Wednesday 15 January 2014

ಅವರು ಹಚ್ಚಿಟ್ಟು ಹೋದ ಹಣತೆಯ ಬೆಳಕು ನಮ್ಮೊಳಗಿನ ಕತ್ತಲೆಯನ್ನು ಕರಗಿಸಲಿ...

ಹಣತೆ ಹಚ್ಚುತ್ತೇನೆ ನಾನೂ,
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ





        ಕವಿಗೆ ಸಾವಿಲ್ಲ. ಆತ ತನ್ನ ಕವಿತೆಗಳ ಮೂಲಕ ಚಿರಂತನವಾಗಿ ಉಸಿರಾಡುತ್ತಿರುತ್ತಾನೆ. ಇತ್ತೀಚಿನ ಕವಿಗಳ ಮಾತು ಬಿಡಿ. ’ಮಾನವ ಜಾತಿ ತಾನೊಂದೇ ವಲಂ’ ಎಂದು ಎಂದೋ ಹೇಳಿದ ಪಂಪನನ್ನು ಇವತ್ತಿಗೂ ನೆನಪಿಸಿಕೊಳ್ಳುತ್ತೇವೆ. ’ನೀರೊಳಗಿರ್ದುಂ ಬೆಮರ್ತನುರಗಪತಾಕಂ’ ಎಂಬ ಸಾಲುಗಳ ಮೂಲಕ ವರ್ಣಿಸಲಾಗದ ರೋಮಾಂಚನವಾಗಿ ರನ್ನ ಕಾಡುತ್ತಾನೆ. ತನ್ನ ಕೃತಿಯನ್ನು ’ವಿರಹಿಗಳ ಶೃಂಗಾರ’ ಎಂದು ಬಣ್ಣಿಸಿದ ಕುಮಾರವ್ಯಾಸನ ಪ್ರತಿಭೆಯ ಬಗ್ಗೆ ಹೆಮ್ಮೆ ಪಡುತ್ತೇವೆ. ’ಅನಿಕೇತನ’ದ ಮೂಲಕ ಕುವೆಂಪು, ’ನಾಕುತಂತಿ’ಯಿಂದ ಬೇಂದ್ರೆ, ’ಮೈಸೂರು ಮಲ್ಲಿಗೆ’ಯಿಂದ ನರಸಿಂಹಸ್ವಾಮಿ, ’ಯಾವ ಮೋಹನ ಮುರಲಿ ಕರೆಯಿತೋ’ ಮೂಲಕ ಅಡಿಗರು, ಇವತ್ತಿಗೂ ನಮ್ಮೊಳಗಿನ ಪ್ರೀತಿಯಾಗಿ, ಕ್ರಾಂತಿಯಾಗಿ, ಅಧ್ಯಾತ್ಮವಾಗಿ, ವೈರಾಗ್ಯವಾಗಿ ಜೀವಂತವಿದ್ದಾರೆ. ’ಲೂಸಿಯಾ’ದಂತಹ ಆಧುನಿಕ ಸಂವೇದನೆಯ ಚಿತ್ರದಲ್ಲಿಯೂ ಹನ್ನೆರಡನೆಯ ಶತಮಾನದಲ್ಲಿ ಬದುಕಿದ್ದ ಕನಕದಾಸರು ಪ್ರಸ್ತುತರಾಗುತ್ತಾರೆ ಎಂದರೆ, ಕವಿಯೊಬ್ಬನ ಆಲೋಚನೆ, ಬದುಕಿನ ಕುರಿತಾದ ಒಳನೋಟಗಳು, ಆತ ಪ್ರತಿಪಾದಿಸುವ ಮೌಲ್ಯಗಳು ಎಷ್ಟು ಸಾರ್ವಕಾಲಿಕವಾದುವು ಎಂದು ಅಚ್ಚರಿಯಾಗುತ್ತದೆ. ’ಕರ್ವಾಲೋ’ ಓದುತ್ತಿದ್ದರೆ ಇವತ್ತು ಬದುಕಿಲ್ಲದ ತೇಜಸ್ವಿ ನಮ್ಮ ಪಕ್ಕದಲ್ಲೇ ಕುಳಿತು ಕಥೆ ಹೇಳುತ್ತಿದ್ದಾರೆ ಎನ್ನಿಸುವಷ್ಟು ಆಪ್ತರೆನಿಸುತ್ತಾರೆ.

ಮೊನ್ನೆ ’ರಾಷ್ಟ್ರಕವಿ’ ಡಾ.ಜಿ.ಎಸ್.ಶಿವರುದ್ರಪ್ಪ ನಿಧನರಾದ ಸುದ್ದಿ ತಿಳಿದಾಗ ಈ ಆಲೋಚನೆಗಳೆಲ್ಲವೂ ಮನಸ್ಸಿನಲ್ಲಿ ಸುಳಿದು ಹೋದವು. ಜಿ.ಎಸ್.ಎಸ್. ವಿಶಿಷ್ಟತೆ ಎಂದರೆ ಅವರು ನವೋದಯ ಕಾಲದ ಶ್ರೇಷ್ಠ ಕವಿಗಳಾದ ಕುವೆಂಪು, ಬೇಂದ್ರೆ, ಪುತಿನಗಿಂತ ಕಿರಿಯರು. ನಂತರದ ತಲೆಮಾರಿನ ಲೇಖಕರಾದ ಅನಂತಮೂರ್ತಿ, ಕಂಬಾರ, ತೇಜಸ್ವಿಗಿಂತ ವಯಸ್ಸಿನಲ್ಲಿ ಹಿರಿಯರು. ಈ ವೈಶಿಷ್ಟ್ಯವನ್ನು ಅವರ ಕಾವ್ಯದಲ್ಲಿಯೂ ಕಾಣಬಹುದು. ಬಹುಶಃ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಈ ಎರಡು ತಲೆಮಾರುಗಳ ನಡುವಿನ ಸಾಹಿತ್ಯದ ಹಲವು ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿ ಅಪ್ರಸ್ತುತರಾಗದೆ ಬರೆದವರು, ಬದುಕಿದವರು ಇಬ್ಬರು ಮಾತ್ರ. ಒಬ್ಬರು ಚೆನ್ನವೀರ ಕಣವಿ, ಇನ್ನೊಬ್ಬರು ಜಿ.ಎಸ್.ಶಿವರುದ್ರಪ್ಪ. ಕುವೆಂಪು ಎಂಬ ಮಹಾನ್ ವಟವೃಕ್ಷದ ನೆರಳಿನಲ್ಲಿ ಕವಿಯಾಗಿ ಅರಳಿದ ಜಿ.ಎಸ್.ಎಸ್ ಅವರ ಆರಂಭದ ಕವಿತೆಗಳಲ್ಲಿ ಕುವೆಂಪು ಕಾವ್ಯದ ಪ್ರಭಾವ ಕಾಣಿಸುತ್ತದೆಯಾದರೂ ಅದನ್ನು ಮೀರಿ ತಮ್ಮದೇ ಆದ ಕವಿತೆ ಕಟ್ಟುವ ಶೈಲಿಯೊಂದನ್ನು ಕಂಡುಕೊಳ್ಳುವ ಹಂಬಲ ಮತ್ತು ಅನಿವಾರ್ಯತೆಯಿಂದಾಗಿ ಹೊಸದೊಂದು ಪಥವನ್ನು ನಿರ್ಮಿಸಿಕೊಂಡು, ಆ ಪಥದಲ್ಲಿಯೇ ಬಲು ಎತ್ತರಕ್ಕೆ ಏರಿದರು.

ಜಿ.ಎಸ್.ಎಸ್ ಬರೆಯಲು ಆರಂಭಿಸಿದ ದಿನಗಳಲ್ಲಿ ಕನ್ನಡ ಸಾಹಿತ್ಯ ನವೋದಯದ ರಾಜಮಾರ್ಗದಲ್ಲಿ ಸಾಗುತ್ತಿತ್ತು. ಎಲ್ಲಾ ಸ್ತರದ ಜನರ ಬೌದ್ಧಿಕ ಹಸಿವನ್ನೂ ಸಾಹಿತ್ಯ ನೀಗಿಸುತ್ತಿತ್ತು. ಬಹುಪಾಲು ಜನರ ಮನೆಯೊಳಗೆ ಟಿವಿ ಕಾಲಿಟ್ಟಿರಲಿಲ್ಲ. ಅದೆಷ್ಟೋ ಮನೆಗಳಲ್ಲಿ ಕುಮಾರವ್ಯಾಸ ಭಾರತ ವಾಚನದೊಂದಿಗೆ ದಿನ ಆರಂಭವಾಗುತ್ತಿತ್ತು. ಅನಕೃ ಕಾದಂಬರಿಗಳನ್ನು, ಕೆ.ಎಸ್.ನ ಪದ್ಯಗಳನ್ನು, ಕೈಲಾಸಂ ನಾಟಕಗಳನ್ನು ಜನ ಮುಗಿಬಿದ್ದು ಓದುತ್ತಿದ್ದರು. ನರಸಿಂಹಸ್ವಾಮಿ, ಬೇಂದ್ರೆ ಪದ್ಯಗಳಲ್ಲಿನ ಪ್ರೀತಿಯ ಉತ್ಕಟತೆ ಮತ್ತು ಪ್ರೀತಿಯನ್ನೂ ಅಧ್ಯಾತ್ಮದ ಎತ್ತರಕ್ಕೆ ಏರಿಸಿದ ಕುವೆಂಪು ಕಾವ್ಯಗಳ ಪ್ರಭಾವ ಅವತ್ತಿನ ತಲೆಮಾರಿನ ಒಂದಿಷ್ಟು ಹುಡುಗ-ಹುಡುಗಿಯರನ್ನಾದರೂ ದಾರಿ ತಪ್ಪದ ಹಾಗೆ ಪೊರೆದಿತ್ತು. ಆ ಕಾಲದ ರಾಜಕಾರಣಕ್ಕೆ ಎಸ್.ನಿಜಲಿಂಗಪ್ಪ,  ಶಾಂತವೇರಿ ಗೋಪಾಲಗೌಡರಂಥ ನಾಯಕರು ತಮ್ಮ ನಿಷ್ಠೆ, ಪ್ರಾಮಾಣಿಕತೆಯಿಂದ ಘನತೆ ತುಂಬಿದ್ದರು. ಸಾಹಿತ್ಯ ಕ್ಷೇತ್ರವಂತೂ ರಾಜಕೀಯದಿಂದ ಸಂಪೂರ್ಣ ಮುಕ್ತವಾಗಿತ್ತು. ತಾತ್ವಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನವೋದಯದ ಶ್ರೇಷ್ಠ ಸಾಹಿತಿಗಳು ಪರಸ್ಪರರೊಂದಿಗೆ ಗೌರವ, ಆತ್ಮೀಯ ಭಾವ ಹೊಂದಿದ್ದರು. ರಾಮಾಯಣದ ಪ್ರಸಿದ್ಧ ಕಥೆಯೊಂದನ್ನು ತಮ್ಮ ಆಧುನಿಕ ದೃಷ್ಠಿಕೋನಕ್ಕೆ ಸರಿಹೊಂದುವಂತೆ ಮಾರ್ಪಾಟು ಮಾಡಿ ಕುವೆಂಪು ’ಶೂದ್ರ ತಪಸ್ವಿ’ ರಚಿಸಿದಾಗ ’ಪುರಾಣ ಭಂಜನೆ’ಯನ್ನು ವಿರೋಧಿಸಿದ್ದರು ಮಾಸ್ತಿ ವೆಂಕಟೇಶ ಅಯ್ಯಂಗಾರ್. ಇಷ್ಟೆಲ್ಲಾ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಈ ಇಬ್ಬರು ದಿಗ್ಗಜರು ಪರಸ್ಪರರ ಬಗ್ಗೆ ಹೊಂದಿದ್ದ ಗೌರವ ಅಭಿಮಾನಗಳಿಗೆ ಕುವೆಂಪುರವರ ’ಸನ್ಯಾಸಿ ಮತ್ತು ಇತರ ಕಥೆಗಳು’ ಕಥಾಸಂಕಲನಕ್ಕೆ ಮಾಸ್ತಿ ಬರೆದ ಮುನ್ನುಡಿ ಮತ್ತು ಕುವೆಂಪು ಆತ್ಮಚರಿತ್ರೆ ’ನೆನಪಿನ ದೋಣಿಯಲ್ಲಿ’ ಓದಿದರೆ ಪುರಾವೆ ದೊರೆಯುತ್ತದೆ. ಅವತ್ತಿನ ಕರ್ನಾಟಕದ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಲೋಕಕ್ಕೆ ಸಿದ್ಧಾಂತಕ್ಕಿಂತ ಮೌಲ್ಯಗಳು ಮುಖ್ಯವಾಗಿದ್ದವು.

ಆದರೆ ಜಿ.ಎಸ್.ಎಸ್. ನೋಡ ನೋಡುತ್ತಿದ್ದಂತೆ ನಂಬಲಾಗದಷ್ಟು ಬದಲಾವಣೆಗಳಾದವು. ಪುಸ್ತಕಗಳ ಜಾಗವನ್ನು ಮೆಗಾ ಸೀರಿಯಲ್‌ಗಳು, ರಿಯಾಲಿಟಿ ಶೋಗಳು ಆಕ್ರಮಿಸಿದವು. ನವ್ಯದ ಕವಿಗಳು ಅರ್ಥವಾಗದ ಹಾಗೆ ಬರೆಯುವುದನ್ನೇ ಕಾವ್ಯ ಎಂದುಕೊಂಡ ಪರಿಣಾಮವಾಗಿ ಜನ ಕವಿಗಳಿಂದ, ಕವಿತೆಗಳಿಂದ ಮಾರು ದೂರ ಓಡಿದರು. ನಮ್ಮ ತಲೆಮಾರಿಗೆ ಪ್ರೀತಿ ಮತ್ತು ಆಕರ್ಷಣೆಯ ಮಧ್ಯೆ ವ್ಯತ್ಯಾಸವೇ ತಿಳಿಯದಾಯಿತು. ರಾಜಕಾರಣಿಗಳು ಸಾರ್ವಜನಿಕ ಬದುಕು ಮತ್ತು ವೈಯಕ್ತಿಕ ಬದುಕು ಎರಡರಲ್ಲಿಯೂ ಭ್ರಷ್ಠರಾದರು. ಒಂದೇ ಪಕ್ಷದ ನಾಯಕರು ಒಬ್ಬರ ಚೆಡ್ಡಿ ಇನ್ನೊಬ್ಬರು ಬಿಚ್ಚಿ ಬೆತ್ತಲಾದರು. ಪ್ರಶಸ್ತಿ, ಪುರಸ್ಕಾರಗಳು, ವಿಧಾನ ಪರಿಷತ್ ಸದಸ್ಯತ್ವ, ಅಕಾಡೆಮಿಗಳ ಅಧ್ಯಕ್ಷ ಸ್ಥಾನದ ಆಸೆಗೆ ಬಿದ್ದ ಸಾಹಿತಿಗಳು ರಾಜಕಾರಣಿಗಳ ಹೆಗಲ ಮೇಲೆ ಕೈ ಹಾಕಿದರು. ಪರಸ್ಪರರ ಮೇಲಿನ ಅಸೂಯೆ, ಅಸಹನೆಗಳನ್ನು ಹತ್ತಿಕ್ಕಿಕೊಳ್ಳಲಾಗದೇ ಇದ್ದಾಗ ಒಬ್ಬರ ಮೇಲೊಬ್ಬರು ಕೆಸರೆರಚಿಕೊಂಡರು. ಒಬ್ಬ ಸಾಹಿತಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ನಿರ್ದಿಷ್ಟ ಗುಂಪಿನ ಲೇಖಕರನ್ನು ’ನಾಮರ್ದ’ರೆಂದು ಜರಿದರು. ಹೊಸ ತಲೆಮಾರಿನ ಕವಿಗಳು ಜೀವನ್ಮುಖಿಯಾಗಿ ಬರೆಯುವ ಸಾಧ್ಯತೆಯನ್ನೇ ತೊರೆದು ಜಾಗತೀಕರಣದ ಕರಾಳ ಮುಖದ ಬಗ್ಗೆ ಬರೆಯುವುದನ್ನೇ ಫ್ಯಾಷನ್ ಆಗಿಸಿಕೊಂಡರು. ಬೆಣ್ಣೆ ದೋಸೆ ತಿಂದು ನೊರೆ ನೊರೆ ಕಾಫಿ ಹೀರುತ್ತಿದ್ದ ಮಂದಿ ಮೆಕ್‌ಡೊನಾಲ್ಡ್, ಕಾಫಿ ಡೇನತ್ತ ಮುಖ ಮಾಡಿದರು. ಆರು ಕಾಸಿಗೊಂದು ರೊಟ್ಟಿ ಸುಡುತ್ತಿದ್ದ ರೊಟ್ಟಿ ಅಂಗಡಿಗಳ ಜಾಗದಲ್ಲಿ ದುಬಾರಿ ರೋಟಿ ಘರ್‌ಗಳು ತಲೆಯೆತ್ತಿದವು. ಜಿ.ಎಸ್.ಎಸ್. ಬದುಕುತ್ತಿದ್ದ ಊರಿನಲ್ಲಿಯೇ ಜನ ಕನ್ನಡದಲ್ಲಿ ಮಾತನಾಡುವುದನ್ನು ಅವಮಾನ ಎಂದುಕೊಂಡರು. ಜಾತಿಗೊಂದರಂತೆ ಮಠಗಳು ಹುಟ್ಟಿಕೊಂಡವು. ಅಧ್ಯಾತ್ಮ ಭೋಧಿಸಬೇಕಾದ ಧಾರ್ಮಿಕ ಕೇಂದ್ರಗಳು ಓಟ್‌ಬ್ಯಾಂಕ್‌ಗಳಾದವು. ಮೌಲ್ಯಗಳು ಹಿಂದೆಂದೂ ಕಾಣದಷ್ಟು ಅಧಃಪತನಕ್ಕಿಳಿದವು.

ಇಂತಹ ನಿರಾಶಾದಾಯಕ ಬೆಳವಣಿಗೆಗಳ ನಡುವೆಯೂ ಭರವಸೆ ಕಳೆದುಕೊಳ್ಳದೆ ಬರೆದರು ಜಿ.ಎಸ್.ಎಸ್. ನವ್ಯದ ಅಬ್ಬರದಲ್ಲಿ ನವೋದಯದ ಲೇಖಕರು ಅಪ್ರಸ್ತುತರಾಗಿ ತೆರೆಮರೆಗೆ ಸರಿದಾಗ ನವ್ಯ ಮತ್ತು ನವೋದಯ ಎರಡರ ರಸವನ್ನೂ ಹೀರಿ ತಮ್ಮದೇ ಆದ ದಾರಿಯನ್ನು ಕಂಡುಕೊಂಡರು. ಪರಂಪರೆ ಮತ್ತು ಆಧುನಿಕತೆಯ ಮಧ್ಯೆ ಸಮನ್ವಯ ಸಾಧಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಾರಥ್ಯ ಹಿಡಿದು ಕೆ.ವಿ.ನಾರಾಯಣ, ಎಚ್.ಎಸ್.ರಾಘವೇಂದ್ರರಾವ್‌ರಂಥ ವಿಭಿನ್ನ ನೆಲೆಯ ವಿಮರ್ಶಕರ ಗುಂಪನ್ನು ಕಟ್ಟಿ ಬೆಳೆಸಿ ತಮ್ಮ ಶಿಷ್ಯರು ಎತ್ತರಕ್ಕೇರುವುದನ್ನು ನೋಡಿ ಆನಂದಿಸಿದರು. ಕುವೆಂಪು ಕಾವ್ಯ ಪ್ರಕೃತಿಯ ನಿಗೂಢತೆಗೆ, ಬೇಂದ್ರೆ ಅಧ್ಯಾತ್ಮಕ್ಕೆ, ಅಡಿಗರು ಇಹಕ್ಕೆ, ಪು.ತಿ.ನ. ಕಾವ್ಯ ಭಕ್ತಿಗೆ ಅಂಟಿಕೊಂಡ ಹಾಗೆ ಜಿ.ಎಸ್.ಎಸ್. ಕವಿತೆಗಳು ’ಬೆಳಕಿ’ಗಾಗಿ ಹಾತೊರೆದವು. ಕನ್ನಡದ ಶ್ರೇಷ್ಠ ಲೇಖಕರು ತಮ್ಮ ಕೃತಿಗಳ ಹೊರತಾಗಿಯೂ ತಮ್ಮದೆ ಆದ ವಿಶಿಷ್ಟ ಗುಣಗಳಿಂದಾಗಿ ನಮಗೆ ಇಷ್ಟವಾಗುತ್ತಾರೆ. ಗಾಂಭೀರ್ಯದಿಂದ ಕುವೆಂಪು, ಮರುಳುತನದಿಂದ ಬೇಂದ್ರೆ, ಸಿಟ್ಟಿನಿಂದ ಕಾರಂತ, ಚಾರ್ಮ್‌ನಿಂದ ಅನಂತಮೂರ್ತಿ, ವಿಕ್ಷಿಪ್ತತೆಯಿಂದ ಲಂಕೇಶ್, ಉಢಾಫ಼ೆಯಿಂದ ತೇಜಸ್ವಿ ಇಷ್ಟವಾದರೆ ಇಂತಹ ಯಾವ ಕಾರಣಗಳೂ ಇಲ್ಲದೆ ಕೇವಲ ತಮ್ಮ ಕವಿತೆಗಳಿಂದ ಮಾತ್ರ ಇಷ್ಟವಾದವರು ಜಿ.ಎಸ್.ಎಸ್. ಸರ್ಕಾರ ’ರಾಷ್ಟ್ರಕವಿ’ ಗೌರವ ನೀಡಿ ಸನ್ಮಾನಿಸಿದಾಗಲೂ, ಈ ಗೌರವ ಕಣವಿ ಅಥವಾ ಕಂಬಾರರಿಗೆ ದೊರಕಿದ್ದರೆ ತಮಗೆ ಇನ್ನೂ ಹೆಚ್ಚಿನ ಸಂತಸವಾಗುತ್ತಿತ್ತು ಎಂದು ವಿನಮ್ರತೆ ವ್ಯಕ್ತಪಡಿಸಿದ ವ್ಯಕ್ತಿತ್ವ ಅವರದು. 

ಜಿ.ಎಸ್.ಎಸ್ ಕಾವ್ಯ ಓದದೇ ಇದ್ದವರೂ ಅವರ ಬದುಕಿನಿಂದ ಕಲಿಯಬೇಕಾದ ಪಾಠಗಳು ಹಲವಷ್ಟಿವೆ. ನವ್ಯ ಮತ್ತು ನವೋದಯದ ಕವಿಗಳು ಕಿತ್ತಾಡುತ್ತಿದ್ದ ಸಮಯದಲ್ಲಿ ಜಿ.ಎಸ್.ಎಸ್ ಅವೆರಡರ ನಡುವಿನ ದಾರಿಯನ್ನು ಕಂಡುಕೊಂಡರು. ಇವತ್ತು ನಾವೂ ಸಹ ನಮ್ಮ ರಾಜಕೀಯ ನಿಲುವುಗಳಲ್ಲಿ ಇಂತಹದ್ದೊಂದು ಸಮನ್ವಯದ ದಾರಿಯೊಂದನ್ನು ಕಂಡುಕೊಳ್ಳುವ ಅನಿವಾರ್ಯ ಸ್ಥಿತಿಯಲ್ಲಿ ನಿಂತಿದ್ದೇವೆ. ಇವತ್ತು ನೀವು ಮೋದಿಯನ್ನು ವಿರೋಧಿಸಿದರೆ ನಿಮ್ಮನ್ನು ಕಮ್ಯುನಿಷ್ಟರೆಂದು ಬ್ರ್ಯಾಂಡ್ ಮಾಡಲಾಗುತ್ತದೆ. ರಾಹುಲ್ ಗಾಂಧಿಯನ್ನು ಟೀಕಿಸಿದರೆ ಕಾಂಗ್ರೆಸ್ಸಿಗರ ಪಾಲಿಗೆ ನೀವು ಕೋಮುವಾದಿಯಾಗುತ್ತೀರಿ. ನಾವು ಒಬ್ಬ ವ್ಯಕ್ತಿಯನ್ನೊ, ಒಂದು ಪಕ್ಷವನ್ನೋ ಬೆಂಬಲಿಸುವ ಭರದಲ್ಲಿ ಆ ನಾಯಕನ ಅಥವಾ ಆ ಪಕ್ಷದ ಸಿದ್ಧಾಂತಗಳಲ್ಲಿನ ಹುಳುಕುಗಳಿಗೆ ಕುರುಡರಾಗುತ್ತಿದ್ದೇವೆ. ಹಿಂದುತ್ವ, ಸಮಾಜವಾದ, ಸಮತಾವಾದ(ಕಮ್ಯುನಿಸಮ್) ಮುಂತಾದ ಎಲ್ಲಾ ರಾಜಕೀಯ ಸಿದ್ಧಾಂತಗಳಲ್ಲಿನ ಉನ್ನತವಾದ ಆಲೋಚನೆಗಳನ್ನು ಮಾತ್ರ ಸ್ವೀಕರಿಸಿ ಅವುಗಳಲ್ಲಿರುವ ಕಸವನ್ನು ಸಾರಾಸಗಾಟಾಗಿ ಧಿಕ್ಕರಿಸಿ ನಮ್ಮದೇ ವಿಶಿಷ್ಟವಾದ ಸಮನ್ವಯದ ದಾರಿಯನ್ನು ಕಂಡುಕೊಳ್ಳದೆ ಹೋದರೆ, ನಾವು ಕುರುಡರಂತೆ ಹಿಂಬಾಲಿಸುತ್ತಿರುವ ರಾಜಕೀಯ ನಾಯಕ ಅಥವಾ ಪಕ್ಷ ನಮ್ಮನ್ನು ಅಭಿವೃದ್ಧಿಯತ್ತಲೂ ಕೊಂಡೊಯ್ಯಬಹುದು ಅಥವಾ ದುರಂತದತ್ತಲೂ ಕೊಂಡೊಯ್ಯಬಹುದು. ಪರಭಾಷಿಕರನ್ನು, ಅನ್ಯಧರ್ಮೀಯರನ್ನು ಅಸಹನೆ, ಅನುಮಾನದಿಂದ ನೋಡುತ್ತಿರುವ ನಮಗೆ, ಜಿ.ಎಸ್.ಎಸ್. ಮತ್ತೆ ಮತ್ತೆ ಹೇಳುತ್ತಿದ್ದ ’ಭಿನ್ನವಾಗಿದ್ದೂ ಬೆರೆಯಬಹುದು’ ಎನ್ನುವ ಮಾತುಗಳು ದಾರಿ ತೋರಬಲ್ಲುದು. ಕೇವಲ ಬದುಕಿನ ಮೂಲಕ ಮಾತ್ರವಲ್ಲ ತಮ್ಮ ಸಾವಿನ ಮೂಲಕವೂ ಜಿ.ಎಸ್.ಎಸ್ ನಮಗೆ ಬೆಳಕು ತೋರಿಸಿದ್ದಾರೆ. ತಾವು ಎಲ್ಲಾ ಸಮುದಾಯಗಳಿಗೂ ಸೇರಿದವರಾದ್ದರಿಂದ ತಮ್ಮ ಅಂತ್ಯಕ್ರಿಯೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಿ ತಮ್ಮನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಆಶಿಸಿ ಬುದ್ಧ, ಬಸವಣ್ಣ, ಕುವೆಂಪುರಿಂದ ಪಡೆದಿದ್ದ ವಿಶ್ವದೃಷ್ಠಿಯನ್ನು ನಮ್ಮ ತಲೆಮಾರಿಗೆ ಹಸ್ತಾಂತರಿಸಿದ್ದಾರೆ. ಜಾತಿ, ಮತಗಳ ಹೆಸರಿನಲ್ಲಿ ಛಿದ್ರವಾಗಿರುವ ನಮಗೆ, ಭಾರತೀಯತೆ(INDIANISM) ಮಾತ್ರ ನಮ್ಮ ಧರ್ಮವಾಗಿ, ಜಾತಿಯಾಗಿ, ಮಂತ್ರವಾಗಿ ಸ್ವೀಕರಿಸುವ ಮಹತ್ವ ಇನ್ನಾದರೂ ಅರ್ಥವಾಗಬೇಕು. ನಾವು  ಬದುಕಿದ್ದೂ ಕತ್ತಲೆಯಲ್ಲಿದ್ದೇವೆ. ಜಿ.ಎಸ್.ಎಸ್.ರಂಥ ಚೇತನಗಳು ಸಾವಿನ ನಂತರವೂ  ಪ್ರಣತಿಯಂತೆ ಬೆಳಕು ನೀಡುತ್ತಲೇ ಇರುತ್ತಾರೆ. ಅವರು ಹಚ್ಚಿಟ್ಟು ಹೋದ ಹಣತೆಯ ಬೆಳಕು ನಮ್ಮೊಳಗಿನ ಕತ್ತಲೆಯನ್ನು ಕರಗಿಸಿ, ನಮ್ಮನ್ನು ಅಜ್ಞಾನದಿಂದ ಜ್ಞಾನದೆಡೆಗೆ, ಬಂಧನದಿಂದ ಮುಕ್ತಿಯೆಡೆಗೆ, ಮೌಢ್ಯದಿಂದ ಅಧ್ಯಾತ್ಮದೆಡೆಗೆ ಕೊಂಡೊಯ್ಯಲಿ...