ನಿನ್ನ ಕಣ್ಣುಗಳ ಪರಿಮಳವು ನನಗಷ್ಟೇ ಕೇಳಲಿ,
ನಿನ್ನ ಕನಸುಗಳ ಪರಿಚಯವು ನನಗಷ್ಟೇ ಆಗಲಿ,
ನೀ ನನ್ನನ್ನೇ ಹುಡುಕುವಾಗ ನಾ ಕಳೆದು ಹೋಗಲಿ,
ಮತ್ತೆ ನಾ ಸಿಗುವಷ್ಟರಲಿ ಪ್ರೀತಿ ಉಂಟಾಗಲಿ!
ಬರೀ ಮಾತಲ್ಲೇ ಹೊರಡಿಸಬಲ್ಲೆ,
ಹುಸಿ ಭರವಸೆಗಳ ಉತ್ಸವ;
ಆದರೂ ನೀ ನಂಬಲೇಬೇಕು,
ಎಷ್ಟೆಂದರೂ ನಾ ನಿನ್ನವ!
ನಾಳೆಗಳ ಚಿಂತೆ ಇನ್ನೇಕೆ,
ನಿನ್ನದೇ ಈ ಸಮಸ್ತ ಆಸ್ತಿ;
ಈ ಜೋಪಡಿ, ಆ ಅಂಗಳ ಮತ್ತು
ಚೆಲ್ಲುವ ಬೆಳದಿಂಗಳು ಪೂರ್ತಿ!
ಹಗಲು ನಿನ್ನ ಪ್ರೀತಿಸಿ ದಣಿದು,
ರಾತ್ರಿ ಮತ್ತೆ ಬರುವೆ ನಿನ್ನದೇ ಬಳಿಗೆ;
ಮುನಿಸು ತೋರಿ ಕೊಲ್ಲದೆ ನನ್ನ,
ಸೆಳುದುಕೋ ನಿನ್ನ ಚಾದರದೊಳಗೆ!
4 comments:
:) :)
ಸುಂದರ ಕವಿತೆ.
ಯಾರ ಪ್ರಭಾವವೂ ನಿಮ್ಮ ಬರಹಗಳಲ್ಲಿ ನನಗಂತೂ ಕಾಣಲಿಲ್ಲ.
ಹಿರಿಯರಾದ ಸುನಾಥ್ ಕಾಕಾ ಕೂಡ ನಿಮ್ಮ ಬ್ಲಾಗನ್ನ ಬಹುವಾಗಿ ಮೆಚ್ಚಿಕೊಂಡರು.
ನೀವು ಬರೆದ ಕಥೆಗಳು , ಬರಹಗಳು ಮತ್ತು ಕವಿತೆಗಳು ನೆನಪಿನಲ್ಲುಳಿಯುತ್ತವೆ.
ಬರೆಯುತ್ತಿರಿ . ಬ್ಲಾಗ್ ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದಗಳು
ಸೊಗಸಾದ ಕವನ.
Post a Comment