Thursday 12 February 2015

ಈಗಲಾದರೂ ಬರಿದಾಗಬಾರದೇ ಈ ನನ್ನ ಅಕ್ಷಯ ಬತ್ತಳಿಕೆ...

           ಆ....ಹ್!.. ನಡೆದು ಬರುತ್ತಿದ್ದವನ ತನುಗಂಧವನ್ನು ತೃಪ್ತಿಯಾಗುವವರೆಗೂ ಆಘ್ರಾಣಿಸಲು ದೀರ್ಘ ಕಾಲ ಹಿಡಿದಿಟ್ಟುಕೊಂಡಿದ್ದ ಉಸಿರು ಈಗ ಮೆಲ್ಲನೆ ಬಳಲುತ್ತಿದೆ. ಎಷ್ಟೋ ವರುಷಗಳ ಹಿಂದೆ, ಹೀಗೆಯೇ ಈತನ ನೆತ್ತಿಯನ್ನು ಆಘ್ರಾಣಿಸಿ, ಇವನ ಕಿವಿಯಲ್ಲಿ 'ಬಭ್ರುವಾಹನ' ಎಂದು ಮೂರು ಬಾರಿ ಉಸುರಿದ್ದೆನಲ್ಲವೇ? ಎತ್ತರದಲ್ಲಿ ನನಗೆ ಸರಿಸಮನಾಗಿ ಬೆಳೆದು ನಿಂತಿದ್ದಾನೆ. ಕೇವಲ ದೈಹಿಕ ಎತ್ತರದಲ್ಲಷ್ಟೇ ಅಲ್ಲ, ಶೌರ್ಯದಲ್ಲಿಯೂ, ಪರಾಕ್ರಮದಲ್ಲಿಯೂ ಈ ಧನಂಜಯನನ್ನೇ ಮೀರಿಸುವಂತೆ ಬೆಳೆದು ನಿಂತಿದ್ದಾನೆ. ಉದಯಕಾಲದ ತರುಣ ಸೂರ್ಯನಂತೆ ಗಂಭೀರವಾದ ಮುಖಾರವಿಂದದಲ್ಲಿ ಸಾಕ್ಷಾತ್ ಇಂದ್ರನ ತೇಜಸ್ಸು ಕಂಗೊಳಿಸುತ್ತಿದೆ, ಎಷ್ಟೆಂದರೂ ಇಂದ್ರಪೌತ್ರನಲ್ಲವೇ ಈತ?! ಇವನ ಪರಾಕ್ರಮದ ವಾರ್ತೆ ಮಣಿಪುರದ ಸರಹದ್ದನ್ನು ದಾಟಿ, ಭರತವರ್ಷದ ದಿಗ್ದಿಗಂತಗಳಲ್ಲಿ ಪ್ರತಿಧ್ವನಿಯಾಗುತ್ತಿದುದನ್ನು ಹಸ್ತಿನೆಯಲ್ಲಿಯೇ ಕುಳಿತು ಕೇಳಿ ಅದೆಷ್ಟು ಆನಂದ ಪಡುತ್ತಿದ್ದೆ ನಾನು! ಪಡೆದರೆ ಪಡೆಯಬೇಕು ಬಭ್ರುವಾಹನನಂತಹ ಮಗನನ್ನು!


              ಒಂದೊಂದೇ ಹೆಜ್ಜೆಯನಿಕ್ಕುತ್ತಾ ಆರ್ದ್ರಭಾವದಿಂದ ಬರುವವನನ್ನು ನೋಡುತ್ತಿದ್ದರೆ, ನನ್ನ ದೇಹದ ಕೋಟಿ ಕೋಟಿ ರೋಮಗಳು ಭಾವೋತ್ಕರ್ಷದಿಂದ ನಿಮಿರಿ ನಿಲ್ಲುತ್ತಿವೆ. ಅಯ್ಯೋ ವಿಧಿಯೇ!, ನಾಳೆ ಸಮರಭೂಮಿಯಲ್ಲಿ ಇವನ ಮೇಲೆಯೇ ಶರಪ್ರಯೋಗ ಮಾಡಬೇಕೆ? ನನ್ನದೇ ರಕ್ತಮಾಂಸಗಳನ್ನು ಹಂಚಿಕೊಂಡು ಹುಟ್ಟಿದ ತನೂದ್ಭವನ ರಕ್ತಪಾತವನ್ನು ನೋಡಿ ನಾನು ತೃಪ್ತನಾಗಬೇಕೆ? ಇದೆಂತಹ ಪರೀಕ್ಷೆ ಪಾರ್ಥನ ಬದುಕಿನಲ್ಲಿ? ಇನ್ನೆಷ್ಟು ಅಗ್ನಿದಿವ್ಯಗಳನ್ನು ಹಾಯಬೇಕು ನಾನು? ಮೊದಲು ಪಿತಾಮಹನನ್ನು ಶರಶಯ್ಯೆಯಲ್ಲಿ ಮಲಗಿಸಿದೆ, ನಂತರ ಗುರುದೇವನ ಶಿರಚ್ಛೇದನದ ಬರ್ಬರತೆಗೆ ಸಾಕ್ಷಿಯಾದೆ, ಮುಂದೆ ಭ್ರಾತೃಹತ್ಯೆಯ ಮಹಾಪಾತಕದ ಭಾರಕ್ಕೆ ತಲೆಕೊಟ್ಟೆ. ಈಗ... ಈಗ... ಈಗ... ನನ್ನ ಕಂದನನ್ನು... ಇಲ್ಲ.. ಇಲ್ಲ.. ಶ್ರೀಹರೀ!!! ಪಾರ್ಥಜನ ಶ್ರೀದೇಹವನ್ನು ಘಾತಿಸುವ ಪ್ರತಿಯೊಂದು ಬಾಣವೂ ಪಾರ್ಥನ ಎದೆಯನ್ನೇ ನಾಟುತ್ತದಲ್ಲವೇ? ಇದಕ್ಕಿಂತ ಲೇಸು ನನ್ನ ಗಾಂಢೀವ ಈ ಕ್ಷಣವೇ ಛಿದ್ರವಾಗಿ ಹೋಗಲಿ. ಸವ್ಯಸಾಚಿಯ ಕ್ಷಾತ್ರಿಯ ತೇಜಸ್ಸು ಇವತ್ತಿಗೆ ಬತ್ತಿಹೋಗಿ ನಪುಂಸಕತ್ವ ಆವರಿಸಲಿ. ಬದುಕಿನುದ್ದಕ್ಕೂ ನನ್ನ ಬಾಣಗಳಿಂದ ನನ್ನ ಹೃದಯವನ್ನೇ ಇರಿದುಕೊಂಡಿದ್ದೇನೆ. ಈಗಲಾದರೂ ಬರಿದಾಗಬಾರದೇ ಈ ಅಕ್ಷಯ ಬತ್ತಳಿಕೆ...

            ಬಂದೆಯಾ ಕಂದಾ?.. ಬಾ.. ನಿನ್ನಪ್ಪನ ಪಾದಗಳನ್ನು ಹೀಗೆ ಕಣ್ಣೆವೆ ಮುಚ್ಚದೆ ದಿಟ್ಟಿಸಬೇಡವಪ್ಪಾ. ನನ್ನ ಪಾದಗಳ ಕಂಪನವನ್ನು ನೀನು ಗಮನಿಸಬಾರದು. ಬೆವರಸ್ನಾನದಿಂದ ತೋಯ್ದ ಕೈಗಳಿಂದ ಜಾರುತ್ತಿರುವ ಗಾಂಢೀವದೆಡೆಗೆ ದೃಷ್ಠಿ ಹಾಯಿಸಬೇಡ ಮಗೂ! ನನ್ನ ಅಪ್ಪಣೆಯನ್ನೂ ಮೀರಿ ನಿನ್ನನ್ನು ಬಿಗಿದಪ್ಪಲು ಮುಂದೆ ಚಾಚುತ್ತಿರುವ ನನ್ನ ತೋಳುಗಳನ್ನು ನೀನು ನೋಡಬಾರದು. ಬಭ್ರುವಾಹನ ಎಂದು ಕರೆಯಲು ಮನಸ್ಸು ಒಲ್ಲದು. ’ಪಾರ್ಥ ನಂದನ’ ಎಂಬ ಧ್ವನಿ ಮೊದಲು ತೊದಲಾಗಿ, ಈಗ ಪಿಸುಮಾತಾಗಿ, ಮುಂದಿನ ಕ್ಷಣ ದೀರ್ಘ ಉದ್ಘಾರವಾಗಿ ನಾಲಗೆಯಿಂದ ಹೊರಚಿಮ್ಮಲು ಹಾತೊರೆಯುತ್ತಿದೆ. ಒಂದೇ ಒಂದು ಕ್ಷಣ ನಿನ್ನಪ್ಪನಿಗಾಗಿ ನಿನ್ನ ಕಿವಿಗಳನ್ನು ಮುಚ್ಚಿಕೊಳ್ಳಬಾರದೇ, ಮನತಣಿಯುವಷ್ಟು ಸಲ ಮಗನೇ ಎಂದು ಕರೆಯುತ್ತೇನೆ. ಸಂವತ್ಸರಗಳ ಕಾಲ ತಡೆಒಡ್ಡಿದ್ದ ಪುತ್ರವಾತ್ಸಲ್ಯದ ಅಮೃತಪ್ರವಾಹ ಸಂಕಲ್ಪದ ಕಟ್ಟೆಯೊಡೆದು ಅಶ್ರುರಸಧಾರೆಯಾಗಿ ಹರಿಯುತ್ತಿದೆ. ನಿನ್ನ ಕೈ ಮುಗಿಯುತ್ತೇನೆ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡ ಮಗನೇ!.. ಹಿಂದಿನ ರಾತ್ರಿ ಶಿಬಿರದಲ್ಲಿ ತಳೆದಿದ್ದ ಧೃಢ ನಿರ್ಧಾರ ಹೀಗೆ ನಿನ್ನೆದುರಿನಲ್ಲಿ ನುಚ್ಚುನೂರಾಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಹೇ! ವಾಸುದೇವಾ, ಪಾರ್ಥಸಾರಥೀ ಎಲ್ಲಿದ್ದೀಯಾ?.. ಮೊಮ್ಮಗನಿಂದ ಅಜ್ಜಯ್ಯನನ್ನು ಕೊಲ್ಲಿಸಿ, ಶಿಷ್ಯನಿಂದ ಗುರುಹತ್ಯೆ ಮಾಡಿಸಿ, ತಮ್ಮ ಅಣ್ಣನನ್ನು ಕೊಲ್ಲುವ ಘೋರಗಳಿಗೆ ಸಾಕ್ಷಿಯಾಗಿ ಮುಗುಳ್ನಗುತ್ತಿರುವ ನಿನ್ನ ಲೀಲಾವಿನೋದಕ್ಕೆ ನನ್ನ ಧಿಕ್ಕಾರವಿರಲಿ! ನೀನು ಸೋದರಮಾವನಾದ ಕಂಸನನ್ನು ಕೊಂದಿದ್ದಕ್ಕೆ ಆತ ದುಷ್ಟನೆಂಬ ಸಮರ್ಥನೆಯಾದರೂ ಇತ್ತು. ಬೀಮ ನೂರು ಮಂದಿ ಸಹೋದರರನ್ನು ಕೊಲ್ಲುವಾಗ ಅವನೆದೆಯಲ್ಲಿ ಭ್ರಾತೃಪ್ರೇಮದ ಬಂಧನವಿರಲಿಲ್ಲ, ಇದ್ದುದು ಪ್ರತಿಕಾರದ ದಾವಾಗ್ನಿ ಮಾತ್ರ! ಆದರೆ ಅರ್ಜುನನ ಸ್ಥಿತಿ ಹಾಗಲ್ಲ, ಯಾವನ ಹೃದಯದಲ್ಲಿ ಋಜುತ್ವ ಸ್ಥಿರವಾಗಿ ನೆಲೆಸಿರುತ್ತದೋ, ಆತನಿಗೆ ಅರ್ಜುನನೆಂದು ಹೆಸರಂತೆ. ಋಜುತ್ವದ ಮಾತು ಹಾಗಿರಲಿ, ಹೃದಯವೇ ಇಲ್ಲದವನಂತೆ ಮತ್ತೆ ಮತ್ತೆ ಬಂಧುಗಳ ಮೇಲೆಯೇ ಶಸ್ತ್ರ ಹಿರಿದಿದ್ದೇನೆ! ಆಗದು, ಇನ್ನಾಗದು! ಆದದ್ದಾಗಲಿ, ಮುಕುಂದನಿದ್ದಾನೆ! ನನ್ನ ಚರಣಸ್ಪರ್ಶ ಮಾಡುತ್ತಿರುವ ಈತನ ಭುಜಗಳನ್ನು ಈಗಲೇ ಹಿಡಿದೆತ್ತಿ, ನನ್ನ ತೋಳುಗಳಿಂದ ಬಿಗಿದಪ್ಪಿ ಮುದ್ದಾಡು......
 
    ನಿಲ್ಲು
!!! ನಿಲ್ಲು ಪಾರ್ಥ ನಿಲ್ಲು! ಯಾರ ಪಾದಗಳ ಮೇಲೆ ನಿನ್ನ ಶಿರಸ್ಸನಿರಿಸಿ ಪೂಜಿಸಬೇಕಾಗಿತ್ತೋ, ಅಂತಹ ಅಗ್ರಜನ ಶಿರಸ್ಸನ್ನೇ ಕತ್ತರಿಸಿದ ಪರಮ ಪಾತಕಿ ನೀನು. ಅಂದು ಕರ್ಣನ ಕೊರಳನ್ನು ತರಿದ ತಪ್ಪಿಗೆ, ಇಂದು ಕರ್ಣಾನುಜನ ಕೊರಳನ್ನೇ ಬೆಲೆಯಾಗಿ ತೆರಬೇಕು. ನಿನ್ನ ತಪ್ಪುಗಳಿಗೆ ತಕ್ಕುದಾದ ಶಿಕ್ಷೆಯನ್ನು ನೀನೇ ವಿಧಿಸಿಕೊಳ್ಳದಿದ್ದರೆ ವಿಧಿ ಇನ್ನಷ್ಟು ಘೋರವಾದ ಶಿಕ್ಷೆಯನ್ನೇ ವಿಧಿಸೀತು ಎಚ್ಚರ!! ನಿನ್ನನ್ನು ನೀನು ಶಿಕ್ಷಿಸಿಕೊಳ್ಳುವ, ನಿನ್ನ ಪಾಪದ ಭಾರವನ್ನು ಹೆಗಲಿಂದ ಕೆಳಗಿಳಿಸುವ ಅವಕಾಶವೊಂದು ತಾನಾಗಿ ಒದಗಿಬಂದಿದೆ. ಕೈಚೆಲ್ಲದಿರು ಅದನ್ನು. ಅಣ್ಣನಿಗೆ ಮರಣವನ್ನು ತಂದವನು ಮಗನಿಂದಲೇ ಮೃತ್ಯುವನ್ನು ಪಡೆಯಬೇಕು. ಮಗನಲ್ಲದೇ ಮತ್ತೊಬ್ಬರಿಗೆ ಸೋಲುವವನಲ್ಲ ಫಲ್ಗುಣ! ಆಹ್ವಾನಿಸು ಆತನನ್ನು ಸಮರಾಂಗಣಕ್ಕೆ. ತಿರಸ್ಕಾರದ ಮಾತುಗಳ ಕೆಂಡದ ಮಳೆಯನ್ನೇ ಸುರಿಸು ಈತನ ಮೇಲೆ. ಅಷ್ಟಕ್ಕೂ ಆತನ ಪಿತೃಭಕ್ತಿ ಕುಂದದಿದ್ದರೆ ಮನಸಾರೆ ಚಿತ್ರಾಂಗದೆಯ ಕ್ಷಮೆಕೋರಿ, ’ಮಾತೃ ನಿಂದನೆ’ಯ ಬ್ರಹ್ಮಾಸ್ತ್ರದಿಂದ ಆತನ ಆತ್ಮಾಭಿಮಾನವೆಂಬ ಕವಚವನ್ನು ಭೇಧಿಸು. ಮಗನ ಮೂಲಕವೇ ವೀರಸ್ವರ್ಗವನ್ನು ಸೇರು.. ಮಗನ ಮೂಲಕವೇ ವೀರಸ್ವರ್ಗವನ್ನು ಸೇರು!!



         ಹೌದು! ಹೌದು! ಇದೇ ಸರಿ!! ನನ್ನ ಮನಸ್ಸಾಕ್ಷಿಯ ಮಾತೇ ದಿಟ. ನಡೆಯಲಿ ಅರ್ಜುನ ಬಭ್ರುವಾಹನರ ಕಾಳಗ. ನಾಳೆಯೊಂದು ದಿನದ ಮಟ್ಟಿಗೆ ಪಾರ್ಥನ ಪೌರುಷವೇ ನಷ್ಟವಾಗಿ ಹೋಗಲಿ! ನನ್ನ ಬತ್ತಳಿಕೆಯಲ್ಲಿರುವ ಮಹಾಸ್ತ್ರಗಳನ್ನು ನಿಯಂತ್ರಿಸುವ ಮಹಾಮಂತ್ರಗಳೇ ನನ್ನ ಸ್ಮೃತಿಯಿಂದ ಅಳಿಸಿಹೋಗಲಿ!! ನಾಳೆ ಸೂರ್ಯ ಅಸ್ತಮಿಸುವ ಮುನ್ನವೇ ನನ್ನ ಪ್ರಾಣ ನನ್ನಣ್ಣ ಸೂರ್ಯಸುತನನ್ನು ಸೇರಲಿ!!! ಇದೇ ನನ್ನ ಶಾಪ! ಇದೇ ನನ್ನ ಶಾಪ!! ಪಾರ್ಥನಿಗೇ ಪಾರ್ಥನೇ ವಿಧಿಸುತ್ತಿರುವ ಶಾಪ! ಪಾರ್ಥನಿಗೇ ಪಾರ್ಥನೇ ವಿಧಿಸುತ್ತಿರುವ ಶಾಪ!! ಇದಕ್ಕಿಲ್ಲದೇ ಹೋಗಲಿ ಯಾವ ಉಃಶಾಪ! ಇದಕ್ಕಿಲ್ಲದೇ ಹೋಗಲಿ ಯಾವ ಉಃಶಾಪ!!

No comments: