(ಈ ಕವಿತೆಯೊಂದಿಗೆ 2014ರವರೆಗೆ ಬ್ಲಾಗಿಂಗ್ ಕೆಲಸಕ್ಕೆ ರಜೆ ಹಾಕುತ್ತಿದ್ದೇನೆ, ನಮಸ್ಕಾರ!)
ನೀನು ನಾನಾಗು,
ನನ್ನ ದೇಹದ ಆತ್ಮವಾಗು,
ನನ್ನ ಆತ್ಮದ ದೇಹವಾಗು,
ನನ್ನ ಒಬ್ಬಂಟಿ ರಾತ್ರಿಗಳನ್ನು ನಿನ್ನ ಮುಂದೆ ತಂದು ಹರಡುತ್ತೇನೆ,
ಒಂದೊಂದಕ್ಕೂ ನಿನ್ನ ನಗುವಿನ ದೀಪ ಹಚ್ಚಿ ಸಡಗರಗೊಳಿಸು!
ನನ್ನ ಆಸೆಗಳ ಪೂರೈಸುತ್ತಲೇ ಆಸೆಗಳ
ಗೆಲ್ಲುವುದನ್ನು ಕಲಿಸು..
ನಿನ್ನ ಪ್ರೀತಿಯ ಮುಂದೆ ನನ್ನ ಅಹಂಕಾರ ಎಷ್ಟು ನಿಕೃಷ್ಠವಾದುದೆಂದು,
ನನ್ನ ಕಿವಿ ಹಿಂಡಿ ತಿಳಿಸು..
ಕೆನ್ನೆ ಒದ್ದೆಯಾಗುವ ಮುಂಚೆಯೇ ನಿನ್ನ ಕಣ್ಣೀರನ್ನೆಲ್ಲಾ
ನನ್ನ ಬೊಗಸೆಯೊಳಗೆ ಇಳಿಸು!
ನಿನ್ನೊಳಗಿನ ತಾಯ್ತನವನ್ನು ನನಗೂ ಸ್ವಲ್ಪ ಕಲಿಸು!
ನಿನ್ನ ಅಷ್ಟೂ ಕನಸುಗಳ copyright ನನಗೆ ಕೊಡು!
ನಿನಗೋಸ್ಕರ ಸಾವಿರ ಹಾಡುಗಳನ್ನು ಹಾಡುತ್ತೇನೆ,
ಹಾಡು ಇಷ್ಟವಾಗದಿದ್ದರೂ ನನಗೋಸ್ಕರ ನಕ್ಕುಬಿಡು..
ಹಗಲು ಹದಿನಾರು ಸಾವಿರ ಮುತ್ತುಗಳನ್ನು ಸಾಲ ಕೊಡುತ್ತೇನೆ,
ಆ ರಾತ್ರಿಯೇ ಬಡ್ಡಿ ಸಮೇತ ತೀರಿಸಿಬಿಡು!
ಒಂದು ಕ್ಷಣವೂ ನಿನ್ನಿಂದ ದೂರವಾಗದಂತೆ
ನಿನ್ನ ತೋಳುಗಳಲ್ಲಿ ಬಂಧಿಸು!
ನನ್ನ ಬೆತ್ತಲೆ ಎದೆಯ ಮೇಲೆ ನಿನ್ನ
ಪಾದಗಳ ಗುರುತು ಮೂಡಿಸು..
ತೊಡೆಯ ಮೇಲೆ ನನ್ನ ಮಲಗಿಸಿಕೊಂಡು
ನಿನ್ನ ಸ್ತನಗಳ ಪ್ರೀತಿಯನ್ನು ಕುಡಿಸು..
ನನ್ನ ಕೋಪ ಮಂಜುಗಡ್ಡೆಯಂತೆ ಗಟ್ಟಿಯಾದಂತೆಲ್ಲಾ,
ನಿನ್ನ ಅಪ್ಪುಗೆಯ ಬಿಸಿಯಿಂದ ಕರಗಿಸು..
ಜಗತ್ತಲ್ಲಿ ಬರೀ ಮೂರು ಜನರನ್ನು ಪ್ರೀತಿಸು,
ನನ್ನನ್ನು, ನನ್ನನ್ನು ಮತ್ತು ನನ್ನನ್ನು ಮಾತ್ರ!!
3 comments:
ಮೊದಲು ರಜೆಯನ್ನು ವಾಪಸ್ಸು ತೆಗೆದುಕೊಳ್ಳಿ. ನಾವು ಹಾಗೆಲ್ಲಾ ಬ್ಲಾಗಿಗೆ ರಜೆ ಕೊಡುವುದೇ ಇಲ್ಲ.
ಇಡೀ ಕವನದಲ್ಲಿ ನಮಗೆ ಸೆಳೆಯುವುದು ಅಮಿತ ಪ್ರೇಮೋತ್ಕಟತೆಯ ಭಾವ. ಒಪ್ಪಿಸಿಕೊಳ್ಳುವ ಮತ್ತು ಪಡೆದುಕೊಳ್ಳುವ ಹಪಹಪಿಯೂ ಚೆನ್ನಾಗಿಯೇ ಒಡಮೂಡಿದೆ.
ಬದರಿನಾಥರ ಭಾವನೆಯೇ ನನ್ನದೂ ಆಗಿದೆ.
sunaath sir mattu badari sir, nanna parikshegalu mugiyuvavarege rajeyannu anugrahisi:-)
Post a Comment