರೆಯುತ್ತಾರೆ. ಹಿಂದೂ ಮೂಲಭೂತವಾದಿಗಳ ಪಾಲಿನ ನೀಲಿ ಕಣ್ಣಿನ ಹುಡುಗ ವರುಣ್ ಗಾಂಧಿಯನ್ನು ಹೇಗೆ ತಾನೇ ಮರೆಯಲು ಸಾಧ್ಯ? ಇವರಲ್ಲಿ ಕನಿಷ್ಠ ಒಬ್ಬರನ್ನಾದರೂ ಪ್ರತೀದಿನವೂ ಒಂದಲ್ಲ ಒಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತೇವೆ. ಆದರೆ ಯಾರನ್ನು ನಾವಿಂದು ನೆನಪಿಟ್ಟುಕೊಂಡು ಗೌರವಿಸಬೇಕಿತ್ತೋ ಆ ಗಾಂಧಿಯನ್ನು ಮಾತ್ರ ಮರೆತುಬಿಟ್ಟಿದ್ದೇವೆ!

ಅವರು ಫಿರೋಜ್ ಜಹಾಂಗೀರ್ ಗಾಂಧಿ!!

1912ರ ಸೆಪ್ಟೆಂಬರ್ 8ರಂದು ಮುಂಬೈನ(ಅವತ್ತಿನ ಬಾಂಬೆ) ಖೇತವಾಡಿಯ ನವ್‌ರೋಜಿ ನಾಟಕ್‌ವಾಲಾ ಭವನ್‌ನಲ್ಲಿ ಶ್ರೀಮಂತ ಗುಜರಾತಿ ಪಾರ್ಸಿ ಕುಟುಂಬವೊಂದರಲ್ಲಿ ಜನಿಸಿದರು ಫಿರೋಜ್. ಅವರ ತಂದೆ ಜೆಹಾಂಗೀರ್ ಗಾಂಧಿ ಮರೈನ್ ಎಂಜಿನಿಯರ್ ಆಗಿದ್ದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಫಿರೋಜ್ ತಾಯಿ ರತ್ತಿಮೈ ಗಾಂಧಿಯೊಂದಿಗೆ, ತಮ್ಮ ಚಿಕ್ಕಮ್ಮ ಶಿರಿನ್‌ರೊಂದಿಗೆ ವಾಸಿಸಲು ಅಲಾಹಾಬಾದ್‌ಗೆ ತೆರಳಿದರು. ತಾಯಿ ಮತ್ತು ಚಿಕ್ಕಮ್ಮರ ಆರೈಕೆಯಲ್ಲಿ ಬೆಳೆದ ಫಿರೋಜ್ ಆಂಗ್ಲೋ ವರ್ನ್ಯಾಕುಲರ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿ, ಎವಿಂಗ್ ಕ್ರಿಶ್ಚಿಯನ್ ಕಾಲೇಜಿನಿಂದ ಪದವಿಯನ್ನು ಪಡೆದು ಮುಂದೆ ಪ್ರತಿಷ್ಟಿತ ಲಂಡನ್ ಸ್ಕೂಲ್ ಆಫ಼್ ಎಕಾನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು (ಇದೇ ಸಂಸ್ಥೆಯಲ್ಲಿ ನೆಹರೂ ಕೂಡಾ ಅಭ್ಯಾಸ ಮಾಡಿದ್ದರು). ಅಲಾಹಾಬಾದ್‌ನ ಆನಂದ ಭವನಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದ ಗಾಂಧಿ, ಪಟೇಲ್ ಮುಂತಾದ ನಾಯಕರನ್ನು ಹತ್ತಿರದಿಂದ ನೋಡಿ ಅವರ ಪ್ರಭಾವಕ್ಕೆ ಸಿಲುಕಿದ ಫಿರೋಜ್ ತಮ್ಮ ಹದಿನೆಂಟನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.

ಒಂದೊಮ್ಮೆ ಫಿರೋಜ್ ತಾಯಿ ರತ್ತಿಮೈ, ಗಾಂಧೀಜಿಯವರನ್ನು ಭೇಟಿಯಾಗಿ ತಮ್ಮ ಮಗನಿಗೆ ಹಿಡಿದಿರುವ ಸ್ವಾತಂತ್ರ್ಯ ಹೋರಾಟದ ಹುಚ್ಚು ಬಿಡಿಸಿ, ವಿಧ್ಯಾಭ್ಯಾಸದ ಮೇಲೆ ಗಮನ ನೀಡುವಂತೆ ಸಲಹೆ ನೀಡಿ ಎಂದು ಕೇಳಿಕೊಂಡರು. ನಸುನಕ್ಕ ಗಾಂಧಿ, "ನಿಮ್ಮ ಮಗನ ಕುರಿತು ಯೋಚಿಸಬೇಡಿ. ಆತ ಒಬ್ಬ ಮಹಾನ್ ಕ್ರಾಂತಿಕಾರಿ. ಫಿರೋಜ್‌ನಂತಹ ಏಳು ಯುವಕರು ಒಂದುಗೂಡಿದರೆ ಸಾಕು, ಭಾರತಕ್ಕೆ ಕೇವಲ ಏಳು ದಿನಗಳಲ್ಲಿ ಸ್ವಾತಂತ್ರ್ಯ ತಂದುಕೊಡುತ್ತಾರೆ" ಎಂದಿದ್ದರು!

ಮುಂದೆ ನೆಹರೂ ಕುಟುಂಬಕ್ಕೆ ಹತ್ತಿರವಾದ ಫಿರೋಜ್, ಟಿಬಿ ಖಾಯಿಲೆಯಿಂದ ನರಳುತ್ತಿದ್ದ ನೆಹರೂರ ಪತ್ನಿ ಕಮಲಾ ನೆಹರೂರ ಗೆಳೆಯನಾಗಿ ಜೊತೆಗಿದ್ದರು. ಖಾಯಿಲೆಯ ಕಾರಣದಿಂದ ನೆಹರೂರ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಕಮಲಾರಿಗೆ ಆತ್ಮಬಂಧುವಾಗಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಆಕೆ ಸಾಯುವ ದಿನದವರೆಗೆ ಜೊತೆಗಿದ್ದು ಆರೈಕೆ ಮಾಡಿ ಆಕೆಯಲ್ಲಿ ಜೀವನೋತ್ಸಾಹ ತುಂಬಿದರು. ಮುಂದೆ ನೆಹರೂ ಪುತ್ರಿ ಇಂದಿರಾ ಪ್ರಿಯದರ್ಶಿನಿಯನ್ನು ಪ್ರೀತಿಸಿ, 1942ರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು.


1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಆಯ್ಕೆಗೊಂಡ ಫಿರೋಜ್ 1957ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಪುನರಾಯ್ಕೆಯಾದರು. ಇಂದಿರಾ ಗಾಂದಿಗಿಂತ ಮುಂಚೆಯೇ ರಾಜಕೀಯ ಪ್ರವೇಶಿಸಿದ್ದ ಅವರು ನೆಹರೂಗೆ ನಿಷ್ಟೆ ತೋರಿಸಿದ್ದರೆ, ಅವರ ಉತ್ತರಾಧಿಕಾರಿಯಾಗುವ ಸುವರ್ಣ ಅವಕಾಶವನ್ನು ನಿರಾಯಾಸವಾಗಿ ಗಿಟ್ಟಿಸಿಕೊಳ್ಳಬಹುದಿತ್ತು. ಆದರೆ ಅವರೊಳಗಿನ ಪ್ರಾಮಾಣಿಕ ರಾಜಕಾರಣಿ, ನಿರ್ಭೀತ ಪತ್ರಕರ್ತ ಮತ್ತು ಉತ್ಕಟ ದೇಶಪ್ರೇಮಿ ಅವರನ್ನು ಅಂತಹ ಕೆಳಮಟ್ಟದ ರಾಜಕೀಯಕ್ಕಿಳಿಯಲು ಎಂದಿಗೂ ಬಿಡಲಿಲ್ಲ. ಅವತ್ತಿಗಾಗಲೇ ಕಾಂಗ್ರೆಸ್‌ನ ಉನ್ನತ ನಾಯಕರಿಗೆ ಕಾರ್ಪೋರೇಟ್ ವಲಯದ ಉದ್ಯಮಿಗಳ ಜೊತೆ ಗೆಳೆತನ ಇತ್ತು. ಈ ಉದ್ಯಮಿಗಳಿಂದ ಕಾಂಗ್ರೆಸ್ ತನ್ನ ಚುನಾವಣೆ ಖರ್ಚಿಗೆ ದೇಣಿಗೆಯನ್ನೂ ಪಡೆಯುತ್ತಿತ್ತು.

ಆದರೆ ಪಕ್ಷಕ್ಕಿಂತ ದೇಶ ದೊಡ್ಡದು ಎಂದು ನಂಬಿದ್ದ ಫಿರೋಜ್ 1955ರಲ್ಲಿ ದಾಲ್ಮಿಯಾ-ಜೈನ್ ಕಂಪೆನಿಗಳ ಸಮೂಹ ತಾನು ಸ್ಥಾಪಿಸಿದ್ದ ಗ್ವಾಲಿಯರ್ ಬ್ಯಾಂಕ್ ಮತ್ತು ಭಾರತ್ ಇನ್‌ಶ್ಯೂರೆನ್ಸ್ ಕಂಪೆನಿಯಲ್ಲಿ ಸಾರ್ವಜನಿಕರು ತೊಡಗಿಸಿದ್ದ ಲಕ್ಷಾಂತರ ರೂಪಾಯಿ ಠೇವಣಿ ಹಣವನ್ನು ತನ್ನ ಖಾಸಗಿ ಒಡೆತನದ ’ಬೆನೆಟ್ ಮತ್ತು ಕೊಲೆಮನ್’ ಕಂಪೆನಿಯ ಅಭಿವೃದ್ಧಿಗೆ ಹೇಗೆ ಕಾನೂನುಬಾಹಿರವಾಗಿ channelise ಮಾಡುತ್ತಿದೆ ಎಂಬ ವಿವರಗಳನ್ನು ಲೋಕಸಭೆಗೆ ನೀಡಿದರು. ಮುಂದೆ ಬಿರ್ಲಾ ಮತ್ತು ಗೋಯೆಂಕಾ (ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕಾ ಸಮೂಹದ ಗೋಯೆಂಕಾ ಅಲ್ಲ) ಸಮೂಹಗಳ ಇಂಥದೇ ಅನೈತಿಕತೆಗಳನ್ನೂ ಬಯಲಿಗೆಳೆದರು. ಒಬ್ಬ investigative journalistನಂತೆ ಕೆಲಸ ಮಾಡಿದ್ದ ಫಿರೋಜ್ ಈ ಹಗರಣಗಳ ವಿರುದ್ಧ ಎಷ್ಟು ಕರಾರುವಕ್ಕಾಗಿ ಸಾಕ್ಷಿಗಳನ್ನು ಸಂಗ್ರಹಿಸಿದ್ದರೆಂದರೆ ಯಾವ ವಿಚಾರಣಾ ಸಮಿತಿಯನ್ನೂ ನೇಮಿಸದೆ ಕೇವಲ ಎರಡೇ ತಿಂಗಳಲ್ಲಿ ರಾಷ್ಟ್ರಪತಿಗಳು ಸುಗ್ರೀವಾಜ್ಞೆಯೊಂದನ್ನು(ordinance) ಹೊರಡಿಸಿ 'Life Insurance Corporation of India Ltd.(LIC)' ಹೆಸರಿನ ಅಡಿಯಲ್ಲಿ ಒಟ್ಟು 245 ಖಾಸಗಿ ಇನ್‌ಶ್ಯೂರೆನ್ಸ್ ಕಂಪೆನಿಗಳನ್ನು ರಾಷ್ಟ್ರೀಕರಣಗೊಳಿಸಿದರು.

ಆಗ ಫಿರೋಜ್ ಗಾಂಧಿಯ ವಿರುದ್ಧವೇ ಆರೋಪಗಳು ಕೇಳಿ ಬಂದವು. ಪಾರ್ಸಿ ಸಮುದಾಯಕ್ಕೆ ಸೇರಿದ ಫಿರೋಜ್‌ರನ್ನು ಅದೇ ಸಮುದಾಯಕ್ಕೆ ಸೇರಿದ ’ಟಾಟಾ’ಗಳು ತಮ್ಮ ಪ್ರತಿಸ್ಪರ್ಧಿ ಕಂಪೆನಿಗಳನ್ನು ಹಣಿಯಲು ಏಜೆಂಟ್‌ರಂತೆ ಬಳಸಿಕೊಳ್ಳುತ್ತಿದ್ದಾರೆ. ಟಾಟಾರಿಂದ ಫಿರೋಜ್ ಹಣ ಪಡೆದಿದ್ದಾರೆ ಎಂಬಂತಹ ಆರೋಪಗಳನ್ನು ಮಾಡಲಾಯಿತು. ಇಂತಹ ಮಾತುಗಳಿಗೆಲ್ಲಾ ತಲೆ ಕೆಡಿಸಿಕೊಳ್ಳದ ಫಿರೋಜ್ ಕೆಲವೇ ದಿನಗಳಲ್ಲಿ ಟಾಟಾಗಳ ಒಡೆತನದ Tata Engineering and Locomotive Company(TELCO) ಹೇಗೆ ರೈಲ್ವೇ ಎಂಜಿನ್‌ಗಳನ್ನು ದುಪ್ಪಟ್ಟು ಬೆಲೆಗೆ ಸರ್ಕಾರಕ್ಕೆ ಮಾರುತ್ತಿದೆ ಎಂದು ಎಂಜಿನ್‌ಗಳ ತಯಾರಿಕಾ ವೆಚ್ಚ, ವಿದೇಶಿ ಮಾರುಕಟ್ಟೆಯಲ್ಲಿನ ಬೆಲೆ ಮುಂತಾದ ವಿವರಗಳೊಂದಿಗೆ ಬಿಡುಗಡೆ ಮಾಡಿದರು. ಫಿರೋಜ್‌ರ ಒತ್ತಡಕ್ಕೆ ಮಣಿದ ಸರ್ಕಾರ ರೈಲ್ವೇ ಎಂಜಿನ್‌ಗಳನ್ನು ತಯಾರಿಸುವ ಉದ್ದಿಮೆಯೊಂದನ್ನು ಸ್ವತಃ ತಾನೇ ಆರಂಭಿಸಿತು.

ಆದರೆ ಇನ್‌ಶ್ಯೂರೆನ್ಸ್ ಕಂಪೆನಿಗಳು ರಾಷ್ಟ್ರೀಕರಣಗೊಂಡರೂ ಭ್ರಷ್ಟಾಚಾರ ಮಾತ್ರ ನಿಲ್ಲಲಿಲ್ಲ. ಮುಂದೆ  1958ರಲ್ಲಿ ಫಿರೋಜ್ ಬಯಲಿಗೆಳೆದಿದ್ದೇ ಅತ್ಯಂತ ಕುಖ್ಯಾತವಾದ ಹರಿದಾಸ್ ಮುಂದ್ರಾ ಹಗರಣ.  ಎಲ್‌ಐಸಿಯಲ್ಲಿ ಸಾರ್ವಜನಿಕರು ತೊಡಗಿಸಿದ್ದ ರೂ. ಒಂದು ಕೋಟಿಗೂ ಮಿಕ್ಕಿದ ಹಣವನ್ನು ಸರ್ಕಾರ ಮುಂದ್ರಾ ಒಡೆತನದ ಕಂಪೆನಿಯ ಷೇರುಗಳನ್ನು ಅವುಗಳ ಮೌಲ್ಯಕ್ಕಿಂತ ಶೇಕಡಾ 30-40ರಷ್ಟು ಹೆಚ್ಚು ಮೊತ್ತ ನೀಡಿ ಖರೀದಿಸಲು ಬಳಸಿಕೊಂಡಿತ್ತು. ಜೂನ್ 17ರಂದು ರೂ.2.81ಕ್ಕೆ quote ಆಗಿದ್ದ Osler Lamps Manufacturing ಕಂಪೆನಿಯ ಷೇರಿನ ಬೆಲೆ ಜೂನ್ 24ರಂದು ಅನಿರೀಕ್ಷಿತವಾಗಿ ರೂ.4ಕ್ಕೆ ಜಿಗಿದಿತ್ತು. ರೂ.16.87ರಲ್ಲಿ ಸ್ಥಿರವಾಗಿದ್ದ Angelo Brothers ಕಂಪೆನಿಯ ಷೇರಿನ ಮುಖಬೆಲೆ ಇದ್ದಕಿದ್ದಂತೆಯೇ ಜೂನ್ 24ರಂದೇ ರೂ.20.25ಕ್ಕೆ ಏರಿತ್ತು. ಅಚ್ಚರಿಯ ಸಂಗತಿಯೆಂದರೆ ಜೂನ್ 25ರಂದು ಎಲ್‌ಐಸಿ ಈ ಷೇರುಗಳನ್ನು ಖರೀದಿಸಿತ್ತು. ಆದರೆ ಡಿಸೆಂಬರ್‌ನಲ್ಲಿ ಫಿರೋಜ್ ಗಾಂಧಿ ಲೋಕಸಭೆಯಲ್ಲಿ ಈ ಹಗರಣದ ಬಗ್ಗೆ ಹಣಕಾಸು ಸಚಿವರನ್ನು ಪ್ರಶ್ನಿಸುವ ವೇಳೆಗಾಗಲೇ ಸರ್ಕಾರ ಖರೀದಿಸಿದ್ದ ಮುಂದ್ರಾ ಕಂಪೆನಿಯ ಷೇರುಗಳ ಮೌಲ್ಯ ರೂ.37 ಲಕ್ಷಗಳಷ್ಟು ಕುಸಿದು ಸರ್ಕಾರಕ್ಕೆ ಭಾರೀ ನಷ್ಟವುಂಟಾಗಿತ್ತು! ನಿರಂತರ ಒಂದೂವರೆ ಘಂಟೆಗಳ ಕಾಲ ಲೋಕಸಭೆಯಲ್ಲಿ ಈ ಹಗರಣವನ್ನು ಕುರಿತು ಮಾತನಾಡಿದ್ದ ಫಿರೋಜ್ ತಮ್ಮ ಮಾತಿನ ಬಲೆಯಲ್ಲಿ ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಾಮಚಾರಿಯವರನ್ನು ಎಷ್ಟು ಜಾಣತನದಿಂದ ಟ್ರ್ಯಾಪ್ ಮಾಡಿದ್ದರೆಂದರೆ, ಕೊನೆಗೆ ಅವರು ಈ ಹಗರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಹಣಕಾಸು ಇಲಾಖೆಯ ಕಾರ್ಯದರ್ಶಿ ವಜಾಗೊಂಡರು ಮತ್ತು ಹರಿದಾಸ್ ಮುಂದ್ರಾ ಜೈಲು ಸೇರಿದರು. ಇದಾದ 41 ವರ್ಷಗಳ ನಂತರ ಇಂತಹದ್ದೇ ಹಗರಣವೊಂದು 2001ರಲ್ಲಿ ನಡೆದಿತ್ತು(UTI SCAM). ಆಗ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ರಾಜೀನಾಮೆಯನ್ನೇನೂ ನೀಡಿರಲಿಲ್ಲ. ಯಾಕೆಂದರೆ ಆಗ ಅವರ ಕುತ್ತಿಗೆ ಪಟ್ಟಿ ಹಿಡಿದು ರಾಜೀನಾಮೆ ಪಡೆಯಲು ಫಿರೋಜ್ ಗಾಂಧಿ ಇರಲಿಲ್ಲ!

ಇವತ್ತು ಇಂಟರ್‌ನೆಟ್ ಮೂಲಕ, ದೂರದರ್ಶನದ ಮೂಲಕ ಷೇರು ಮಾರುಕಟ್ಟೆಯ ಅತೀ ಸಣ್ಣ ಕದಲಿಕೆ ಕೂಡಾ ಕ್ಷಣಾರ್ಧದಲ್ಲಿ ನಮಗೆ ತಿಳಿಯುತ್ತದೆ. ಆದರೆ 1958ರಲ್ಲಿ ಇಂಟರ್‌ನೆಟ್, ಟೆಲಿವಿಷನ್, ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಇರದಿದ್ದ ಕಾಲದಲ್ಲಿ ಫಿರೋಜ್ ಕೋಲ್ಕತ್ತಾದ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೂರಾರು ಟೆಲಿಗ್ರಾಮ್‌ಗಳನ್ನು ಕಳಿಸಿ ದಾಖಲೆಗಳನೆಲ್ಲಾ ತರಿಸಿಕೊಂಡು, ತಿಂಗಳುಗಟ್ಟಲೆ ಶ್ರಮವಹಿಸಿ ತಮ್ಮ ವರದಿಯ ಪ್ರತೀ ಪುಟವನ್ನು ಬರೆದಿದ್ದರು! ಈವತ್ತು ಲೋಕಸಭೆಯಲ್ಲಿ ನಿದ್ದೆ ಮಾಡುವ, walk-out ಮಾಡುವ, ಸಿದ್ಧತೆಯಿಲ್ಲದೆ ತಲೆಹರಟೆಯ ಮಾತಾಡಿ ಗಲಾಟೆ ಎಬ್ಬಿಸುವ  ವಿರೋಧ ಪಕ್ಷಗಳ ನೂರಾರು ಸಂಸದರ ಬದಲು ಒಬ್ಬ ಫಿರೋಜ್ ಗಾಂಧಿ ಇದ್ದಿದ್ದರೆ ಎಷ್ಟು ಪರಿಣಮಕಾರಿಯಾಗಿರುತ್ತಿತ್ತು ನೀವೇ ಯೊಚಿಸಿ! ಇಂದು ಲೋಕಸಭೆಯಲ್ಲಿ ಸುಷ್ಮಾ ಸ್ವರಾಜ್‌ರಂಥವರು ಎಷ್ಟೇ ಹೂಂಕಾರ ಹಾಕಿದರೂ ಕ್ಯಾರೇ ಎನ್ನದ ಕಾಂಗ್ರೆಸ್ ಅವತ್ತು ತನ್ನದೇ ಪಕ್ಷದ ಫಿರೋಜ್ ಗಾಂಧಿಯ ಮೌನಕ್ಕೆ ಹೆದರುತ್ತಿತ್ತು. ಫಿರೋಜ್ ಲೋಕಸಭೆಯ ಅಧಿವೇಶನದಲ್ಲಿ ಮೌನವಾಗಿದ್ದಾರೆ ಎಂದರೆ ಮುಂದಿನ ಅಧಿವೇಶನದಲ್ಲಿ ಹಗರಣವೊಂದನ್ನು ಸ್ಫೋಟಿಸುತ್ತಾರೆ ಎಂಬ ಖಾತರಿ ಇತ್ತು ಸರ್ಕಾರಕ್ಕೆ!

1960ರಲ್ಲಿ ತಮ್ಮ 48ನೇ ವಯಸ್ಸಿನಲ್ಲಿ ನಿಧನರಾದ ಫಿರೋಜ್ ಈಗ ಬದುಕಿದ್ದಿದ್ದರೆ ಅವರಿಗೆ ಬರೋಬ್ಬರಿ ನೂರಾಒಂದು ವರ್ಷ ವಯಸ್ಸು. ಬಾಲಿವುಡ್ ನಟಿಯರ ವಾರ್ಡ್‌ರೋಬ್ ಮಾಲ್‌ಫ಼ಂಕ್ಷನ್‌ಗಳನ್ನು ಪ್ರೈಮ್‌ಟೈಮ್‌ನಲ್ಲಿ ತೋರಿಸುವ ನ್ಯೂಸ್ ಚಾನೆಲ್ಲುಗಳು 2012ರ ಸೆಪ್ಟೆಂಬರ್ 12 ಫಿರೋಜ್‌ರ ಜನ್ಮಶತಮಾನೋತ್ಸವವೆಂದು ನೆನಪಿಸಲಿಲ್ಲ. ಕಳೆದ ವರ್ಷವೊಂದರಲ್ಲೇ ರಾಜೀವ್ ಗಾಂಧಿ, ಇಂದಿರಾ ಗಾಂಧಿಯರ ಜನ್ಮದಿನಗಳ ಜಾಹೀರಾತು ನೀಡಲು ರೂ.7.25 ಕೋಟಿ ಸರ್ಕಾರದ ಹಣ ಖರ್ಚು ಮಾಡಿದ, ಮೋತಿಲಾಲ್ ನೆಹರೂ 150ನೇ ಜನ್ಮದಿನ ಆಚರಿಸಿದ ಕಾಂಗ್ರೆಸ್‌ಗೂ ತನ್ನ ಈ ಮೇರು ನಾಯಕನ ನೆನಪಾಗಲಿಲ್ಲ. ತಪ್ಪು ಅವರದಲ್ಲ ಬಿಡಿ, ಭ್ರಷ್ಟಾಚಾರದ ಕೆಸರಲ್ಲಿ ಮುಳುಗಿರುವ ಕಾಂಗ್ರೆಸ್ ಶಾಸ್ತ್ರಿ, ಫಿರೋಜ್‌ರಂತಹ ನಾಯಕರನ್ನು ಗೌರವಿಸುವ ಯೋಗ್ಯತೆಯನ್ನೇ ಕಳೆದುಕೊಂಡಿದೆ!

ಇವತ್ತು ಮೋದಿ ಅಭಿಮಾನಿಗಳು ಫ಼ೇಸ್‌ಬುಕ್ ಟ್ವಿಟ್ಟರ್‌ಗಳಲ್ಲಿ ತಮ್ಮ ನಾಯಕನ ಸಾಮರ್ಥ್ಯವನ್ನು project ಮಾಡುವ ಬದಲು "ಇಂದಿರಾ ಗಾಂಧಿಯ ಚಾರಿತ್ರ್ಯ ಸರಿ ಇರಲಿಲ್ಲ. ಆಕೆಯ ಗಂಡ ಫಿರೋಜ್ ಖಾನ್ ಎಂಬ ಮುಸಲ್ಮಾನ . ಆತನ ತಂದೆ ನವಾಬ್ ಖಾನ್ ನೆಹರೂ ಕುಟುಂಬಕ್ಕೆ ಮದ್ಯ ಸರಬರಾಜು ಮಾಡುತ್ತಿದ್ದರು" ಎಂಬಂತಹ ಕಥೆಗಳನ್ನು ಕಟ್ಟುವ ಕೀಳುಮಟ್ಟಕ್ಕೆ ಇಳಿದಿರುವುದನ್ನು ನೋಡಿದಾಗ ಇದನ್ನೆಲ್ಲಾ ಬರೆಯಬೇಕೆನ್ನಿಸಿತು. ಬಹುಶ್ಃ ಫಿರೋಜ್ ಇವತ್ತು ಬದುಕಿದ್ದಿದ್ದರೆ ಹೌದು ನಾನು ಮುಸಲ್ಮಾನನೇ, ಏನೀಗ? ಎಂದು ನಕ್ಕು ಸುಮ್ಮನಾಗುತ್ತಿದ್ದರು. ರಾಜಕಾರಣಿ, ಪತ್ರಕರ್ತ, ಸಾಮಾಜಿಕ ಹೋರಾಟಗಾರ, Indian Oil Corporation Ltd.ನ ಮೊದಲ ಅಧ್ಯಕ್ಷ, ಇವತ್ತು ಅಣ್ಣಾ ಹಜಾರೆಯ ಚಳುವಳಿ ಮಾಡಲಾಗದಿದ್ದನ್ನು ಅವತ್ತು ಏಕಾಂಗಿಯಾಗಿ ಮಾಡಿ ತೋರಿಸಿದ್ದ ಫ಼ಿರೋಜ್ ಗಾಂಧಿಯ ಕೊಡುಗೆಯನ್ನು ಸ್ಮರಿಸುವ ಕೃತಜ್ಞತೆಯನ್ನು ಈ ದೇಶ ತೋರಿಸದಿದ್ದರೂ ಪರವಾಗಿಲ್ಲ, ಆದರೆ ಅವರನ್ನು ಅವಮಾನಿಸುವ ದುಷ್ಟತನ ನಮಗೇಕೆ ಬೇಕು?