Thursday 27 March 2014

ಮತ್ತೆ ಮತ್ತೆ ಕಾಡುವ ಆ ಮೂರು ಕಥೆಗಳು ( ಮೂರನೆಯ ಕಥೆಯ ಅರ್ಥ ಹೇಳಿದವರಿಗೆ ಮೊದಲನೆಯ ಕಥೆಯಲ್ಲಿ ಬರುವ ರಾಜನ ಅರ್ಧ ರಾಜ್ಯವನ್ನೂ ಮತ್ತು ಅವನ ಮಗಳನ್ನೂ ಬಹುಮಾನವನ್ನಾಗಿ ನೀಡಲಾಗುವುದು!)

ಕಥೆ ೧: ಖುಷಿ

ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೊಬ್ಬ ಪುಟ್ಟ ರಾಜಕುಮಾರ. ಎಲ್ಲಾ ಮಕ್ಕಳಂತೆಯೇ ಆಡುತ್ತಾ, ಹಾಡುತ್ತಾ, ಖುಷಿಯಿಂದ ಬಾಲ್ಯ ಕಳೆದ ರಾಜಕುಮಾರ, ಹದಿನಾರನೇ ವಯಸ್ಸಿಗೆ ಕಾಲಿಟ್ಟ ಕೂಡಲೇ ಮಂಕಾಗಿ ಹೋಗುತ್ತಾನೆ. ಆಟ, ಊಟ, ಬೇಟ, ಕಲೆ, ಸಂಗೀತ, ನಾಟಕ, ಸೋಮ ಯಾವುದರಲ್ಲಿಯೂ ರಾಜಕುಮಾರನಿಗೆ ಆಸಕ್ತಿ ಇಲ್ಲ. ಸದಾಕಾಲವೂ ನಿರ್ಲಿಪ್ತವಾಗಿ, ನಿರ್ವಿಕಾರವಾಗಿ, ಆಕಾಶವೇ ತಲೆಯ ಮೇಲೆ ಬಿದ್ದ ಹಾಗೆ ಆಡುತ್ತಿರುವ ಮಗನನ್ನು ನೋಡಿ ರಾಜ ಕೂಡಾ ಚಿಂತೆಗೆ ಬೀಳುತ್ತಾನೆ. ರಾಜಕುಮಾರನನ್ನು ಖುಷಿಗೊಳಿಸಲು ದೇಶವಿದೇಶಗಳಿಂದ ನರ್ತಕಿಯರು, ಕವಿಗಳು, ಸಂಗೀತಗಾರರು, ನಟರು, ವಿದೂಷಕರನ್ನು ಕರೆಸುತ್ತಾನೆ. ಸುರಸುಂದರಿಯರಾದ ಯುವತಿಯರನ್ನು ಕರೆಸಿ ಅವರೊಂದಿಗೆ ಜಲಕ್ರೀಡೆಯನ್ನು ಆಡಿಸುತ್ತಾನೆ! ಆದರೂ ರಾಜಕುಮಾರನ ಬೇಸರ ಮಾತ್ರ ಹೋಗುವುದಿಲ್ಲ. ಬೇಸತ್ತ ರಾಜ ಸೀದಾ ತನ್ನ ಮಗನ ಬಳಿಗೇ ಹೋಗಿ "ಮಗನೇ, ನಿನ್ನ ಚಿಂತೆಗೆ ಕಾರಣ ಏನು? ಮಗನನ್ನೇ ಸಂತೋಷಪಡಿಸಲಾಗದ ರಾಜ, ಇನ್ನು ಪ್ರಜೆಗಳನ್ನು ಹೇಗೆ ಸಂತೋಷಪಡಿಸುತ್ತಾನೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಈಗಲಾದರೂ ಹೇಳು ನಿನ್ನನ್ನು ಸಂತೋಷಪಡಿಸಲು ನಾನೇನು ಮಾಡಬೇಕು? ಬೇಕಿದ್ದರೆ ಒಂದು ಕೋಟಿ ಚಿನ್ನದ ನಾಣ್ಯಗಳು ಖರ್ಚಾದರೂ ಪರವಾಗಿಲ್ಲ. ನಿನ್ನ ಸಂತೋಷಕ್ಕಾಗಿ ನಾನು ಏನನ್ನು ಬೇಕಾದರೂ ತಂದುಕೊಡುತ್ತೇನೆ" ಎಂದನು.

          ಈ ಮಾತುಗಳನ್ನು ಕೇಳಿ ರಾಜಕುಮಾರ "ಅಪ್ಪಾ, ನನಗೂ ನನ್ನ ವಯಸ್ಸಿನ ಎಲ್ಲರಂತೆಯೇ ಖುಷಿಯಾಗಿರಬೇಕೆಂಬ ಆಸೆ. ಆದರೆ ನನ್ನ ದುಃಖಕ್ಕೆ ಕಾರಣವೇನೆಂದು ನನಗೇ ತಿಳಿದಿಲ್ಲ. ನೀವು ನನಗೋಸ್ಕರ ಏನನ್ನಾದರೂ ತಂದು ಕೊಡುವುದಿದ್ದರೆ ’ಖುಷಿ’ಯನ್ನು ತಂದುಕೊಡಿ" ಎಂದನು. ತಕ್ಷಣ ರಾಜ ತನ್ನ ಮಂತ್ರಿಗಳ, ಜ್ಯೋತಿಷಿಗಳ, ಚಿಂತಕರ ತುರ್ತು ಸಭೆ ಕರೆದು ತನ್ನ ಮಗನಿಗೆ ’ಖುಷಿ’ಯನ್ನು ಹುಡುಕಿ ತಂದು ಕೊಡುವಂತೆ ಸೂಚಿಸುತ್ತಾನೆ. ಒಬ್ಬೊಬ್ಬರು ಒಂದೊಂದು ಸಲಹೆ ಕೊಡುತ್ತಾರೆ. ಕೊನೆಯಲ್ಲಿ ಜ್ಯೋತಿಷಿಯೊಬ್ಬ ಕವಡೆ ಹಾಕಿ, ಎಣಿಸಿ, ಗುಣಿಸಿ "ರಾಜನ್, ನಿನ್ನ ಸಾಮ್ರಾಜ್ಯದಲ್ಲಿ ಯಾವುದೇ ರೀತಿಯ ಚಿಂತೆ, ದುಃಖಗಳಿಲ್ಲದೆ ಅತ್ಯಂತ ಸಂತೋಷವಾಗಿರುವ ಮನುಷ್ಯನನ್ನು ಹುಡುಕು. ಅವನು ಧರಿಸಿರುವ ಬಟ್ಟೆಯಲ್ಲಿ ’ಖುಷಿ’ ಇದೆ. ಆ ಬಟ್ಟೆಯನ್ನು ರಾಜಕುಮಾರ ಧರಿಸಿದರೆ ಬಟ್ಟೆಯಲ್ಲಿರುವ ’ಖುಷಿ’ ನಿಮ್ಮ ಮಗನೊಳಗೆ ಸೇರಿ ಆತ ಮೊದಲಿನಂತಾಗುತ್ತಾನೆ" ಎಂದು ಪರಿಹಾರ ಸೂಚಿಸಿದನು. ಜ್ಯೋತಿಷಿಯ ಮಾತಿಗೆ ತಲೆದೂಗಿದ ರಾಜ ತನ್ನ ಸಾಮ್ರಾಜ್ಯದಲ್ಲೇ ಅತ್ಯಂತ ಸಂತೋಷವಾಗಿರುವ ವ್ಯಕ್ತಿ ನಾಳೆಯೇ ತನ್ನ ಅರಮನೆಗೆ ಬಂದು ತಾನು ಉಟ್ಟಿರುವ ಬಟ್ಟೆಯನ್ನು ನೀಡಿದರೆ ಅವನಿಗೆ ತನ್ನ ಅರ್ಧ ರಾಜ್ಯವನ್ನೇ ಬಹುಮಾನವನ್ನಾಗಿ ನೀಡುತ್ತೇನೆ ಎಂದು ಎಲ್ಲಾ ಊರುಗಳಲ್ಲಿಯೂ ಡಂಗೂರ ಹೊಡೆಸಿದನು!

ಮಾರನೆಯ ದಿನ ಬೆಳಿಗ್ಗೆ ಅರಮನೆಯ ಮುಂದೆ ಜನಜಾತ್ರೆಯೇ ಸೇರುತ್ತದೆ. ರೈತರು, ಅಧಿಕಾರಿಗಳು, ಜಮೀನ್ದಾರರು, ಕಳ್ಳರು, ಕೊತ್ವಾಲರು ಹೀಗೇ ಲಕ್ಷಾಂತರ ಮಂದಿ ಬಂದು ಸೇರುತ್ತಾರೆ. ರಾಜ ಒಬ್ಬೊಬ್ಬರನ್ನೇ ಪರೀಕ್ಷೆ ಮಾಡುತ್ತಾ ಹೋಗುತ್ತಾನೆ. ಅರ್ಧ ರಾಜ್ಯದ ಆಸೆಗೆ ’ಖುಷಿ’ಯ ಮುಖವಾಡ ಹಾಕಿಕೊಂಡು ನಿಂತ ಒಬ್ಬೊಬ್ಬರ ಮನಸ್ಸಲ್ಲೂ ನೂರಾರು ಚಿಂತೆಗಳು ಗೂಡು ಕಟ್ಟಿರುತ್ತವೆ. ರೈತರಿಗೆ ಮಳೆಯ ಚಿಂತೆ, ಅಧಿಕಾರಿಗಳಿಗೆ ಲೋಕಾಯುಕ್ತರ ಚಿಂತೆ, ಜಮೀನ್ದಾರರಿಗೆ ಕಳ್ಳರ ಚಿಂತೆ, ಕಳ್ಳರಿಗೆ ಕೊತ್ವಾಲರ ಚಿಂತೆ, ಅಜ್ಜಿಗೆ ಅನ್ನದ ಚಿಂತೆಯಾದರೆ, ಮೊಮ್ಮಗಳಿಗೆ ಬಾಯ್‌ಫ್ರೆಂಡ್ ಚಿಂತೆ! ಹೀಗೆ ಇವರೆಲ್ಲರೂ ತನ್ನ ಮಗನ ಹಾಗೆಯೇ ದುಃಖಿತರಾಗಿರುವವರೇ ಎಂದು ತಿಳಿದು ರಾಜ ನಿರಾಶನಾಗುತ್ತಾನೆ.

ಹೀಗೆ ದಿನಗಳು ಕಳೆಯುತ್ತಿರಲು ಒಂದು ದಿನ ರಾಜ ತನ್ನ ಕುದುರೆಯನ್ನೇರಿ ಬೇಟೆಗೆ ಹೊರಡುತ್ತಾನೆ. ಮಧ್ಯಾಹ್ನದವರೆಗೆ ಅಲೆದರೂ ಯಾವ ಪ್ರಾಣಿಯೂ ಸಿಗದೆ ಬಿಸಿಲಲ್ಲಿ ಬಸವಳಿದ ಅವನಿಗೆ ದೂರದಲ್ಲೊಂದು ಕುರಿ ಹಿಂಡು ಮತ್ತು ಆ ಕುರಿಗಳನ್ನು ಮೇಯಿಸುತ್ತಿರುವ ಹುಡುಗನೊಬ್ಬ ಕಾಣುತ್ತಾನೆ. ತನ್ನಷ್ಟಕ್ಕೇ ಹಾಡುತ್ತಾ, ಕುಣಿಯುತ್ತಿರುವ ಹುಡುಗನನ್ನು ನೋಡಿದ ರಾಜನಿಗೆ ತನ್ನ ರಾಜ್ಯದಲ್ಲಿ ಚಿಂತೆಗಳೇ ಇಲ್ಲದೆ ಅತ್ಯಂತ ಸಂತೋಷವಾಗಿರುವ ವ್ಯಕ್ತಿ ಈತನೊಬ್ಬನೇ ಇರಬೇಕು ಎನ್ನಿಸುತ್ತದೆ. ದೂರದಿಂದಲೇ ಆತನಿಗೆ "ನನ್ನೊಂದಿಗೆ ಅರಮನೆಗೆ ಬಾ! ನಿನಗೆ ಅರ್ಧರಾಜ್ಯವನ್ನು ಕೊಡುತ್ತೇನೆ" ಎಂದು ಕರೆಯುತ್ತಾನೆ. ಇದನ್ನು ಕೇಳಿದ ಕುರಿ ಕಾಯುವ ಹುಡುಗ "ನಾನು ಕುರಿ ಮೇಯಿಸಿಕೊಂಡೇ ಖುಷಿಯಾಗಿದ್ದೇನೆ. ನಿನ್ನ ಅರ್ಧರಾಜ್ಯವನ್ನು ನೀನೆ ಇಟ್ಟುಕೋ" ಎನ್ನುತ್ತಾನೆ. ಈಗ ರಾಜನಿಗೆ ಈತನೇ ಅತ್ಯಂತ ಸಂತೋಷವಾಗಿರುವ ವ್ಯಕ್ತಿ  ಎನ್ನುವುದು ಯಾವ ಅನುಮಾನವೂ ಇಲ್ಲದೇ ಧೃಡವಾಗುತ್ತದೆ. "ಹೋಗಲಿ, ನಿನ್ನ ಬಟ್ಟೆಯನ್ನಾದರೂ ಬಿಚ್ಚಿಕೊಡು" ಎಂದು ರಾಜ ಬೇಡಿಕೊಳ್ಳುತ್ತಾನೆ. ಅದಕ್ಕೆ ಕುರಿ ಮೇಯಿಸುವವನು " ಬೇಕಿದ್ದರೆ ನೀನೇ ಬಂದು ಬಿಚ್ಚಿಕೊಂಡು ಹೋಗು" ಎಂದು ಹೇಳಿ ತನ್ನ ಹಾಡು ಮತ್ತು ಕುಣಿತವನ್ನು ಮುಂದುವರಿಸುತ್ತಾನೆ. ಸರಿ ಎಂದ ರಾಜ ಕುದುರೆಯಿಂದಿಳಿದು ಆತನ ಹತ್ತಿರಕ್ಕೆ ಹೋಗಿ ಅವನ ಬಟ್ಟೆಗೆ ಕೈ ಹಾಕುತ್ತಾನೆ.

ಕೈ ಹಾಕಿದ ರಾಜನಿಗೆ ಅಚ್ಚರಿ ಕಾದಿರುತ್ತದೆ. ಆ ಕುರಿ ಮೇಯಿಸುವ ಹುಡುಗ ಬಟ್ಟೆಯನ್ನೇ ಹಾಕಿರುವುದಿಲ್ಲ!!

(ಡೆನ್ಮಾರ್ಕ್‌ನ ಪ್ರಸಿದ್ಧ ಜಾನಪದ ಕಥೆ)

ಕಥೆ ೨: ಕೌಪೀನ(ಲಂಗೋಟಿ)

ಒಂದು ಹಳ್ಳಿ. ಆ ಹಳ್ಳಿಯ ಅಂಚಿನಲ್ಲಿ ದಟ್ಟವಾದ ಕಾಡು. ಆ ಕಾಡಿನ ಮಧ್ಯೆ ಹೊಳೆಯ ದಂಡೆಯ ಮೇಲೆ ಜೋಪಡಿಯೊಂದನ್ನು ನಿರ್ಮಿಸಿಕೊಂಡು ಸನ್ಯಾಸಿಯೊಬ್ಬ ಧ್ಯಾನ ತಪಸ್ಸುಗಳಲ್ಲಿ ಕಾಲ ಕಳೆಯುತ್ತಿರುತ್ತಾನೆ. ಒಂದು ಲಂಗೋಟಿ ಬಿಟ್ಟು ಬೇರೇನನ್ನೂ ಧರಿಸದ ಆತ ಪ್ರತೀದಿನ ಹಳ್ಳಿಯಲ್ಲಿ ಭಿಕ್ಷೆ ಬೇಡಿ ತಂದ ಆಹಾರವನ್ನು ಮಾತ್ರ ತಿನ್ನುತ್ತಿರುತ್ತಾನೆ. ಒಂದು ದಿನ ಅವನು ನದಿಗೆ ಸ್ನಾನ ಮಾಡಲು ಹೋದಾಗ ಅವನ ಲಂಗೋಟಿಯನ್ನು ಇಲಿಗಳು ಕಚ್ಚಿ ಹರಿದು ಹಾಕುತ್ತವೆ. ಆವತ್ತು ಹಳ್ಳಿಗೆ ಭಿಕ್ಷೆಗೆ ಹೋದ ಸನ್ಯಾಸಿ ಅನ್ನದ ಜೊತೆ ಒಂದು ಹೊಸ ಲಂಗೋಟಿಯನ್ನೂ ಭಿಕ್ಷೆ ಬೇಡಿ ತರುತ್ತಾನೆ. ಆದರೆ ಎರಡೇ ದಿನದಲ್ಲಿ ಈ ಹೊಸ ಲಂಗೋಟಿಯನ್ನೂ ಇಲಿಗಳು ಕಚ್ಚಿ ಹರಿದು ಹಾಕುತ್ತವೆ. ಸನ್ಯಾಸಿ ಹಳ್ಳಿಗೆ ಹೋಗಿ ಮತ್ತೊಂದು ಲಂಗೋಟಿ ಭಿಕ್ಷೆ ಕೇಳುತ್ತಾನೆ. ಇದನ್ನು ನೋಡಿದ ಹಳ್ಳಿಯವನೊಬ್ಬ "ಹೀಗೆ ಪದೇ ಪದೇ ಲಂಗೋಟಿಯನ್ನು ಭಿಕ್ಷೆ ಬೇಡುವ ಬದಲು ಬೆಕ್ಕೊಂದನ್ನು ಸಾಕಿಬಿಡಿ. ಇಲಿಗಳ ತೊಂದರೆ ತಪ್ಪುತ್ತದೆ. ನಿಮ್ಮ ಲಂಗೋಟಿಯೂ ಉಳಿಯುತ್ತದೆ" ಎಂದು ಸಲಹೆ ನೀಡುತ್ತಾನೆ. ಸನ್ಯಾಸಿಗೂ ಈ ಸಲಹೆ ಇಷ್ಟವಾಗಿ ಬೆಕ್ಕೊಂದನ್ನು ಸಾಕುತ್ತಾನೆ. ಈಗ ಇಲಿಗಳ ಕಾಟವೇನೋ ನಿಂತುಹೋಯಿತು. ಆದರೆ ಸನ್ಯಾಸಿಗೆ ತನ್ನ ಆಹಾರದ ಜೊತೆಗೆ ಬೆಕ್ಕಿಗೆ ಕುಡಿಸಲು ಹಾಲನ್ನೂ ಭಿಕ್ಷೆ ಬೇಡುವ ಪರಿಸ್ಥಿತಿ ಒದಗುತ್ತದೆ.

ಹೀಗೆ ಒಂದಿಷ್ಟು ದಿನಗಳು ಕಳೆದ ಮೇಲೆ ಅದೇ ಹಳ್ಳಿಯವನು ಮತ್ತೆ ಸನ್ಯಾಸಿಯ ಬಳಿ ಬಂದು "ಹೀಗೆ ದಿನವೂ ಹಾಲನ್ನು ಭಿಕ್ಷೆ ಬೇಡುವ ಬದಲು ಹಸುವೊಂದನ್ನು ಸಾಕಿಬಿಡಿ! ನಿಮ್ಮ ಹಾಲಿನ ಸಮಸ್ಯೆ ನೀಗುತ್ತದೆ" ಎಂದು ಉಪಾಯವೊಂದನ್ನು ಹೇಳುತ್ತಾನೆ. ಹಳ್ಳಿಯವನ ಮಾತಿಗೆ ತಲೆದೂಗಿದ ಸನ್ಯಾಸಿ ಹಸುವನ್ನು ಸಾಕುತ್ತಾನೆ. ಈಗ ಹಾಲಿನ ಸಮಸ್ಯೆಯೇನೋ ತೀರಿತು. ಆದರೆ ಹಸುವಿಗೆ ತಿನ್ನಿಸಲು ಹುಲ್ಲು ಎಲ್ಲಿಂದ ಬರಬೇಕು ಸನ್ಯಾಸಿಗೆ? ಹಳ್ಳಿಗೆ ತೆರಳಿ ಹುಲ್ಲನ್ನು ಭಿಕ್ಷೆ ಕೇಳುತ್ತಾನೆ. ಒಂದು ವಾರ ಕಳೆಯುವಷ್ಟರಲ್ಲಿ ಮತ್ತೆ ಹಳ್ಳಿಯವನು ಸಿಕ್ಕಿ "ಹೀಗೆ ಪ್ರತಿದಿನವೂ ಹುಲ್ಲನ್ನು ಬೇಡುವ ಬದಲು, ನಿಮ್ಮ ಗುಡಿಸಲಿನ ಸುತ್ತಲಿನ ಬಯಲಿನಲ್ಲಿ ಭತ್ತ ಬೆಳೆದುಬಿಡಿ! ಹುಲ್ಲನ್ನು ಹಸುವಿಗೆ ಹಾಕಿ ಭತ್ತವನ್ನು ನೀವು ಉಪಯೋಗಿಸಿದರೆ ನಿಮ್ಮ ಭಿಕ್ಷೆಯ ಸಮಸ್ಯೆಯೇ ನೀಗುತ್ತದೆ" ಎಂದನು! ಹಳ್ಳಿಯವನ ಮಾತು ಕೇಳಿ ಖುಷಿಯಾದ ಸನ್ಯಾಸಿ ಮೊದಲು ಸಣ್ಣ ಜಾಗದಲ್ಲಿ ಭತ್ತ ಬೆಳೆಯುತ್ತಾನೆ. ವರ್ಷವರ್ಷವೂ ಭತ್ತದ ಫಸಲು ಹೆಚ್ಚುತ್ತಾ ಹೋಗಿ, ಭತ್ತದ ಪೈರು ಗುಡಿಸಲಿನ ಸುತ್ತಲಿನ ಇಡೀ ಬಯಲನ್ನೇ ಹಬ್ಬಿ ನಿಂತು ಕೆಲವೇ ವರ್ಷಗಳಲ್ಲಿ ಆತ ದೊಡ್ಡ ಜಮೀನ್ದಾರನೇ ಆಗಿಹೋಗುತ್ತಾನೆ! ಈಗ ನೂರಾರು ಎಕರೆ ಜಮೀನಿನ ಕೆಲಸ ಮತ್ತು ಮನೆ ಕೆಲಸಗಳ ಜವಾಬ್ದಾರಿ ಎರಡನ್ನೂ ನಿಭಾಯಿಸುವುದು ಆತನಿಗೆ  ಕಷ್ಟವಾಗುತ್ತದೆ. ಸನ್ಯಾಸಿಯ ಕಷ್ಟ ನೋಡಿದ ಹಳ್ಳಿಯವನು "ಒಂದು ಮದುವೆಯಾಗಿಬಿಡಿ. ನೀವು ಜಮೀನಿನ ಕೆಲಸ ನೋಡಿಕೊಂಡರೆ, ಹೆಂಡತಿ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಾಳೆ. ನಿಮ್ಮ ಹೊರೆ ಕಡಿಮೆಯಾಗುತ್ತದೆ" ಎಂದು ಸಲಹೆ ನೀಡಿದನು. ಈ ಮಾತು ಸನ್ಯಾಸಿಗೂ ಹಿತವೆನಿಸಿ ಶೀಘ್ರದಲ್ಲಿಯೇ ಹೆಣ್ಣೊಂದನ್ನು ಹುಡುಕಿ ಮದುವೆಯಾಗುತ್ತಾನೆ. ಸನ್ಯಾಸಿಯಾಗಿದ್ದವನು ಸಂಸಾರಿಯಾಗಿ ಹೆಂಡತಿ, ಮಕ್ಕಳು, ಬಂಧು, ಬಳಗದೊಡನೆ ಸುಖ(?)ವಾಗಿ ಬಾಳುತ್ತಾನೆ!

(ಆಚಾರ್ಯ ರಜನೀಶ್ ಹೇಳಿದ ಕಥೆ)

ಕಥೆ ೩: ಜ್ಞಾನ

ಗುರು ಶಿಷ್ಯರಿಬ್ಬರ ನಡುವೆ ಮಾತುಕತೆ ನಡೆಯುತ್ತಿದೆ.

ಶಿಷ್ಯ ಕೇಳುತ್ತಾನೆ: "ಗುರುಗಳೇ, ಕಣ್ಣು ಎಂದರೆ ಏನು?"

ಗುರು: "ಕಣ್ಣು ಎಂದರೆ ಕಣ್ಣಿನ ಕಣ್ಣು!"

ಶಿಷ್ಯ: "ಕಿವಿ ಎಂದರೆ ಏನು?"

ಗುರು: "ಕಿವಿ ಎಂದರೆ ಕಿವಿಯ ಕಿವಿ!"

ಶಿಷ್ಯ: "ನಾಲಗೆ ಎಂದರೆ ಏನು?"

ಗುರು: "ನಾಲಗೆ ಎಂದರೆ ನಾಲಗೆಯ ನಾಲಗೆ!"

(ಉಪನಿಷತ್ತಿನ ಒಂದು ಕಥೆ)

ಈ ಮೂರೂ ಕಥೆಗಳನ್ನು ಓದಿದರೆ ನಿಮಗೆ ನಗು ಬರಬಹುದು. ಆದರೆ ಈ ಕಥೆಗಳ ಹಿಂದೆ ಆಳವಾದ ಫಿಲಾಸಫಿ ಇದೆ. ಮೊದಲನೆಯ ಕಥೆಯಲ್ಲಿ ಬರುವ ಕುರಿ ಮೇಯಿಸುವವನಿಗೂ, ಶ್ರವಣಬೆಳಗೊಳದ ಗೊಮ್ಮಟೇಶ್ವರನಿಗೂ, ಗೋಪಾಲಕೃಷ್ಣ ಅಡಿಗರ "ಬೆತ್ತಲಾಗದೇ ಬಯಲು ಸಿಕ್ಕದಿಲ್ಲಿ" ಎಂಬ ಸಾಲುಗಳಿಗೂ ಏನಾದರೂ ಸಂಬಂಧವಿರಬಹುದೇ ಯೋಚಿಸಿ. ಎರಡನೆಯ ಕಥೆಯನ್ನು ನಮ್ಮ ಬದುಕಿಗೆ ಅನ್ವಯಿಸಿ ನೋಡಿದರೆ ಇಲ್ಲಿ ಬರುವ ಸನ್ಯಾಸಿ, ಹಳ್ಳಿಯವನು, ಲಂಗೋಟಿ, ಇಲಿಗಳು ಏನನ್ನು ಸಂಕೇತಿಸುತ್ತವೆ ತಿಳಿಯಿತೇ? ಮೊದಲೆರಡು ಕಥೆಗಳಿಗಿಂತಲೂ ಅರ್ಥಪೂರ್ಣವಾದುದು ಮೂರನೆಯ ಕಥೆ. ಬಹುಶಃ ಜಗತ್ತಿನ ಮೊದಲ ನ್ಯಾನೋ ಕಥೆ ಇದೇ ಇರಬಹುದು. ಮೂರನೆಯ ಕಥೆಯ ಅರ್ಥ ಹೇಳಿದವರಿಗೆ ಮೊದಲನೆಯ ಕಥೆಯಲ್ಲಿ ಬರುವ ರಾಜನ ಅರ್ಧ ರಾಜ್ಯವನ್ನೂ ಮತ್ತು ಅವನ ಮಗಳನ್ನೂ ಬಹುಮಾನವನ್ನಾಗಿ ನೀಡಲಾಗುವುದು! ಪ್ರಯತ್ನಿಸಿ ನೋಡಿ!!




ಹೈಕುಗಳು

(A HAIKU is a Japanese form of poetry with exactly 17 alphabets and three lines, first line being 5 syllables, second line being 7 syllables and third line being 5 syllables.)





ಹೂ ತುಳಿದ ಪಾ-
ದಗಳ ಚುಚ್ಚಿದ್ದು ಪ
  -ರಾಗದ ಹುಡಿ! 

 *
ಮುತ್ತುಗಳ ಭಾ-
ರ ಕಣ್ಣ ಮೇಲಿಳಿಸಿ
ತುಟಿ ನಿರಾಳ!

*
ನಿನ್ನ ಎದೆಯೊ-
ಳಗಿನ ಬೆಂಕಿ ನನ್ನ-
ನ್ನಷ್ಟೇ ಸುಡಲಿ!

  *
ರೆಕ್ಕೆ ಮುರಿದ
ಹಕ್ಕಿಯ ಆಸೆಗಳು
ನೀಲಿ ಆಕಾಶ!

  *
ನನ್ನ ಮೇಲಾಣೆ
ನಿನ್ನ ಹೃದಯ ಕದ್ದ-
ವಳು ನಾ’ನಲ್ಲ’!

  *
ಭೂಮಿ ಬೆತ್ತಲು,
ಮುಗಿಲಿನ ಕತ್ತಲು
ಸುರಿದ ಸೋನೆ!

  *
ನೀನು ಬಂದಾಗ
ಕಣ್ಮುಚ್ಚಿದೆ, ನಾನಿನ್ನೂ
ಸತ್ತಿರಲಿಲ್ಲ!

  *
ದೇವರು ನನ್ನ
ನಂಬಿರಲಿಲ್ಲ ಈಗ
ನಾನೂ ನಾಸ್ತಿಕ!

  *
ನಿನ್ನ ಕಣ್ಣುಗ-
ಳ ಪರಿಮಳ ನನ-
ಗಷ್ಟೇ ಕೇಳಲಿ!

*

ನೀ ಬರಲು ನ- 
ನ್ನ ಕನಸೊಳಗೆ ನಿ-

ದ್ದೆಗೂ ಎಚ್ಚರ!


*
ಜೇನು ತೊಯ್ದ ನಿ-
ನ್ನ ತುಟಿಗಳ ಹಿಂದೆ
ನಾಗರ ವಿಷ!

*