೧
ಹೇಳು ನೀನೆಲ್ಲಿರುವೆ?
ಅಂಗಳದಲ್ಲಿ ನಿಂತ ಕಡುಗೆಂಪು ಸ್ಕೂಟಿ,
ಅದರ ಕಾಲಿನ ತುದಿಯಲ್ಲಿ ಮಲಗಿರುವ
-ಸೇವಂತಿಗೆ
ಸಪೋಟ ಮರದ ಕಿಟಕಿಗಳಿಂದ ಹಾಯ್ದು-
ಬೆನ್ನು ತಬ್ಬಿರುವ ಇಳಿಬಿಸಿಲು.
೨
ಒಳಗೆ ಕಾಲಿಟ್ಟರೆ,
ಗೋಡೆಯ ಮೇಲೊಂದು ಭಾವ ತುಂಬಿದ ಚಿತ್ರ,
ಬಿಳಿ ಫ್ರಾಕು, ಕೆಂಪು ರಿಬ್ಬನ್ನು,
ಕೆನ್ನೆಗಳ ಗುಲಾಬಿ, ಕಣ್ಣುಗಳು ನಕ್ಷತ್ರ..
ಈಗ ನೋಡಬೆಕು ನಿನ್ನ; ಫ್ರಾಕು ಎತ್ತರಿಸಿ,
ರಿಬ್ಬನ್ನು ಕತ್ತರಿಸಿ, ಗುಲಾಬಿ ಪಕಳೆಗಳು ಅರಳಿ ನಿಲ್ಲಬೇಕು;
ಮುದ್ದಾಗಿ ನಗಬೇಕು,
ನಕ್ಷತ್ರ ನುಂಗಿರುವ ಕಪ್ಪುರಂಧ್ರ!
ಟೀವಿಯಲಿ ಮೊರೆಯುತಿರುವ ಮಧ್ಯಾಹ್ನದ ಹೊಸರುಚಿಗೆ,
೩
ಕಿಚನ್‍ನೊಳಕ್ಕೆ,
ಕುಕ್ಕರಿನಿಂದ ಹೊರಟ ಶಿಳ್ಳೆ ಸದ್ದು,
ಸ್ಟವ್ ಮೇಲೆ ಕುದಿಯುತ್ತಿರುವ ಕಾಫಿನೊರೆ,
ಡೈನಿಂಗ್ ಟೇಬಲಿನಲ್ಲಿ ಸಕ್ಕರೆಯ ಹರಳು ಹೊತ್ತು,
ಓಡುತ್ತಿರುವ ಇರುವೆ...
ಮತ್ತೆಷ್ಟು ಹುಡುಕಬೇಕು,
ಹೇಳು ನೀನೆಲ್ಲಿರುವೆ?
೪
ನಿನ್ನ ರೂಮಿನೊಳಗೆ,
ನಿಲುವುಗನ್ನಡಿಯಲ್ಲಿ ಈಗಷ್ಟೇ ಮಸುಕಾಗುತ್ತಿರುವ,
ನಿನ್ನ ತಾಜಾ ನಿಲುವುಗಳು...
ಮುಚ್ಚಳ ತೆರೆದಿಟ್ಟ ನೇಲ್‍ಪಾಲಿಷ್,
ಉದುರಿದ ಕೂದಲಿನ ಎಳೆಗಳಲ್ಲಿ,
ಬಂಧಿಯಾಗಿರುವ ಒದ್ದೆ ಬಾಚಣಿಕೆ.
ಕನ್ನಡಿಯ ಕೆನ್ನೆಗೆ ಮುತ್ತಿಕ್ಕಿರುವ-
ಹಣೆಯ ಬಿಂದಿ.
ನೀ ಬಿಚ್ಚಿಡುವ ಹೊತ್ತಲ್ಲಿ,
ಹುಚ್ಚುಚ್ಚು ರಾಗಗಳ ಸ್ಫುರಿಸಿ;
ನಿಃಶಬ್ಧವನೇ ಹಾಡುತಿವೆ ನಿನ್ನ ನೂಪುರಗಳು,
ಈಗಷ್ಟೇ ಕೊನೆಯ ಆಲಾಪ ಮುಗಿಸಿ!
ನಿನ್ನ ಮೌನದಂತೆಯೇ ಅವಕ್ಕೂ ಇಲ್ಲ,
ಯಾರದೂ ಪರಿವೆ!
ಮತ್ತೆಷ್ಟು ಹುಡುಕಬೇಕು,
ಹೇಳು ನೀನೆಲ್ಲಿರುವೆ?
೫
ಬಚ್ಚಲಿನ ಒಳ ಹೊಕ್ಕರೆ,
ಅದು ಬೇರೆಯದೇ ನಿಹಾರಿಕೆ!
ಸೋಪು ಷಾಂಪುಗಳು ಬೆರೆತ ಹೊಸತು
-ವಾತಾವರಣ.
ಗೋಡೆಯನು ಅಪ್ಪಿರುವ ಹಬೆಯ ಪರದೆಯ ಸೀಳಿ,
ಬೆರಳ ತುದಿಯಲ್ಲಿ ಕೆತ್ತಿರುವ ನಿನ್ನ ಹೆಸರು.
೬
ಹೊರಗೆ ಕಾಲಿಟ್ಟರೆ ನೈಲಾನ್ ದಾರದ ಮೇಲೆ,
ಹೂಬಿಸಿಲಿಗೆ ಮೈ ಬೆತ್ತಲಾದ ನೀಲಿ ಟವೆಲ್ಲಿನ
ಘಮ, ಅದರ ಅಂಚುಗಳಿಂದ
ತೊಟ್ಟಿಕ್ಕುತ್ತಿದೆ ನಿನ್ನ ಮೈ ತೋಯ್ದ ಅಮೃತ!
ತುಂಟಾಟ ಸಾಕಿನ್ನು ಕೊನೆಯ ಬಾರಿಗೆ ಕರೆವೆ,
ಮತ್ತೆಷ್ಟು ಹುಡುಕಬೇಕು,
ಹೇಳು ನೀನೆಲ್ಲಿರುವೆ?
೭
ಬಚ್ಚಲುಮನೆ ದಾಟಿ, ಹಿತ್ತಿಲನು ಬಳಸಿ,
ಮತ್ತೆ ಅಂಗಳಕ್ಕೆ ಬಂದರೆ,
ಅಲ್ಲಿ ಅಂಗಳವೂ ಇಲ್ಲ, ಸ್ಕೂಟಿಯೂ ಇಲ್ಲ,
ಮನೆಯಿದ್ದ ಜಾಗದಲಿ ಖಾಲಿ ಬಯಲು,
ನಿಂತ ಎದೆ, ನಿಟ್ಟುಸಿರು;
ಕೊನೆಯತ್ತ ಸಾಗಿರುವ ಸಂಜೆ ಮುಗಿಲು!
04/03/2012
Chikmagalur
No comments:
Post a Comment