Sunday 6 July 2014

ಒಂಭತ್ತು ನ್ಯಾನೋ ಕಥೆಗಳು



* * ೧ * *

ಮಗುವೊಂದು ಅಪ್ಪನನ್ನು ಕೇಳಿತು. "ಅಪ್ಪಾ, ನಾನೂ ನಿನ್ನ ಹಾಗೆ ಬೆಳೆದು ದೊಡ್ಡವನಾಗಬೇಕೆಂದರೆ ಏನು ಮಾಡಬೇಕು?" ಅಪ್ಪ ತಣ್ಣನೆಯ ದನಿಯಲ್ಲಿ ಉತ್ತರಿಸಿದ, "ಬೆಳೆಯಲು ಹಾತೊರೆಯಬೇಡ ಮಗೂ! ನೀನೀಗಲೇ ನನಗಿಂತಲೂ ತುಂಬಾ ದೊಡ್ಡವನು. ಬೆಳೆಯುತ್ತಾ ಬೆಳೆಯುತ್ತಾ ನೀನೂ ನನ್ನಂತೆಯೇ ಚಿಕ್ಕವನಾಗುತ್ತೀಯಾ ಅಷ್ಟೇ.."


* * ೨ * *

ಅವನು ಕ್ರೋಧದಿಂದ ಅವಳ ಕಪಾಳಕ್ಕೆ ಎಷ್ಟು ಬಲವಾಗಿ ಹೊಡೆದನೆಂದರೆ, ಈಗಲೂ ಅವನ ಎದೆಯ ಮೇಲೆ ಅವನ ಕೈ ಬೆರಳುಗಳ ಗುರುತುಗಳಿವೆ..


* * ೩ * *

ನಾನು ಅವನ ದೇವಾಲಯದ ಮೇಲೆ ಕಲ್ಲುಗಳನೆಸೆದೆ, ಅವನ ದೇವರ ಮೂರ್ತಿಯನ್ನು ಮುರಿದು ಹಾಕಿದೆ. ಆದರೆ ಮನೆಗೆ ಬಂದು ನೋಡಿದರೆ ನನ್ನ ದೇವರ ಕೋಣೆಯ ಒಳಗೆ ನಾನೇ ಬೀಸಿದ ಕಲ್ಲುಗಳಿದ್ದವು. ನನ್ನ ದೇವರ ಮೂರ್ತಿಯ ಕೈ ಮುರಿದುಹೋಗಿ, ಅವನ ಕಣ್ಣುಗಳಲ್ಲಿ ರಕ್ತ ಹರಿಯುತಿತ್ತು!


* * ೪ * *

ಗುರುವೊಬ್ಬ ಶಿಷ್ಯನನ್ನು "ಇಷ್ಟು ಸರಳವಾದ ವಿಷಯದ ಜ್ಞಾನವೂ ಇಲ್ಲದ ನೀನು ನಾಚಿಕೆಯಿಂದ ತಲೆತಗ್ಗಿಸಬೇಕು" ಎಂದು ಗದರಿಸಿದ.

ಶಿಷ್ಯ ನಸುನಕ್ಕ. ಗುರು ಮತ್ತೊಮ್ಮೆ ಗದರಿಸಿದ. ಶಿಷ್ಯ ನಗುತ್ತಲೇ ಇದ್ದ. 

ಗುರುವಿನ ಕೋಪ ಮಿತಿ ಮೀರಿತು. ಹತ್ತಿರಕ್ಕೆ ಬಂದು ಅವನ ಬೆನ್ನ ಮೇಲೊಂದು ಗುದ್ದು ನೀಡಿದ. ಆಗಲೂ ಶಿಷ್ಯನ ಮುಖದಿಂದ ನಗು ಮಾಸಲಿಲ್ಲ. ಈಗ ಗುರು ನಾಚಿಕೆಯಿಂದ ತಲೆತಗ್ಗಿಸಿ ನಿಂತ!


* * ೫ * *

ನಿನ್ನನ್ನು ಕೊಂದೆ. ನಾನು ಸತ್ತೆ!


* * ೬ * *

ಇಬ್ಬರು ಹುಚ್ಚರು ರಸ್ತೆಯಲ್ಲಿ ಎದುರಾದರು. ಒಬ್ಬ ಹುಚ್ಚ ಹೇಳಿದ, "ಇತ್ತೀಚಿಗೆ ಈ ಊರಲ್ಲಿ ಹುಚ್ಚರ ಸಂಖ್ಯೆ ಜಾಸ್ತಿಯಾಗಿದೆ. ಸುಮ್ಮನೇ ನಮ್ಮ ಪಾಡಿಗೆ ನಾವು ನಡೆದುಕೊಂಡು ಹೋಗುತ್ತಿದ್ದರೆ, ನಮ್ಮ ಮೇಲೆ ಕಲ್ಲುಗಳನ್ನು ಎಸೆಯುತ್ತಾರೆ!"

ಇನ್ನೊಬ್ಬ ಹುಚ್ಚ ಹೇಳಿದ, "ಪಾಪ ಹುಚ್ಚರಲ್ಲವೇ! ಅವರಿಗೇನು ತಿಳಿಯುತ್ತದೆ. ಅವರನ್ನು ಕ್ಷಮಿಸಿ ಬಿಡು!"


* * ೭ * *

ಒಂದೂರಿನಲ್ಲಿ ಒಂದು ದೇವಸ್ಥಾನವಿತ್ತು. ಆ ದೇವಸ್ಥಾನದ ಅನತಿ ದೂರದಲ್ಲಿಯೇ ವೇಶ್ಯೆಯೊಬ್ಬಳು ಮನೆಮಾಡಿಕೊಂಡಿದ್ದಳು. ಆ ದೇಗುಲದ ಪುರೋಹಿತ ದೇವರ ಪೂಜೆಯನ್ನೇ ತನ್ನ ಜೀವನದ ಏಕಮಾತ್ರ ಕರ್ತವ್ಯವೆಂದು ಭಾವಿಸಿ ಶ್ರದ್ಧೆಯಿಂದ ಆ ಮೂರ್ತಿಯ ಪೂಜೆ ಮಾಡುತ್ತಿದ್ದ. ದೇವರ ಮೂರ್ತಿಗೆ ಅಭಿಷೇಕ ಮಾಡಿ, ಫಲ ಪುಷ್ಪಗಳನ್ನು ಸಮರ್ಪಿಸುತ್ತಿದ್ದ. ಉಚ್ಛ ಸ್ವರದಲ್ಲಿ ಮಂತ್ರಗಳನ್ನು ಪಠಿಸುತ್ತಿದ್ದ. ಆದರೆ ಅದೇ ಸಮಯದಲ್ಲಿ ವೇಶ್ಯೆ ವೀಣೆ ನುಡಿಸುತ್ತಾ, ದೇವರ ಕುರಿತು ತಾನೇ ಹಾಡುಗಳನ್ನು ಕಟ್ಟಿ ತನ್ಮಯಳಾಗಿ ಹಾಡುತ್ತಿದ್ದಳು. ಒಮ್ಮೊಮ್ಮೆ ಭಕ್ತಿಯ ಪರಾಕಾಷ್ಟೆಯಲ್ಲಿ ದೇವರನ್ನೇ ತನ್ನ ಗಂಡನೆಂದು ಕರೆಯುತ್ತಾ ಆತನನ್ನು ಮುದ್ದಾಡುತ್ತಾ ಕಣ್ಣಿರಿಡುತ್ತಿದ್ದಳು. ತನ್ನ ಪೂಜೆಗೆ ಭಂಗ ಉಂಟು ಮಾಡುತ್ತಿದ್ದ ವೇಶ್ಯೆಯ ಸಂಗೀತದಿಂದ ಪುರೋಹಿತನಿಗೆ ಇರಿಸು ಮುರಿಸುಂಟಾಗುತ್ತಿತ್ತು. ಆದರೂ ಎಂದಿಗೂ ತಾಳ್ಮೆ ಕಳೆದುಕೊಳ್ಳದ ಆತ, ಆಕೆಯ ಅಪರಾಧವನ್ನು ಕ್ಷಮಿಸುವಂತೆ ದೇವರನ್ನು ಕೋರುತ್ತಿದ್ದ. ಒಂದು ದಿನ ಪುರೋಹಿತ ಸತ್ತು ಸ್ವರ್ಗಕ್ಕೆ ಹೋದ. ಅಲ್ಲಿ ದೇವರನ್ನು ಕಂಡ ತಕ್ಷಣ ಅವನ ಪಾದಗಳಿಗೆರಗಿ, "ನಾನು ಒಂದು ದಿನವೂ ತಪ್ಪಿಸದಂತೆ ಪ್ರತೀ ಬೆಳಿಗ್ಗೆ ನಿನ್ನ ಪೂಜೆ ಮಾಡಿದ್ದೇನೆ. ನನ್ನ ಪೂಜೆ ನಿನಗೆ ಪ್ರಸನ್ನವಾಯಿತೇ ಪ್ರಭೂ?" ಎಂದು ದೈನ್ಯದಿಂದ ಕೇಳಿದ. 

ದೇವರು ಕಣ್ಣು ಮಿಟುಕಿಸುತ್ತಾ ಉತ್ತರಿಸಿದ, "ಹೌದಾ?!! ನೀನು ಪ್ರತೀ ದಿನ ಬೆಳಿಗ್ಗೆ ನನ್ನನ್ನು ಪೂಜಿಸುತ್ತಿದ್ದೆಯಾ?.. ನನಗೇನು ಗೊತ್ತು?.. ನಾನು ಬೆಳಿಗ್ಗೆ ಹೊತ್ತು ದೇವಸ್ಥಾನದಲ್ಲಿ ಎಲ್ಲಿರುತ್ತಿದ್ದೆ?.. ಆ ವೇಶ್ಯೆಯ ಮನೆಗೆ ಅವಳ ಸಂಗೀತ ಕೇಳಲು ಹೋಗುತ್ತಿದ್ದೆ!"

* * ೮ * *

ಒಂದೂರಿನಲ್ಲಿ ಅತ್ಯಂತ ಮುಗ್ಧನಾದ ಶ್ರೀಮಂತನೊಬ್ಬ ವಾಸವಾಗಿದ್ದ. ಆತನ ಬಂಧುಗಳೇ ಮೋಸದಿಂದ ಆತನ ಮನೆ, ಸಂಪತ್ತನ್ನು ತಮ್ಮ ಹೆಸರಿಗೆ ಬರೆಸಿಕೊಂಡು ಅವನನ್ನು ಮನೆಯಿಂದ ಹೊರ ಹಾಕಿದರು. ಜೀವನದಲ್ಲಿ ವೈರಾಗ್ಯ ಹುಟ್ಟಿ ಆತ ಸನ್ಯಾಸ ಸ್ವೀಕರಿಸಿದ. ಅವನ ಬಂಧುಗಳಿಗೆ ಇಷ್ಟಕ್ಕೇ ತೃಪ್ತಿಯಾಗಲಿಲ್ಲ. ಅವರೆಲ್ಲರೂ ಆತನ ಬಳಿ ಹೋಗಿ, "ನಾವು ಮೋಸದಿಂದ ನಿನ್ನ ಸಂಪತ್ತನ್ನೆಲ್ಲಾ ಲೂಟಿ ಹೊಡೆದು ಶ್ರೀಮಂತರಾದೆವು. ನಿನ್ನಂತಹ ದಡ್ಡ ಇನ್ನೊಬ್ಬನಿಲ್ಲ. ನಿನ್ನ ದಡ್ಡತನಕ್ಕೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇವೆ" ಎಂದು ವ್ಯಂಗ್ಯದಿಂದ ನಗಲಾರಂಭಿಸಿದರು.

ಸನ್ಯಾಸಿ ನಸುನಗುತ್ತಾ ಹೇಳಿದ, "ನೀವು ಕರುಣೆಯಿಂದ ನನ್ನ ದಾರಿದ್ರ್ಯವನ್ನೆಲ್ಲಾ ಲೂಟಿ ಹೊಡೆದು ನನ್ನನ್ನು ಶ್ರೀಮಂತನನ್ನಾಗಿಸಿದಿರಿ. ನಿಮ್ಮಿಂದ ದೊರೆತ ಜ್ಞಾನಕ್ಕಾಗಿ ನಾನೂ ಕೂಡಾ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ!"


* * ೯ * *

ಶಿಷ್ಯನೊಬ್ಬ ಗುರುಕುಲದಲ್ಲಿ ಹಲವು ವರ್ಷಗಳ ಕಾಲ ಜ್ಞಾನಾರ್ಜನೆ ಮಾಡಿದ ನಂತರ ಗುರುವಿನ ಬಳಿ ಕೇಳಿದ, "ಗುರುಗಳೇ, ನಾನು ಇಷ್ಟು ವರ್ಷಗಳ ಕಾಲ ನಿಮ್ಮಿಂದ ವಿದ್ಯಾಭ್ಯಾಸ ಪಡೆದಿದ್ದೇನೆ. ನಾನೀಗ ಜ್ಞಾನಿಯಾಗಿದ್ದೇನೆಯೇ?"

ಗುರು ಕೇಳಿದ "ಮಗೂ, ಇಷ್ಟು ವರ್ಷಗಳ ಅಭ್ಯಾಸದಿಂದ ನಿನಗೇನು ತಿಳಿಯಿತು? ಮತ್ತು ನಿನಗೇನು ತಿಳಿದಿಲ್ಲ?"

ಶಿಷ್ಯ ಹೆಮ್ಮೆಯಿಂದ ಉತ್ತರಿಸಿದ "ನನಗೆ ಋಗ್ವೇದ ತಿಳಿದಿದೆ, ಆದರೆ ಅಥರ್ವಣವೇದ ತಿಳಿದಿಲ್ಲ. ನನಗೆ ಖಗೋಳಶಾಸ್ತ್ರ ತಿಳಿದಿದೆ, ಆದರೆ ರಾಜ್ಯಶಾಸ್ತ್ರ ತಿಳಿದಿಲ್ಲ. ನನಗೆ ಭಾಷಾಶಾಸ್ತ್ರ ಸಂಪೂರ್ಣವಾಗಿ ತಿಳಿದಿದೆ, ಆದರೆ ಕಾವ್ಯ ಒಲಿಯಲಿಲ್ಲ. ನನಗೆ ಚರಿತ್ರೆ ತಿಳಿಯಿತು, ಆದರೆ ಅರ್ಥಶಾಸ್ತ್ರ ತಿಳಿಯಲಿಲ್ಲ"

ಗುರು ಶಿಷ್ಯನೆಡೆಗೆ ಕರುಣೆಯಿಂದ ನೋಡಿ ಹೇಳಿದ, "ಮಗೂ, ನೀನು ಜ್ಞಾನಿಯಲ್ಲ!"

ಶಿಷ್ಯ ಮತ್ತೆ ಹಲವು ವರ್ಷಗಳ ಕಾಲ ಕಠಿಣ ಅಭ್ಯಾಸ ಮಾಡಿ ಒಂದು ದಿನ ಗುರುವಿನ ಬಳಿ ಕೇಳಿದ, "ಗುರುಗಳೇ, ಈಗ ಹೇಳಿ ನಾನು ಜ್ಞಾನಿಯಾಗಿದ್ದೇನೆಯೇ?"

ಗುರು ಮತ್ತೆ ಅದೇ ಹಳೆಯ ಪ್ರಶ್ನೆ ಕೇಳಿದ, "ಇಷ್ಟು ವರ್ಷಗಳ ಅಭ್ಯಾಸದಿಂದ ನಿನಗೇನು ತಿಳಿಯಿತು? ಮತ್ತು ನಿನಗೇನು ತಿಳಿದಿಲ್ಲ?"

ಶಿಷ್ಯ ತಲೆತಗ್ಗಿಸಿ ಉತ್ತರಿಸಿದ, "ಗುರುಗಳೇ, ಇಷ್ಟು ವರ್ಷಗಳ ಕಠಿಣ ಅಭ್ಯಾಸದಿಂದ, ನನಗೇನೂ ತಿಳಿದಿಲ್ಲ ಎಂದು ತಿಳಿಯಿತು!"

ಗುರು ಶಿಷ್ಯನ ತಲೆಯೆತ್ತಿ, ಅವನ ಕಿವಿಯಲ್ಲಿ ಮೆಲ್ಲನೆ ಉಸುರಿದ, "ಮಗೂ, ಈಗ ನೀನು ಜ್ಞಾನಿ!"