Thursday 17 October 2013

ಕನಸು ಮತ್ತು ಎಚ್ಚರದ ನಡುವೆ..

ಕಾವ್ಯವೂ ಒಂದೊಂದು ಸಲ ಕೈಕೊಡುವುದು,
ಅದನ್ನು ಬಿಟ್ಟರೆ ಖಾಲಿ ಹಾಳೆಯಂತೆ!

     ಬೆಳಿಗ್ಗೆ ಮುಂಚೆ ಬಿದ್ದ ಕನಸಿನಲ್ಲಿ ನಾನು ಈ ಸಾಲುಗಳನ್ನು ಬರೆಯುತ್ತಿದ್ದೆ. ಈ ಎರಡು ಸಾಲು ಬರೆಯುವಷ್ಟರಲ್ಲಿ ಯಾರೋ ಬಾಗಿಲು ಬಡಿದು ಎಚ್ಚರವಾಗಿ ಕನಸು ಒಡೆಯಿತು. ಎದ್ದ ತಕ್ಷಣ ಈ ಸಾಲುಗಳನ್ನು ಬರೆದಿಟ್ಟುಕೊಂಡೆ. ಇದು ಕವಿತೆಯಾ? ನನಗೆ ಗೊತ್ತಿಲ್ಲ. ಇದು ನನ್ನ ಕನಸಲ್ಲಿ ಬಿದ್ದ ಕವಿತೆ ಎನ್ನೋಣವೆಂದರೆ ಕವಿತೆ ಎಲ್ಲಿಂದ ಬೀಳುತ್ತದೆ ಎಂಬ ಪ್ರಶ್ನೆ ಕಾಡುತ್ತದೆ. ಕನಸಿನಲ್ಲಿ ಹೊಳೆಯಿತು ಎಂದುಕೊಳ್ಳೋಣವೆಂದರೆ ಎಚ್ಚರದ ಸ್ಥಿತಿಯಲ್ಲಿಯೇ ಮುನಿಸಿಕೊಳ್ಳುವ ಕವಿತೆ ನಿದ್ದೆಯಲ್ಲಿ ಒಲಿಯಲು ಸಾಧ್ಯವೇ? ಪಂಪನ ಕಾಲದಲ್ಲೋ, ಕಡೇಪಕ್ಷ ಕುಮಾರವ್ಯಾಸನ ಕಾಲದಲ್ಲೋ ನಾನು ಬದುಕಿದ್ದರೆ ಲಘು, ಗುರು ಎಳೆದು ಈ ಸಾಲುಗಳು ಛಂದೋಬದ್ದವಾಗಿಲ್ಲ, ಇದು ಕವಿತೆಯೇ ಅಲ್ಲ ಎಂದು ನಿರ್ಧರಿಸಿ ಮರೆತುಬಿಡಬಹುದಿತ್ತು. ಅದಕ್ಕೆ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ. ಈ ಸಾಲುಗಳಿಗೆ ಅರ್ಥವಿಲ್ಲ ಎಂದು ನಿಮಗೆ ಅನ್ನಿಸಿದರೆ, ನಿಮ್ಮ ಸಮಯ ಹಾಳು ಮಾಡಿದ್ದಕ್ಕಾಗಿ ನನಗೆ ಕ್ಷಮೆಯಿರಲಿ. ಈ ಸಾಲುಗಳಿಗೆ ಯಾವುದಾದರೂ ಗಹನವಾದ ಅರ್ಥ ಹೊಳೆದರೆ ದಯವಿಟ್ಟು ನನ್ನ ಮೆಚ್ಚಿಕೊಳ್ಳಬೇಡಿ.  ಏಕೆಂದರೆ ಅಂಥಹಾ ಪಕ್ಷದಲ್ಲಿ, ಇದು ಯಾವುದೋ ಕಾಲದಲ್ಲಿ ಓದಿದ್ದ ಯಾರದೋ ಕವಿತೆಯ ಸಾಲೊಂದು ನನ್ನ ಕನಸಲ್ಲಿ ಮತ್ತೆ (ಸ್ವಲ್ಪ ಬದಲಾವಣೆಯೊಂದಿಗೆ?) ನೆನಪಾಗಿದ್ದಿರಬಹುದು. ಹಾಗಲ್ಲದೇ ಹೋದರೂ ಹೇಗಿದ್ದರೂ ಈ ಕವಿತೆ ನಿದ್ದೆಯಲ್ಲಿ ನನ್ನ ಚಾದರದೊಳಗೆ ಸೇರಿ ತಬ್ಬಿಕೊಂಡದ್ದರಿಂದ, ಅದು ತಬ್ಬಿಕೊಂಡವಳ ಔದಾರ್ಯವೇ ಹೊರತು ನನ್ನ ಪ್ರಯತ್ನ ಹೇಗಾದೀತು?



            ಕನಸಿನಿಂದ ಎದ್ದು ಕುಳಿತವನಿಗೆ ಸಿಗ್ಮಂಡ್ ಫ್ರಾಯ್ಡ್ ನೆನಪಾಗುತ್ತಿದ್ದಾನೆ. ಆತನ The Interpretation of Drems ಓದಿದ ನಂತರವೂ ಹಲವು ತಿಂಗಳುಗಳ ಕಾಲ ನನ್ನನ್ನು ಕಾಡಿದ ಕೃತಿ. ಆ ಪುಸ್ತಕದಲ್ಲಿ ಆತ Delboeuf ಎಂಬ ತತ್ವಶಾಸ್ತ್ರಜ್ಞನ ಅನುಭವವೊಂದನ್ನು ದಾಖಲಿಸಿದ್ದಾನೆ. ಒಮ್ಮೆ ಆತನಿಗೆ ಕನಸಿನಲ್ಲಿ "ಮಂಜಿನಿಂದ ಆವೃತವಾದ ತನ್ನ ಮನೆಯ ಅಂಗಳ ಕಾಣಿಸಿತು. ಆ ಮಂಜಿನ ಹೊದಿಕೆಯಲ್ಲಿ ಸಿಲುಕಿ ಹೆಪ್ಪುಗಡುತ್ತಿರುವ ಎರಡು ಹಲ್ಲಿಗಳು ಕಾಣುತ್ತವೆ. ಸ್ವಭಾವತಃ ಪ್ರಾಣಿಪ್ರಿಯನಾದ Delboeuf ಅವೆರಡು ಹಲ್ಲಿಗಳನ್ನು ಛಳಿಯಿಂದ ರಕ್ಷಿಸಿ, ಬೆಚ್ಚಗೆ ಮಾಡಿ, ಗೋಡೆಯ ಮೇಲೆ ಬೆಳೆದಿದ್ದ fern (ಅಂಟಾರ್ಟಿಕಾ ಹೊರತುಪಡಿಸಿ ಜಗತ್ತಿನ ಎಲ್ಲಾ ಭಾಗಗಳಲ್ಲೂ ಕಾಣಸಿಗುವ ಒಂದು ಜಾತಿಯ ಸಸ್ಯ. ನೀವೂ ನಿಮ್ಮ ಊರಿನಲ್ಲಿ ಇದನ್ನು ನೋಡಿರಬಹುದು. ಚಿತ್ರವನ್ನು ನೋಡಿ ನೆನಪಿಸಿಕೊಳ್ಳಿ) ತಿನ್ನಿಸುತ್ತಾನೆ. ಕನಸಿನಲ್ಲಿ ಆ ಸಸ್ಯದ ಹೆಸರು ಲ್ಯಾಟಿನ್ ಭಾಷೆಯ Asplenium ruta muralis ಎಂದು ಆತನಿಗೆ ತಿಳಿದಿರುತ್ತದೆ. ತಿನ್ನಿಸಿ ರಸ್ತೆಯೆಡೆಗೆ ನೋಡಿದರೆ ಸಾವಿರಾರು ಹಲ್ಲಿಗಳ ಮೆರವಣಿಗೆಯೊಂದು ತನ್ನತ್ತಲೇ ಸಾಗಿ ಬರುತ್ತಿರುವುದು ಕಾಣುತ್ತದೆ" ಇದಿಷ್ಟು ಕನಸು. ಎಚ್ಚರಗೊಂಡವನಿಗೆ ತಾನು ಫರ್ನ್‌ಗಳ ಬಗ್ಗೆ ಎಲ್ಲಿಯೂ ಓದಿಲ್ಲ, Asplenium ಎಂಬ ಹೆಸರನ್ನೇ ತನ್ನ ಜೀವಮಾನದಲ್ಲಿ ಎಂದೂ ಕೇಳಿಲ್ಲ ಮತ್ತು ತನಗೆ ಲ್ಯಾಟಿನ್ ಭಾಷೆಯೇ ತಿಳಿದಿಲ್ಲ ಎಂದು ನೆನಪಾಗುತ್ತದೆ. ಸುಮ್ಮನೆ ಕುತೂಹಲಕ್ಕೆ ಲ್ಯಾಟಿನ್ ಭಾಷೆಯಲ್ಲಿ ಫರ್ನ್‌ನ ಹೆಸರು ಹುಡುಕಿದಾಗ ಅದು Asplenium ruta muraria ಎಂದು ತಿಳಿದು ಅವನಿಗೆ ಅಚ್ಚರಿಯಾಗುತ್ತದೆ. ಮುಂದೆ ಹದಿನಾರು ವರ್ಷಗಳ  ಕಾಲ ಈ ಕನಸು ಆತನಿಗೆ ಬಗೆಹರಿಸಲಾಗದ ನಿಗೂಢ ಪ್ರಶ್ನೆಯಾಗಿಯೇ ಉಳಿಯುತ್ತದೆ. 



         ಹದಿನಾರು ವರ್ಷಗಳ ನಂತರ Delboeuf  ತನ್ನ ಹಳೆಯ ಸ್ನೇಹಿತನೊಬ್ಬನನ್ನು ಭೇಟಿಯಾಗುತ್ತಾನೆ. ಅಚಾನಕ್ಕಾಗಿ ಆತನ ಮನೆಯಲ್ಲಿದ್ದ herbarium (ಒಣಗಿಸಿದ ಹೂವುಗಳನ್ನು ಒತ್ತಿ ಕಾಗದಕ್ಕೆ ಅಂಟಿಸಿ ಮಾಡಿದ ಆಲ್ಬಂ, ಇದನ್ನು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡುವ ಪರಿಪಾಠವಿದೆ) ಒಂದನ್ನು ತೆರೆದು ನೋಡುತ್ತಾನೆ. ಅಲ್ಲಿ ಆತನ ಕನಸಿನಲ್ಲಿ ಕಂಡಿದ್ದ asplenium ಹೂವು ಕೂಡಾ ಕಾಣುತ್ತದೆ ಮತ್ತು ಆ ಹೂವಿನ ಕೆಳಗೆ asplenium ruta muraria ಎಂದು ತನ್ನದೇ ಕೈಬರಹದಲ್ಲಿ ಬರೆದಿದ್ದನ್ನು ನೋಡಿ ತನ್ನನ್ನು ಹದಿನಾರು ವರ್ಷ ಕಾಡಿದ ಕನಸಿನ ರಹಸ್ಯ ಬಗೆಹರಿದು ಆನಂದಗೊಳ್ಳುತ್ತಾನೆ. ಹದಿನೆಂಟು ವರ್ಷಗಳ ಹಿಂದೆ (ಕನಸು ಬೀಳುವ ಎರಡು ವರ್ಷ ಮೊದಲು) ತಾನಿದ್ದ ಊರಿಗೆ ಭೇಟಿ ನೀಡಿದ್ದ ಈ ಗೆಳೆಯನ ಸೋದರಿ ತನ್ನ ಸೋದರನಿಗೆ ಉಡುಗೊರೆ ನೀಡಲು ಈ herbarium ಕೊಂಡಾಗ, ಅದರಲ್ಲಿನ ಹೂವುಗಳ ಲ್ಯಾಟಿನ್ ಹೆಸರುಗಳನ್ನು botanist ಒಬ್ಬ  ಒಂದೊಂದಾಗಿ ಹೇಳುತ್ತಾ ಹೋದ ಹಾಗೆ ತಾನು  ಅದನ್ನು ಯಾಂತ್ರಿಕವಾಗಿ ಬರೆದುಕೊಟ್ಟಿದ್ದು ನೆನಪಾಗುತ್ತದೆ. ಮುಂದೊಂದು ದಿನ ಪತ್ರಿಕೆಯೊಂದರ ಹಲವು ವರ್ಷಗಳ ಹಿಂದಿನ ಸಂಚಿಕೆಯೊಂದನ್ನು ತಿರುವಿ ಹಾಕುತ್ತಿದ್ದಾಗ ಅದರಲ್ಲಿ ತಾನು ಕನಸಲ್ಲಿ ಕಂಡಿದ್ದ ಸಾವಿರಾರು ಹಲ್ಲಿಗಳ ಮೆರವಣಿಗೆಯ ಚಿತ್ರವನ್ನು ನೋಡಿ ತಾನು ಕೆಲವು ಕಾಲ ಆ ಪತ್ರಿಕೆಗೆ ಚಂದಾದಾರನಾಗಿದ್ದುದು ನೆನಪಾಗಿ ತನ್ನ ಕನಸಿನ ಹೀಂದಿನ ಪ್ರೇರಣೆಗಳು (stimuli) ಇನ್ನಷ್ಟು ಸ್ಪಷ್ಟವಾಗಿ  ನಿರಾಳನಾಗುತ್ತಾನೆ.

          ನಮ್ಮ ಕನಸುಗಳಲ್ಲಿ ಕಾಣುವ ಯಾವ ಚಿತ್ರವೂ, ಯಾವ ಮುಖವೂ ಅಪರಿಚಿತವಲ್ಲ. ಸುಮ್ಮನೇ ಯೋಚಿಸಿ, ನೀವಿವತ್ತು ಬೆಂಗಳೂರಿನ ಟ್ರಾಫಿಕ್ಕಲ್ಲಿ ಆಫೀಸು ಸೇರಿ, ಕೆಲಸ ಮುಗಿಸಿ, ಸಂಜೆ ಮನೆ ಸೇರಿ ಟಿವಿ ನೋಡಿ ಮಲಗುವಷ್ಟರಲ್ಲಿ ಏನಿಲ್ಲವೆಂದರೂ ಸಾವಿರ ಮುಖಗಳನ್ನು ನೋಡುತ್ತೀರಿ. ಅದರಲ್ಲಿ ಏನಿಲ್ಲವೆಂದರೂ 990 ಮುಖಗಳನ್ನು ಅವತ್ತಿಗೇ ಮರೆತುಬಿಡುತ್ತೀರಿ. ಆದರೆ ಎಷ್ಟೋ ವರ್ಷಗಳ ನಂತರ ಆ 990 ಮುಖಗಳಲ್ಲಿಯೇ ಒಂದು ಮುಖ ನಿಮ್ಮ ಕನಸಲ್ಲಿ ಕಾಣಿಸಿಕೊಳ್ಳಬಹುದು. ನಿನ್ನೆ ರಾತ್ರಿ ನಿಮ್ಮ ಕನಸಲ್ಲಿ ಬಂದ ಅಪರಿಚಿತ ಮುಖವೊಂದು ಜೀವ ಪಡೆದು ಇವತ್ತು ನಿಮ್ಮ ಕಣ್ಣ ಮುಂದೆಯೇ ಬಂದರೆ ಎಷ್ಟು ರೋಮಾಂಚನವಾಗಬಹುದು ಊಹಿಸಿ! ನಮ್ಮಲ್ಲಿ ಹೆಚ್ಚಿನವರಿಗೆ ನಾವು ನಿದ್ದೆ ಮಾಡುವುದು ಆಯಾಸ ಪರಿಹಾರಕ್ಕೆ ಎಂಬ misconception ಇದೆ. ಖಂಡಿತಾ ಅಲ್ಲ! ನಾವು ನಿದ್ದೆ ಮಾಡುವುದೇ ಕೇವಲ ಕನಸು ಕಾಣುವುದಕ್ಕಾಗಿ. ಮನುಷ್ಯ ಬೌದ್ದಿಕವಾಗಿ ಬೆಳೆಯುತ್ತಾ ಹೋಗುವುದೇ ಕನಸಿನಲ್ಲಿ. ಈ ಬೆಳವಣಿಗೆಯನ್ನು ನೀವೂ ಅನುಭವಿಸಬಹುದು. ಇಲ್ಲಿಯವರೆಗೆ ನೀವು ಆಡಿರದ ಹೊಸತೊಂದು ಕಾರ್ ರೇಸ್ ಗೇಮ್ ಅನ್ನು ನಿಮ್ಮ ಮೊಬೈಲ್‌ನಲ್ಲೋ, ಕಂಪ್ಯೂಟರ್‌ನಲ್ಲೋ ಆಡಿನೋಡಿ. ಮೊದಲ ದಿನ ನೀವು ಮತ್ತೆ ಮತ್ತೆ ನಿಮ್ಮ ಮುಂದಿರುವ ಕಾರಿಗೆ ಡಿಕ್ಕಿ ಹೊಡೆಯುತ್ತೀರಿ. ಕಾರು ರಸ್ತೆ ಬಿಟ್ಟು ಅಡಾದಿಡ್ಡಿಯಾಗಿ ಓಡುತ್ತದೆ. ಎಲ್ಲಿ ಬ್ರೇಕ್ ಹಿಡಿಯಬೇಕೆಂದೇ ತಿಳಿಯದೇ ಕಾರನ್ನು ಪಲ್ಟಿ ಹೊಡೆಸುತ್ತೀರಿ. ನಾಳೆ ಇದೇ ಗೇಮನ್ನು ಮತ್ತೆ ಆಡಿ. ನಿಮಗೇ ಅಚ್ಚರಿಯಾಗುವಷ್ಟು ನಿಮ್ಮ ಆಟ ಸುಧಾರಿಸಿರುತ್ತದೆ. ತಪ್ಪುಗಳು ಕಡಿಮೆಯಾಗಿರುತ್ತವೆ. ಕೆಲವೇ ದಿನಗಳಲ್ಲಿ ಈ ಆಟ ನೀರು ಕುಡಿದಷ್ಟು ಸರಾಗ ಎನ್ನಿಸುತ್ತದೆ. ಕಾರಣ ಏನಿರಬಹುದು? ಮೊದಲ ದಿನ ನೀವು ಆಟವಾಡಿ ಮಲಗಿದಾಗಲೇ ನಿಮ್ಮ ಕನಸಿನಲ್ಲಿ ಗೇಮ್‌ನ ಪರದೆ ತೆರೆಯುತ್ತದೆ. ನಿಮ್ಮ ಮೆದುಳು ನಿಮ್ಮ ಆಟವನ್ನು frame by frame ವಿಮರ್ಶಿಸುತ್ತದೆ. ಆಟದ ವೇಗಕ್ಕೆ ಸರಿಯಾಗಿ ನಿಮ್ಮ reflexesಗಳನ್ನು synchronise ಮಾಡುತ್ತದೆ. ಕಣ್ಣು ಮತ್ತು ಬೆರಳುಗಳ ನಡುವಿನ communication ಸುಧಾರಿಸುತ್ತದೆ. ಕನಸುಗಳೇ ಇಲ್ಲದೆ ಹೋಗಿದ್ದರೆ ನೂರು ದಿನ ಆಡಿದರೂ ನಮ್ಮ ಕಾರು ಪಲ್ಟಿ ಹೊಡೆದು ನಮ್ಮನ್ನು ಅಣಕಿಸುತ್ತಲೇ ಇರುತ್ತಿತ್ತು.

           ಹುಡುಗಿಯೊಬ್ಬಳು ದೊಡ್ಡವಳಾದ ದಿನ ಆಕೆಗೆ ಹೊಸ ಸೀರೆ ಉಡಿಸಿ, ಆರತಿ ಎತ್ತಿ ಸಂಭ್ರಮಿಸುತ್ತಾರೆ. ಏಕೆಂದರೆ ಆಕೆಗೆ ತನ್ನಲ್ಲಾದ ಬದಲಾವಣೆ ಅರಿವಾಗುವುದು ಎಚ್ಚರದ ಸ್ಥಿತಿಯಲ್ಲಿ. ಆದರೆ ಒಬ್ಬ ಹುಡುಗ ದೊಡ್ಡವನಾಗುವುದನ್ನು ಯಾರೂ ಗುರುತಿಸುವುದೇ ಇಲ್ಲ. ಏಕೆಂದರೇ ಪ್ರತೀ ಹುಡುಗನೂ ದೊಡ್ಡವನಾಗುವುದೇ ಕನಸಿನಲ್ಲಿ. ತನ್ನ ವಯಸ್ಸಿನ ಹೆಣ್ಣುಮಕ್ಕಳ ಮಧ್ಯೆ ಯಾವ ಸಂಕೋಚವೂ ಇಲ್ಲದೆ ಆಡಿ ಬೆಳೆಯುವ ಹುಡುಗನಿಗೆ ಕನಸೊಂದರಲ್ಲಿ ಮೊದಲ ಸಲ ಸಿಹಿಯಾದ ಅಪಘಾತವಾಗಿ ಸ್ಖಲನವಾಗಿ, ಏನನ್ನೋ ಪಡೆದುಕೊಂಡ, ಏನನ್ನೋ ಕಳೆದುಕೊಂಡ ಸಂತೋಷ, ದುಃಖ, ಅಚ್ಚರಿ, ತಳಮಳಗಳನ್ನು ಅನುಭವಿಸುವುದನ್ನು ಯಾರೂ ಗುರುತಿಸುವುದೇ ಇಲ್ಲ. ತನ್ನ ಮಗನಿಗೆ ಕನಸಿನ ಕುರಿತು ತಿಳಿಹೇಳಿ, ಅವನ ದೇಹದಲ್ಲಾದ ಬದಲಾವಣೆಗಳನ್ನು ಅರ್ಥಮಾಡಿಸಿ, ಅವನಿಗೊಂದು moral fence ಹಾಕುವ ಕೆಲಸವನ್ನು ಯಾವ ತಂದೆಯೂ ಮಾಡುವುದಿಲ್ಲ. ಬಹುಶಃ ಈಡನ್ ಗಾರ್ಡನ್‌ನಲ್ಲಿ Adam ತಿಂದ knowledge fruit ( ಜ್ಞಾನವೃಕ್ಷದ ಫಲ) ಈ ಕನಸೇ ಇರಬಹುದೇನೋ! ಕನಸುಗಳೇ ಇಲ್ಲದೇ ಹೋಗಿದ್ದರೆ ನಾವು ಸತ್ತವರಿಗೆ ಶ್ರಾದ್ಧ ಕರ್ಮಗಳನ್ನೇ ಮಾಡುತ್ತಿರಲಿಲ್ಲ. ಹಬ್ಬದಲ್ಲಿ ಪಿತೃಗಳಿಗೆ ಎಡೆ ಇಡುತ್ತಿರಲಿಲ್ಲ. ನಮ್ಮ ಪೂರ್ವಜರಿಗೆ ಕನಸಿನಲ್ಲಿ ಸತ್ತವರು ಕಾಣಿಸಿಕೊಂಡಾಗ, ಅವರಿಗೆ ಸತ್ತವರು ಇನ್ನಾವುದೋ ಲೋಕದಲ್ಲಿ ಇದ್ದಿರಬಹುದಾದ ನಂಬಿಕೆ ಹುಟ್ಟಿ ಅವರನ್ನು ತೃಪ್ತಿ ಪಡಿಸುವ ಇಂತಹ ಆಚರಣೆಗಳನ್ನು ಆರಂಭಿಸಿದರೆಂದು ತೋರುತ್ತದೆ!

        ಕನಸಿನ ಕುರಿತು ನನ್ನದೇ ಒಂದು ಅನುಭವವನ್ನು ಹೇಳುತ್ತೇನೆ. ಇಂತಹುದೇ ಅನುಭವಗಳು ನಿಮಗೂ ಹಲವು ಸಾರಿ ಆಗಿರಬಹುದು. ಕಳೆದ ಸೆಮಿಸ್ಟರ್‌ನ ಪರೀಕ್ಷೆಗಳಿಗೆ ತಯಾರಾಗುತ್ತಿದ್ದಾಗ ಪ್ರತೀ ದಿನವೂ ಬೆಳಿಗ್ಗೆ 5:30ಕ್ಕೆ alarm ಇಡುತ್ತಿದ್ದೆ. ಆದರೆ ಪ್ರತೀ ಬೆಳಿಗ್ಗೆಯೂ ಅಲಾರ್ಮ್ ಕೂಗುವ ಮುಂಚೆಯೇ, ಸರಿಯಾಗಿ 5:25ಕ್ಕೆ ಕನಸೊಂದು ಒಡೆದು ಯಾರೋ ತಟ್ಟಿ ಎಬ್ಬಿಸಿದ ಹಾಗೆ ಎಚ್ಚರವಾಗುತ್ತಿತ್ತು. ಒಂದು ವಾರ ಕಾಲ ಹೀಗೆಯೇ ಆಯಿತು. ಒಂದು ದಿನವಾದರೂ 5:24ಕ್ಕೋ ಅಥವಾ 5:26ಕ್ಕೋ ಎಚ್ಚರವಾಗಲಿಲ್ಲ. ಒಂದು ನಿಮಿಷವೂ ಹೆಚ್ಚು-ಕಡಿಮೆಯಾಗದಂತೆ ಶಾರ್ಪ್ 5:25ಕ್ಕೆ ಎಚ್ಚರಿಸುವ ಗಡಿಯಾರದಷ್ಟೇ precise ಆಗಿ ಕೆಲಸ ಮಾಡುವ mechanism ಒಂದನ್ನು ನಮ್ಮೊಳಗೇ ಸೃಷ್ಟಿಸಿರುವ, ನಮ್ಮನ್ನು ಎಚ್ಚರಿಸುವ, ಪೊರೆಯುವ, ಶಿಕ್ಷಿಸುವ, ಕೈ ಹಿಡಿದು ನಡೆಸುವ ಪ್ರಕೃತಿ ಎಂಬ ಮಹಾನ್ ಚೈತನ್ಯದ ಮುಂದೆ ನನ್ನಂತಹ ನಾಸ್ತಿಕನ ಅಹಂಕಾರ ಎಷ್ಟು ನಿಕೃಷ್ಟವಾದುದು ಎನ್ನಿಸಿ ನಾಚಿಕೆಯಾಗುತ್ತದೆ. 

        ಇನ್ನು ಕವಿತೆಯ ವಿಷಯಕ್ಕೆ ಮತ್ತೆ ಬರೋಣ. ಅರೆ ಎಚ್ಚರದಲ್ಲಿ ಹೊಳೆದಿದ್ದು ಖಂಡಿತಾ ಕವಿತೆಯಾಗಿರಲಿಕ್ಕಿಲ್ಲ. ಒಂದು ಕವಿತೆಯ ಸಾಫಲ್ಯವಿರುವುದು ಅದು ಭೂತ, ವರ್ತಮಾನ, ಭವಿಷ್ಯತ್ತುಗಳನ್ನು ಒಂದೇ ಬಿಂದುವಿನಲ್ಲಿ ಕೇಂದ್ರೀಕರಿಸಿದಾಗ ಎಂದಿದ್ದರು ಗೋಪಾಲಕೃಷ್ಣ ಅಡಿಗರು. ಯಾವತ್ತಿಗೂ ಎಚ್ಚರಗೊಳ್ಳದ ನಾಯಕರು, ರಾಜಕಾರಣಿಗಳು, ಮತಾಂಧರು, ಸರ್ವಾಧಿಕಾರಿಗಳಿಂದಾಗಿಯೇ ಜಗತ್ತಿನ ಇತಿಹಾಸ ರಕ್ತಸಿಕ್ತವಾಗಿದೆ. ಇನ್ನು ಕವಿ ಕೂಡಾ ಎಚ್ಚರವಿಲ್ಲದೇ ಬರೆದಿದ್ದರೆ ಇನ್ನೆಷ್ಟು ಅನಾಹುತಗಳಾಗುತ್ತಿತ್ತು ಯೋಚಿಸಿ. ಮನುಷ್ಯರನ್ನೂ ಯಂತ್ರಗಳಂತೆ ನೋಡುವ ಬೆಂಗಳೂರಿನಂತಹ ನಗರಗಳ ಜೀವನ ಶೈಲಿ, ಕವಿಯೊಬ್ಬನಿಗೆ ಇರಲೇಬೇಕಾದ ಒಳಗಣ್ಣನ್ನೂ, ಅಂತರ್ದೃಷ್ಠಿಯನ್ನೂ ಕಿತ್ತುಕೊಳ್ಳುತ್ತಿದೆ ಎನ್ನಿಸುತ್ತದೆ. "ಮುಗಿಲ ಮಾರಿಗೆ ರಾಗ ರತಿಯಾ ನಂಜ ಏರಿತ್ತಾ, ಆಗ ಸಂಜೆಯಾಗಿತ್ತಾ" ಎಂಬ ವರಕವಿಯ ಸಾಲುಗಳನ್ನು ಓದಿ ಇನ್ನಿಲ್ಲದಷ್ಟು ರೋಮಾಂಚನವಾಗಿ ಮುಗಿಲ ಮೋರೆಯನ್ನು ನೋಡಲು ಹೊರಬಂದರೆ ಸಾಲು ಸಾಲು ಬಹುಮಹಡಿ ಕಟ್ಟಡಗಳು, ಕರೆಂಟ್ ಕೇಬಲ್‌ಗಳ ಮಧ್ಯೆ ಕಂಡಿದ್ದೇ ಬೊಗಸೆಯಷ್ಟು ಅಗಲದ ಆಕಾಶ! ಬೇಂದ್ರೆಯವರು ಸಾಧನಕೇರಿಯಲ್ಲಲ್ಲದೆ ಇವತ್ತಿನ ಬೆಂಗಳೂರಿನಲ್ಲೇನಾದರೂ ಹುಟ್ಟಿದ್ದಿದ್ದರೆ ಇಂತಹ ಸಾಲುಗಳನ್ನು ಕೇಳುವ ಸೌಭಾಗ್ಯ ನಮಗೆ ಸಿಗುತ್ತಿತ್ತೇ? ಬ್ರಹ್ಮಾಂಡವನ್ನೇ ಒಂದು ಬೃಹತ್ ವೀಣೆಯನ್ನಾಗಿ ಕಲ್ಪಿಸಿ, ಪುರುಷನಾದ ನಾನು, ಪ್ರಕೃತಿಯಾದ ನೀನು, ನಮ್ಮಿಬ್ಬರ ಮಿಲನದಿಂದ ಹುಟ್ಟಿದ ಆನು, ಪರಾತತ್ವವಾದ ತಾನು ಅದರ ನಾಲ್ಕು ತಂತಿಗಳು ಎಂದು ಕರೆಯುವ ಕವಿಗೆ ಅದಿನ್ನೆಂತಹ ಜಾಗ್ರತೆಯ ಅವಸ್ಥೆಯಲ್ಲಿ ಇಂತಹುದೊಂದು ದರ್ಶನವಾಗಿರಬಹುದೆಂದು ನೆನೆದರೆ ಇನ್ನೂ ಮಂಪರಿನಲ್ಲಿಯೇ ಇದನ್ನೆಲ್ಲಾ ಬರೆಯುತ್ತಿರುವ ನನಗೆ ಕನಸಲ್ಲಿ ಹೊಳೆದ ಆ ಸಾಲುಗಳ ಮತ್ತು ಈ ಲೇಖನ ಎರಡರ ನಿರರ್ಥಕತೆ ಅರಿವಾಗಿ ಕುಬ್ಜನಾಗುತ್ತಿದ್ದೇನೆ.

(ಕೊನೆಯ ಹನಿ: ಹೊಲಿಗೆ ಯಂತ್ರ ಕಂಡುಹಿಡಿದ ಈಲಿಯಾಸ್ ಹೋವ್‌ಗೆ ಯಂತ್ರದ ಕೊನೆಯಲ್ಲಿರುವ ಸೂಜಿಗೆ ಎಲ್ಲಿ ರಂಧ್ರ ಕೊರೆಯಬೇಕೆಂಬ ಪ್ರಶ್ನೆ ಹಲವು ದಿನ ಸಮಸ್ಯೆಯಾಗಿ ಕಾಡುತ್ತಿತ್ತು. ಒಂದು ರಾತ್ರಿ ಹೋವ್ ತನ್ನ ಕನಸಿನಲ್ಲಿ ತುದಿಯಲ್ಲಿ ರಂಧ್ರವಿರುವ ದೊಡ್ಡ ಸೂಜಿಯೊಂದನ್ನು ಹೆಗಲ ಮೇಲೆ ಹೊತ್ತ ಕಾಡು ಮನುಷ್ಯನೊಬ್ಬ ತನ್ನನ್ನು ಅಟ್ಟಿಸಿಕೊಂಡುಬರುವುದನ್ನು ಕಾಣುತ್ತಾನೆ. ಎಚ್ಚರಗೊಂಡ ಹೋವ್ ತನ್ನ ಯಂತ್ರಕ್ಕೆ ಕನಸಲ್ಲಿ ಕಂಡಂತಹದೇ ಸೂಜಿಯನ್ನು ಬಳಸುತ್ತಾನೆ. ಅವತ್ತು ಆ ಕನಸೊಂದು ಬೀಳದೇ ಹೋಗಿದ್ದರೆ ಇವತ್ತಿಗೂ ಹೆಣ್ಣುಮಕ್ಕಳು ಯು ನೆಕ್ಕು, ವಿ ನೆಕ್ಕು ಹೀಗೆ A to Zವರೆಗಿನ 26 ನೆಕ್ಕುಗಳ ಸಲ್ವಾರ್ ಕಮೀಜ್‌ಗಳನ್ನು ತಾವೇ ಹೊಲಿದುಕೊಳ್ಳಬೇಕಾಗುತ್ತಿತ್ತು. ಇದನ್ನು ಓದಿದ ಹೆಣ್ಣುಮಕ್ಕಳಿಗೆ ಈಲಿಯಾಸ್ ಹೋವ್ ಮತ್ತು ಅವನ ಕನಸಲ್ಲಿ ಬಂದ ಕಾಡು ಮನುಷ್ಯನ ಉಪಕಾರ ಅರ್ಥವಾದರೆ ನಾಳೆಯೇ ನಿಮ್ಮ ಚೆಂದದ ಸೆಲ್ವಾರ್‌ಗಳನ್ನು ಹೊಲಿದು ಕೊಡುವ ಟೈಲರ್‌ಗೊಂದು  thanks ಹೇಳಿ. ಡೀಪ್ ನೆಕ್ಕು ಮತ್ತು ಚೋಟುದ್ದದ ಸ್ಕರ್ಟುಗಳನ್ನು ಹೊಲಿಯುವ ಟೈಲರ್‌ಗಳಿಗೆ ಸಮಸ್ತ ಪೋಲಿ ಗಂಡುಮಕ್ಕಳ ಪರವಾಗಿ ನಾನು thanks ಹೇಳುತ್ತೇನೆ. ಹಾಂ! ಹೇಳಲು ಮರೆತೆ. ಅಬ್ರಹಾಂ ಲಿಂಕನ್‌ಗೆ ತನ್ನ ಸಾವಿನ ಕುರಿತು ಮೂರು ದಿನ ಮುಂಚೆಯೇ ಮುನ್ಸೂಚನೆ ದೊರೆತಿತ್ತು. ಅದೂ ಕನಸಲ್ಲಿ!!)














2 comments:

sunaath said...

ವಾಹ್! ಕನಸೇ!!

ಚಿನ್ಮಯ ಭಟ್ said...

ಕನಸಿನ ಹಿಂದಿನ ಒಂದಿಷ್ಟು ಕುತೂಹಲಕಾರಿ ವಿಷಯಗಳನ್ನು ತಿಳಿಸಿದ್ದೀರಿ...
ವಂದನೆಗಳು ಸರ್...ಬರೀತಾ ಇರಿ...